ADVERTISEMENT

ಫುಟ್‌ಬಾಲ್‌ ಅವನಿಗೆ ಅಪ್ಪ ನೀತಿ ಕಲಿಸಿದವಳೇ ಅಮ್ಮ

ವಿಶಾಖ ಎನ್.
Published 15 ಜುಲೈ 2018, 19:30 IST
Last Updated 15 ಜುಲೈ 2018, 19:30 IST
ಸ್ಯಾಮ್ಯುಯೆಲ್ ವೆಸ್ ಟಿಟಿ
ಸ್ಯಾಮ್ಯುಯೆಲ್ ವೆಸ್ ಟಿಟಿ   

ಸ್ಯಾಮ್ಯುಯೆಲ್ ವೆಸ್ ಟಿಟಿ ಹುಟ್ಟಿದ್ದು ಕೆಮರೂನ್ನ ರಾಜಧಾನಿ ಯೌಂಡೆಯಲ್ಲಿ. ತಾಯಿ ಆನಿ ಗೊ. ತಂದೆ ಯಾರೆಂದೇ ಗೊತ್ತಿಲ್ಲ.ಕಡುಬಡತನ. ತುತ್ತಿನ ಚೀಲ ತುಂಬಿಸಿಕೊಳ್ಳಲೆಂದು ಸಂಬಂಧಿಕರೆಲ್ಲ ಫ್ರಾನ್ಸ್‌ಗೆ ಗುಳೆ ಹೊರಟರು. ಮಗನನ್ನು ನೋಡಿಕೊಳ್ಳುವ ಉಸಾಬರಿಯನ್ನು ಆ ತಾಯಿ ಅನಿವಾರ್ಯವಾಗಿ ಹಾಗೆ ಹೊರಟ ಬಂಧುಮಿತ್ರರಿಗೆ ವಹಿಸಿದಳು. ಆಗ ಟಿಟಿಗೆ ಇನ್ನೂ ಎರಡೇ ವರ್ಷ. ಕೆಮರೂನ್‌ನಿಂದ ವಲಸೆ ಹೊರಟ ಸಮುದಾಯಗಳ ನಡುವೆ ಸ್ಯಾಮ್ಯುಯೆಲ್ ಫ್ರಾನ್ಸ್‌ನಲ್ಲಿ ಬೆಳೆಯತೊಡಗಿದ.

1995ರಲ್ಲಿ ಫ್ರಾನ್ಸ್ ಹಾಗೂ ವಿಶ್ವ ಇತರೆ ತಂಡ ರೋಜರ್ ಮಿಲ್ಲರ್ ಪ್ರತಿಭೆಯ ಕುರಿತೇ ಮಾತನಾಡುವಂತಾಯಿತು. ಫುಟ್‌ಬಾಲ್‌ನಲ್ಲಿ ಮಿಲ್ಲರ್ ಹಾಗೂ ಅವನ ಕೆಮರೂನ್ ತಂಡ ಅದ್ಭುತವನ್ನು ಮಾಡಿತ್ತು. ಫ್ರಾನ್ಸ್‌ನಲ್ಲೂ ಕೆಮರೂನ್‌ನಿಂದ ವಲಸೆ ಬಂದವರಿದ್ದರಲ್ಲ; ಅವರತ್ತ ಫುಟ್‌ಬಾಲ್ ದಿಗ್ಗಜ ತರಬೇತುದಾರರ ನೋಟ ಹರಿಯಿತು. ಪಾಲ್ ಪೋಗ್ಬಾ, ರಫೆಲ್ ವರಾನೆ, ರೊಮೆಲು ಲುಕಾಕು ಇಂಥವರ ಸಾಲಿನಲ್ಲಿ ಸ್ಯಾಮ್ಯುಯೆಲ್ ಟಿಟಿ ಕೂಡ ನಿಲ್ಲುವಂತಾಯಿತು.

