ADVERTISEMENT

ಸ್ಯಾಫ್‌ ಫುಟ್‌ಬಾಲ್‌ ಟೂರ್ನಿ: ಫೈನಲ್‌ನಲ್ಲಿ ಇಂದು ಕುವೈತ್‌ ವಿರುದ್ಧ ಭಾರತ ಸೆಣಸು

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 23:30 IST
Last Updated 3 ಜುಲೈ 2023, 23:30 IST
ಭಾರತ ತಂಡದ ಸಹಾಯಕ ಕೋಚ್‌ ಮಹೇಶ್‌ ಗಾವ್ಳಿ (ಎಡದಿಂದ), ಡಿಫೆಂಡರ್‌ ಸಂದೇಶ್‌ ಜಿಂಗನ್, ಕುವೈತ್‌ ತಂಡದ ಆಟಗಾರ ಬದೆರ್ ಅಲ್ ಸನೂನ್ ಮತ್ತು ಕೋಚ್‌ ರೂಯಿ ಬೆಂಟೊ ಅವರು ಸೋಮವಾರ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಟ್ರೋಫಿಯೊಂದಿಗೆ ಕಾಣಿಸಿಕೊಂಡರು
ಭಾರತ ತಂಡದ ಸಹಾಯಕ ಕೋಚ್‌ ಮಹೇಶ್‌ ಗಾವ್ಳಿ (ಎಡದಿಂದ), ಡಿಫೆಂಡರ್‌ ಸಂದೇಶ್‌ ಜಿಂಗನ್, ಕುವೈತ್‌ ತಂಡದ ಆಟಗಾರ ಬದೆರ್ ಅಲ್ ಸನೂನ್ ಮತ್ತು ಕೋಚ್‌ ರೂಯಿ ಬೆಂಟೊ ಅವರು ಸೋಮವಾರ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಟ್ರೋಫಿಯೊಂದಿಗೆ ಕಾಣಿಸಿಕೊಂಡರು    –ಪ್ರಜಾವಾಣಿ ಚಿತ್ರ

ಬೆಂಗಳೂರು: ಹಾಲಿ ಚಾಂಪಿಯನ್‌ ಭಾರತ ತಂಡದವರು ಸ್ಯಾಫ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಮಂಗಳವಾರ ಕುವೈತ್‌ ತಂಡವನ್ನು ಎದುರಿಸಲಿದ್ದು, ಫುಟ್‌ಬಾಲ್‌ ಪ್ರೇಮಿಗಳು ಮತ್ತೊಂದು ರೋಚಕ ಹೋರಾಟದ ನಿರೀಕ್ಷೆಯಲ್ಲಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯ ಗೆದ್ದು ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಪಾರಮ್ಯ ಮುಂದುವರಿಸುವುದು ಸುನಿಲ್‌ ಚೆಟ್ರಿ ಬಳಗದ ಗುರಿ. ಇದುವರೆಗೆ ಎಂಟು ಸಲ ಕಿರೀಟ ಮುಡಿಗೇರಿಸಿಕೊಂಡಿರುವ ಭಾರತ, ಒಂಬತ್ತನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ಜೂನ್‌ 27 ರಂದು ‘ಎ’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಇವೆರಡು ತಂಡಗಳು ಎದುರಾಗಿದ್ದಾಗ 1–1 ಡ್ರಾ ಆಗಿತ್ತು. ಆ ಪಂದ್ಯದಲ್ಲಿ ಕುವೈತ್‌ ತಂಡ ಒರಟಾದ ಆಟ ಆಡಿತ್ತಲ್ಲದೆ, ಸಾಕಷ್ಟು ಫೌಲ್‌ಗಳನ್ನು ಮಾಡಿತ್ತು. ಉಭಯ ತಂಡಗಳ ಆಟಗಾರರು ಹಲವು ಸಲ ಪರಸ್ಪರ ತಳ್ಳಾಡಿದ್ದರು. ಮಂಗಳವಾರ ಕೂಡಾ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆಯಿದೆ.

ADVERTISEMENT

‘ಕುವೈತ್‌ ಮತ್ತು ಲೆಬನಾನ್‌ (ಸೆಮಿಫೈನಲ್‌) ವಿರುದ್ಧದ ಪಂದ್ಯಗಳಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಫೈನಲ್‌ ಪಂದ್ಯದಲ್ಲಿ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿ ಆಡುವಂತೆ ಆಟಗಾರರಿಗೆ ಸೂಚಿಸಲಾಗಿದೆ’ ಎಂದು ಭಾರತ ತಂಡದ ಸಹಾಯಕ ಕೋಚ್‌ ಮಹೇಶ್‌ ಗಾವ್ಳಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆಮಿಫೈನಲ್‌ನಂತೆ ಫೈನಲ್‌ ಪಂದ್ಯದ ವೇಳೆಯೂ ಮುಖ್ಯ ಕೋಚ್‌ ಇಗೋರ್‌ ಸ್ಟಿಮ್ಯಾಚ್‌ ಅವರ ಮಾರ್ಗದರ್ಶನ ಭಾರತದ ಆಟಗಾರರಿಗೆ ಲಭಿಸದು. ಸ್ಯಾಫ್‌ ಶಿಸ್ತು ಸಮಿತಿಯು ಸ್ಟಿಮ್ಯಾಚ್‌ ಮೇಲೆ ಎರಡು ಪಂದ್ಯಗಳ ನಿಷೇಧ ಹೇರಿದೆ. ಆದ್ದರಿಂದ ಗಾವ್ಳಿ ಅವರೇ ಟಚ್‌ಲೈನ್‌ ಬಳಿ ನಿಂತು ತಂಡದ ತಂತ್ರಗಾರಿಕೆಯನ್ನು ಕಾರ್ಯರೂಪಕ್ಕಿಳಿಸಲು ಆಟಗಾರರಿಗೆ ನೆರವಾಗಲಿದ್ದಾರೆ.

ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದ ಸಂದೇಶ್‌ ಜಿಂಗನ್ ಅವರು ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದು, ಭಾರತದ ರಕ್ಷಣಾ ವಿಭಾಗಕ್ಕೆ ಹೆಚ್ಚಿನ ಬಲ ನೀಡಲಿದೆ. ಪಾಕಿಸ್ತಾನ ಮತ್ತು ಕುವೈತ್‌ ವಿರುದ್ದದ ಪಂದ್ಯಗಳಲ್ಲಿ ಹಳದಿ ಕಾರ್ಡ್‌ ಪಡೆದಿದ್ದರಿಂದ ಅವರು ಸೆಮಿಫೈನಲ್‌ನಲ್ಲಿ ಆಡಿರಲಿಲ್ಲ. ‌

‘ಕುವೈತ್‌ ತಂಡ ಬಲಿಷ್ಠವಾಗಿದ್ದು, ಅವರ ರಕ್ಷಣಾ ವಿಭಾಗವನ್ನು ಬೇಧಿಸಿ ಗೋಲು ಗಳಿಸುವುದು ಕಷ್ಟ. ಕಳೆದ 10 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾವು ಎದುರಿಸಿದ ತಂಡಗಳಲ್ಲಿ ಕುವೈತ್‌ ಅತ್ಯಂತ ಪ್ರಬಲ ತಂಡ ಎನಿಸಿದೆ’ ಎಂದು ಜಿಂಗನ್‌ ಹೇಳಿದರು.

ಸೆಮಿ ಪಂದ್ಯದ ಕೊನೆಯ ಕೆಲವು ನಿಮಿಷಗಳ ಆಟದಲ್ಲಿ ಕಾಲು ನೋವಿನಿಂದ ಬಳಲಿದ್ದ ಚೆಟ್ರಿ, ಫೈನಲ್‌ನಲ್ಲಿ ಪೂರ್ಣ ಅವಧಿ ಆಡುವರೇ ಎಂಬುದು ಖಚಿತವಾಗಿಲ್ಲ. ‘ತಂಡದ ಎಲ್ಲ ಆಟಗಾರರು ಫಿಟ್‌ ಆಗಿದ್ದಾರೆ’ ಎಂದು ಗಾವ್ಳಿ ಹೇಳಿದ್ದಾರೆ.

ಕುವೈತ್‌ ತಂಡದ ಡಿಫೆಂಡರ್‌ಗಳ ಮೇಲೆ ಒತ್ತಡ ಹೇರಬೇಕಾದರೆ, ಚೆಟ್ರಿ ಅವರಿಗೆ ಇತರ ಆಟಗಾರರು ನಿಖರ ಪಾಸ್‌ಗಳನ್ನು ನೀಡುವುದು ಅಗತ್ಯ. ಸಹಲ್‌ ಅಬ್ದುಲ್‌ ಸಮದ್, ಮಹೇಶ್‌ ಸಿಂಗ್‌, ಆಶಿಖ್ ಕುರುಣಿಯನ್ ಮತ್ತು ಉದಾಂತ ಸಿಂಗ್‌ ಅವರ ಪ್ರದರ್ಶನವೂ ನಿರ್ಣಾಯಕ ಎನಿಸಲಿದೆ.

ಅರಬ್‌ ನಾಡಿನ ತಂಡವು ಪ್ರಮುಖ ಸ್ಟ್ರೈಕರ್‌ ಅಬ್ದುಲ್ಲಾ ಅಲ್‌ ಬಲೂಶಿ ಅವರನ್ನು ನೆಚ್ಚಿಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್‌ನ ಹೆಚ್ಚುವರಿ ಅವಧಿಯಲ್ಲಿ ಗೋಲು ಗಳಿಸಿದ್ದ ಅವರು, ಭಾರತದ ಎದುರಿನ ಲೀಗ್‌ ಪಂದ್ಯದಲ್ಲೂ ಮಿಂಚಿದ್ದರು.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್‌ ಮತ್ತು ಫ್ಯಾನ್‌ಕೋಡ್‌ ಆ್ಯಪ್

13 ಪಂದ್ಯಗಳಲ್ಲಿ ಅಜೇಯ ಸಾಧನೆ

ಭಾರತ ತಂಡ 2019ರ ಸೆಪ್ಟೆಂಬರ್‌ ಬಳಿಕ ತವರು ನೆಲದಲ್ಲಿ ಆಡಿದ 13 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸೋತಿಲ್ಲ. 11 ಪಂದ್ಯಗಳನ್ನು ಗೆದ್ದಿದ್ದು, ಎರಡನ್ನು ಡ್ರಾ ಮಾಡಿಕೊಂಡಿದೆ. ಎದುರಾಳಿಗಳಿಗೆ ಕೇವಲ ಎರಡು ಗೋಲನ್ನು ಬಿಟ್ಟುಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.