ನವದೆಹಲಿ: ‘ನಿವೃತ್ತಿಯ ನಿರ್ಧಾರ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡಿದ್ದಲ್ಲ. ಇದು ಸಹಜನೆಲೆಯಲ್ಲಿ ಮೊಳೆದ ನಿರ್ಧಾರ. ದೇಶಿಯ ಸರ್ಕಿಟ್‌ನಲ್ಲಿ ತಮ್ಮ ಬಾಧ್ಯತೆಗಳನ್ನೆಲ್ಲ ಪೂರೈಸಿದ ನಂತರ ‘ವಿಶ್ರಾಂತಿ’ ಪಡೆಯುವುದಾಗಿ ಭಾರತ ಫುಟ್‌ಬಾಲ್ ತಂಡದ ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ಹೇಳಿದ್ದಾರೆ.
ಜೂನ್ 6ರಂದು ಕುವೈತ್ ವಿರುದ್ಧ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯ ತಮ್ಮ ಪಾಲಿನ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಎಂದು ಗುರುವಾರ ನಿವೃತ್ತಿ ನಿರ್ಧಾರಕ್ಕೆ ಸಂಬಂಧಿಸಿದ ವಿಡಿಯೊ ಸಂದೇಶದಲ್ಲಿ 39 ವರ್ಷದ ಚೆಟ್ರಿ ಹೇಳಿದ್ದರು.
19 ವರ್ಷ ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನದಲ್ಲಿ ಭಾರತದ ಪರ ಅತ್ಯಧಿಕ ಪಂದ್ಯಗಳನ್ನು ಆಡಿದ ಮತ್ತು ಅತ್ಯಧಿಕ (94) ಗೋಲುಗಳನ್ನು ಗಳಿಸಿದ ಹಿರಿಮೆ ಈ ಸಾಧಕನದ್ದು.
‘ನಿವೃತ್ತಿ ನಿರ್ಧಾರ ದೈಹಿಕ ವಿಷಯಕ್ಕೆ ಸಂಬಂಧಿಸಿ ಕೈಗೊಂಡಿದ್ದಲ್ಲ. ನಾನು ಈಗಲೂ ಫಿಟ್ ಇದ್ದೇನೆ. ಓಡುವುದು, ಬೆನ್ನತ್ತುವುದು, ಪರಿಶ್ರಮ ನನಗೆ ಕಠಿಣ ವೇನಲ್ಲ. ಇದು ಮಾನಸಿಕ ವಿಷಯಕ್ಕೆ ಸಂಬಂಧಿಸಿದ್ದು’ ಎಂದು ಅವರು ಆನ್‌ಲೈನ್ ಸಂವಾದದಲ್ಲಿ ತಿಳಿಸಿದರು. ಈಗ ವಿವಿಧ ಕ್ರೀಡೆಗಳ ವೃತ್ತಿಪರ ಕ್ರೀಡಾಪಟುಗಳಿಗೆ ಸಂಬಂಧಿಸಿ ಹೆಚ್ಚು ಚರ್ಚೆಯಲ್ಲಿರುವ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಅವರು ಪ್ರಸ್ತಾಪ ಮಾಡಲಿಲ್ಲ.
‘ನಿವೃತ್ತಿ ವಿಷಯ ನನ್ನ ಮನಸ್ಸಿನಲ್ಲಿ ಹೊಯ್ದಾಡುತಿತ್ತು. ಆದರೆ ಈ ನಿರ್ಧಾರ ಕೈಗೊಂಡಿದ್ದು ಅಪ್ರಜ್ಞಾಪೂರ್ವಕವಾಗಿ. ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದಲ್ಲಿರುತ್ತೇನೆ. ಎಷ್ಟು ಸಮಯ ದೇಶಿಯ ಟೂರ್ನಿಗಳಲ್ಲಿ ಆಡುವೆನೆಂದು ಗೊತ್ತಿಲ್ಲ. ಅದರ ನಂತರ ಆಟದಿಂದ ವಿರಾಮ ಪಡೆಯುತ್ತೇನೆ’ ಎಂದು 150 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಚೆಟ್ರಿ ಹೇಳಿದರು.
ನಿವೃತ್ತಿ ನಂತರ ಕೋಚಿಂಗ್ ನೀಡುವ ಬಗ್ಗೆ ಪರಿಗಣಿಸುವಿರಾ ಎಂದು ಕೇಳಿದಾಗ, ‘ಇಲ್ಲ ಎಂದು ಹೇಳಲಾರೆ. ವಿಶ್ರಾಂತಿಯ ಸಂದರ್ಭದಲ್ಲಿ ಆ ಬಗ್ಗೆ ಯೋಚಿಸುವೆ. ಆದರೆ ಸದ್ಯ ಆ ವಿಷಯ ನನ್ನ ಕಾರ್ಯಸೂಚಿಯಲ್ಲಿ ಪ್ರಮುಖ ಸ್ಥಾನ ಪಡೆದಿಲ್ಲ’ ಎಂದರು.
ಐಎಸ್‌ಎಲ್‌ನಲ್ಲಿ ಚೆಟ್ರಿ ಅವರ ಗುತ್ತಿಗೆ ಮುಂದಿನ ವರ್ಷದವರೆಗೆ ಇದೆ.
‘ನಿವೃತ್ತಿ ನಿರ್ಧಾರ ಪ್ರಕಟಿಸುವ ಮೊದಲು ಭಾರತ ತಂಡದ ಕೋಚ್ ಇಗೊರ್ ಸ್ಟಿಮಾಚ್ ಅವರ ಜೊತೆಯೂ ಸಮಾಲೋಚನೆ ನಡೆಸಿದ್ದೆ. ನಾನು ಅವರ ಬಳಿ ಹೋಗಿ ನನ್ನ ನಿರ್ಧಾರವನ್ನು ತಿಳಿಸಿದಾಗ ಅವರು ನನ್ನ ಭಾವನೆಯನ್ನು ಅರ್ಥ ಮಾಡಿಕೊಂಡರು’ ಎಂದು ಚೆಟ್ರಿ ಹೇಳಿದರು. ಅವರು ನಿವೃತ್ತಿ ಯೋಚನೆ ಮೊಳೆದ ನಂತರ ಸಂಪರ್ಕಿಸಿದ ಮತ್ತೊಬ್ಬ ಆಟಗಾರ ಎಂದರೆ ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ. ‘ಅವರು ನನಗೆ ಅತಿ ಅಪ್ತ. ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ’ ಎಂದು ಅವರು ಬಹಿರಂಗಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.