ಅಮ್ಮನಿಗೆ ಫುಟ್‌ಬಾಲ್ ವ್ಯಾಕರಣ ಗೊತ್ತಿರಲಿಲ್ಲ. ಮಗ ಒಳ್ಳೆಯವನಾಗಿ ಬೆಳೆಯಬೇಕು ಎಂದಷ್ಟೇ ಅವರು ಬಯಸಿದ್ದರು. ಅವರೂ ಮಗ ಆಡಿ ಬೆಳೆಯುತ್ತಿದ್ದ ಜಾಗ ಸೇರಿದ ಮೇಲೆ ಏನೋ ಸಮಾಧಾನ. ಏನೇ ಮಾಡಿದರೂ ಶ್ರಮ ಹಾಕಬೇಕು ಎಂದು ಯಾವಾಗಲೂ ಅವರು ಕಿವಿಮಾತು ಹೇಳುತ್ತಿದ್ದರು. ಸ್ಯಾಮ್ಯುಯೆಲ್ ಟಿಟಿ ಆ ಮಾತನ್ನು ಫುಟ್‌ಬಾಲ್ ಆಟಕ್ಕೆ ಅನ್ವಯಿಸಿದ.

ADVERTISEMENT

1998ರಲ್ಲಿ ಜಿನೆದಿನ್ ಜಿದಾನ್ ಕೃಪಾಕಟಾಕ್ಷದಿಂದ ವಲಸಿಗರೆಲ್ಲ ಫ್ರಾನ್ಸ್ ಫುಟ್‌ಬಾಲ್ ತಂಡದಲ್ಲಿ ಎದೆಯುಬ್ಬಿಸುವಂತಾಯಿತು. ಆ ವರ್ಷ ವಿಶ್ವಕಪ್‌ನಲ್ಲಿ ಫ್ರಾನ್ಸ್ ಪ್ರದರ್ಶನ ಹಾಗಿತ್ತು. ಅದರಿಂದ ಪ್ರೇರಿತನಾಗಿಯೇ ಸ್ಯಾಮ್ಯುಯೆಲ್ ಟಿಟಿ ಮೆನಿವಲ್ ಎಫ್‌ಸಿ ಸೇರಿದ್ದು. ಫ್ರಾನ್ಸ್‌ನ ಲಿಯಾನ್‌ನಲ್ಲಿನ ಈ ಕ್ಲಬ್ ಸೇರುವುದೇ ಹೆಮ್ಮೆ.

ಹನ್ನೊಂದು ವರ್ಷ ಅಲ್ಲಿ ಫುಟ್‌ಬಾಲ್ ವರಸೆಗಳನ್ನು ಕಲಿತು, ಸಾಣೆಗೊಡ್ಡಿಕೊಂಡು, ತಂತ್ರ, ಪಟ್ಟುಗಳನ್ನೆಲ್ಲ ಅಳೆದು ತೂಗಿದ. 2012ರಲ್ಲಿ ವೃತ್ತಿಪರ ಫುಟ್ ಬಾಲ್ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದು. 2015-16ರ ಋತುವಿನಲ್ಲಿ ‘ಶ್ರೇಷ್ಠ ಆಟಗಾರ’ ಎಂಬ ಗೌರವ ಪ್ರೇಕ್ಷಕರಿಂದ ಸಂದಿತು. ಅದನ್ನು ಗಮನಿಸಿದ ಎಫ್‌ಸಿ ಬಾರ್ಸೆಲೋನಾ ಈ ಪ್ರತಿಭಾವಂತನಿಗೆ ಗಾಳ ಹಾಕಿತು. ಜೆರೆಮಿ ಮ್ಯಾಥ್ಯೂ, ಥಾಮಸ್ ವರ್ಮೆಲೆನ್ ತರಹದ ದಿಗ್ಗಜ ಆಟಗಾರರ ಕುರಿತು ಟೀಕೆಗಳೆದ್ದಿದ್ದ ಹೊತ್ತಿನಲ್ಲಿ ಟಿಟಿಗೆ ಅವಕಾಶದ ಬೆಳ್ಳಿಗೆರೆ ಕಂಡಿತು.

ಸ್ಟ್ರೈಕರ್, ಮಿಡ್ ಫೀಲ್ಡರ್ ಆಗಿ ಒಂದಿಷ್ಟು ಅನುಭವ ಪಡೆದುಕೊಂಡ ಮೇಲೆ ಡಿಫೆಂಡರ್ ಆಗಿ ತನ್ನತನವನ್ನು ಗಟ್ಟಿ ಮಾಡಿಕೊಂಡ ಆಟಗಾರ ಸ್ಯಾಮ್ಯುಯೆಲ್ ಟಿಟಿ.

