ದೋಹಾ: ಪೋರ್ಚುಗಲ್ ತಂಡವನ್ನು ವಿಶ್ವ ಚಾಂಪಿಯನ್ ಆಗಿಸುವ ಕನಸು ಹೊತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮಂಗಳವಾರ ಸ್ವಿಟ್ಜರ್ಲೆಂಡ್ ತಂಡಕ್ಕೆ ಸವಾಲಾಗುವ ನಿರೀಕ್ಷೆಯಿದೆ.
ಇಲ್ಲಿಯ ಲುಸೈಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್– ಪೋರ್ಚುಗಲ್ ಮುಖಾಮುಖಿಯಾಗಲಿವೆ.
ಐದು ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿರುವ ರೊನಾಲ್ಡೊ, ಈ ಪಂದ್ಯದಲ್ಲಿ ಮೋಡಿ ಮಾಡುವ ನಿರೀಕ್ಷೆಯಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಪೆನಾಲ್ಟಿ ಅವಕಾಶದಲ್ಲಿ ಅವರು ಗೋಲು ದಾಖಲಿಸಿದ್ದರು. ಈ ಟೂರ್ನಿಯಲ್ಲಿ ಅವರು ಗಳಿಸಿದ ಏಕೈಕ ಗೋಲು ಇದು.
ತಾರಾ ಆಟಗಾರರಾದ ಫ್ರಾನ್ಸ್‌ನ ಕೈಲಿಯಾನ್ ಎಂಬಾಪೆ ಮತ್ತು ಅರ್ಜಿಂಟೀನಾದ ಲಯೊನೆಲ್ ಮೆಸ್ಸಿ ತಮ್ಮ ತಂಡಗಳ ಜಯಕ್ಕೆ ಕಾರಣವಾಗುತ್ತಿದ್ದಾರೆ. ಹೀಗಾಗಿ 37 ವರ್ಷದ ರೊನಾಲ್ಡೊ ಮೇಲೆ ಸಹಜವಾಗಿಯೇ ಒತ್ತಡವಿದೆ.
ದಕ್ಷಿಣ ಕೊರಿಯಾ ಎದುರಿನ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಪೋರ್ಚುಗಲ್‌ನ ಪ್ರಮುಖ ಆಟಗಾರರಾದ ಬ್ರೂನೊ ಫರ್ನಾಂಡಿಸ್, ಬರ್ನಾರ್ಡೊ ಸಿಲ್ವಾ ಮತ್ತು ರುಬೆನ್ ಡಿಯಾಸ್ ಈ ಹಣಾಹಣಿಗೆ ಸಜ್ಜಾಗಿದ್ದಾರೆ. 2006ರ ಆವೃತ್ತಿಯಲ್ಲಿ ಪೋರ್ಚುಗಲ್ ಸೆಮಿಫೈನಲ್ ತಲುಪಿತ್ತು. ಅದನ್ನು ಹೊರತುಪಡಿಸಿ ಯಾವುದೇ ಆವೃತ್ತಿಗಳಲ್ಲಿ ತಂಡವು 16ರ ಘಟ್ಟದ ತಡೆ ದಾಟಿಲ್ಲ. ಹೀಗಾಗಿ ಈ ಟೂರ್ನಿಯಲ್ಲಿ ಮುನ್ನಡೆಯುವ ಛಲದಲ್ಲಿದೆ.
ಸ್ವಿಟ್ಜರ್ಲೆಂಡ್ ತಂಡಕ್ಕೆ ಬ್ರೀಲ್ ಎಂಬೊಲೊ ಅವರ ಬಲವಿದೆ. ಗುಂಪು ಹಂತದಲ್ಲಿ ಎರಡು ಗೋಲು ಗಳಿಸಿರುವ ಅವರು ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಶಾಕಿರಿ ಕೂಡ ಮಿಂಚಬಲ್ಲರು.
1954ರ ಬಳಿಕ ಎಂಟರಘಟ್ಟ ತಲುಪುವ ತವಕದಲ್ಲಿ ಸ್ವಿಸ್ ತಂಡವಿದೆ. ಹೀಗಾಗಿ ಉಭಯ ತಂಡಗಳ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.