ನ್ಯೂಯಾರ್ಕ್: ಕಳೆದ ವರ್ಷ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ವೇಳೆ ಆರ್ಜೆಂಟೀನಾದ ಸೂಪರ್‌ಸ್ಟಾರ್ ಲಯೊನೆಲ್ ಮೆಸ್ಸಿ ಧರಿಸಿದ್ದ ಆರು ಜರ್ಸಿಗಳನ್ನು ಹರಾಜು ಮಾಡಲಾಗಿದ್ದು, ಅವು ಗುರುವಾರ ₹64.77 ಕೋಟಿ (7.8 ದಶಲಕ್ಷ ಡಾಲರ್) ಮೊತ್ತಕ್ಕೆ ಮಾರಾಟವಾಗಿವೆ ಎಂದು ಹರಾಜು ಸಂಸ್ಥೆ ‘ಸೊದೆಬಿ’ ತಿಳಿಸಿದೆ.
36 ವರ್ಷದ ಮೆಸ್ಸಿ ನಾಯಕತ್ವದ ಆರ್ಜೇಂಟೀನಾ ತಂಡ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು.
ಇದು ಈ ವರ್ಷ ಕ್ರೀಡಾ ಸ್ಮರಣಿಕೆ ಹರಾಜಿನಲ್ಲಿ ಗಳಿಸಿದ ಅತಿ ಹೆಚ್ಚಿನ ಮೊತ್ತವಾಗಿದೆ ಎಂದು ಸೊದೆಬಿ ವಿವರ ನೀಡಿದೆ. ಆದರೆ ಬಿಡ್‌ನಲ್ಲಿ ವಿಜೇತನಾದ ವ್ಯಕ್ತಿಯ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಈ ಹರಾಜಿನಿಂದ ಬಂದ ಹಣದ ಸ್ವಲ್ಪ ಭಾಗವನ್ನು, ಲಿಯೊ ಮೆಸ್ಸಿ ಫೌಂಡೇಷನ್ ಬೆಂಬಲದಿಂದ ಬಾರ್ಸಿಲೋನಾದಲ್ಲಿ ಸ್ಥಾಪಿಸಿರುವ ಮಕ್ಕಳ ಆಸ್ಪತ್ರೆಗೆ ನೀಡಲಾಗುತ್ತಿದೆ. ವಿರಳ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಈ ಚಾರಿತ್ರಿಕ ಪೋಷಾಕುಗಳು ಕ್ರೀಡೆಯ ಅತಿ ಮುಖ್ಯ ಗಳಿಗೆಯ ನೆನಪು ಮೂಡಿಸುವ ವಸ್ತುಗಳಷ್ಟೇ ಅಲ್ಲ, ಅವು ವಿಶ್ವದ ಅತ್ಯಂತ ಜನಪ್ರಿಯ ಫುಟ್‌ಬಾಳ್ ಆಟಗಾರನ ವೃತ್ತಿ ಜೀವನದ ಮೇರು ಸಾಧನೆಗೆ ಸಂಬಂಧಿಸಿದವು’ ಎನ್ನುತ್ತಾರೆ ಸೊದೆಬಿಯ ಆಧುನಿಕ ಸಂಗ್ರಹಗಳ ವಿಭಾಗದ ಮುಖ್ಯಸ್ಥ ಬ್ರಾಹ್ಮ್ ವಾಚರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.