ಅಮ್ಮ ಬಾಲ್ಯದಿಂದ ಹೇಳಿಕೊಟ್ಟ ನೀತಿಪಾಠಗಳನ್ನು ಕರಗತ ಮಾಡಿಕೊಂಡವನಂತೆ ಬದುಕಿದ ಟಿಟಿ ತನ್ನದೇ ಕೆಲವು ತತ್ವಗಳನ್ನು ಇಟ್ಟುಕೊಂಡಿದ್ದಾನೆ. ಅಪ್ರಾಮಾಣಿಕತೆ ಅವನಿಗೆ ಆಗದು. ತಟವಟ ಇದ್ದಲ್ಲಿ ಸಭಾತ್ಯಾಗ ಮಾಡುವುದು ಜಾಯಮಾನ. ವಿನಾ ಕಾರಣ ಯಾರನ್ನೋ ಹಳಿಯುವ, ಗಾಸಿಪ್ ಮಾಡುವ ಪೈಕಿ ಇವನಲ್ಲ. ಪ್ರಶ್ನೆಯ ಗುಂಗಿಹುಳ ತಲೆಯಲ್ಲಿ ಹೊಕ್ಕರೆ ಅದಕ್ಕೆ ಉತ್ತರ ಕಂಡುಕೊಳ್ಳುವವರೆಗೆ ಸಂಶೋಧನೆ ನಿಲ್ಲಿಸುವುದಿಲ್ಲ.

ಮಗನ ಬೆಳವಣಿಗೆ ಕಂಡು ಅಮ್ಮನಿಗೂ ಈಗ ಫುಟ್‌ಬಾಲ್ ಪಾಠಗಳು ತಿಳಿದಿವೆ. ಅವರು ಬಂಧು-ಮಿತ್ರರಿಗೆಲ್ಲ ಆಟದ ವೈಖರಿಯ ಕುರಿತು ಭಾಷಣ ಮಾಡುತ್ತಿರುತ್ತಾರೆ.

ಇಂಥ ಹಿನ್ನೆಲೆ ಇರುವ ಸ್ಯಾಮ್ಯುಯೆಲ್ ಟಿಟಿಗೆ ಈಗ ಕೇವಲ 24 ವರ್ಷ. ಕೆಮರೂನ್ ವಂಶವಾಹಿಯವರು ವಯಸ್ಸಿಗಿಂತ ದೊಡ್ಡಪ್ರಾಯದವರಂತೆಯೇ ಕಾಣುತ್ತಿರುತ್ತಾರೆ. ಸ್ಯಾಮುಯೆಲ್ ಕೂಡ ಹಾಗೆಯೇ ಕಾಣುವುದು. ಬೆಲ್ಜಿಯಂ ತಂಡದ ವಿರುದ್ಧ ಈ ಸಲದ ವಿಶ್ವಕಪ್ ಫುಟ್‌ಬಾಲ್ ಸೆಮಿಫೈನಲ್ಸ್‌ನಲ್ಲಿ ಒಂದು ಗೋಲನ್ನು ಗಳಿಸಿದ. ಫ್ರಾನ್ಸ್ ತಂಡದ ಎಲ್ಲ ಆಟಗಾರರೂ ರಕ್ಷಣೆಗೆ ಇಳಿದವರಂತೆ ಆಡಿದ ಪಂದ್ಯದಲ್ಲಿ ಸಿಕ್ಕ ಸಣ್ಣ ಅವಕಾಶದ ಲಾಭ ಪಡೆದವನು ಈ ಟಿಟಿ. ಫ್ರಾನ್ಸ್ ಅನ್ವಯಿಸಿದ ಈ ತಂತ್ರ ದೊಡ್ಡ ಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಿದೆ. ಆದರೆ, ಸ್ಯಾಮ್ಯುಯೆಲ್ ಟಿಟಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ. ಫೈನಲ್‌ನಲ್ಲಿ ತನ್ನ ತಂಡ ಹೇಗೆಲ್ಲ ಆಡಬೇಕಿದೆ ಎನ್ನುವ ಬಗೆಗಿನ ಧ್ಯಾನದಲ್ಲಿ ಅವನಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.