ADVERTISEMENT

ಜನಾಂಗೀಯ ತಾರತಮ್ಯದ ಹೇಳಿಕೆ: ಫಾವ್ಲರ್ ಮೇಲೆ ನಿಷೇಧದ ತೂಗುಗತ್ತಿ

ಪಿಟಿಐ
Published 2 ಫೆಬ್ರುವರಿ 2021, 12:41 IST
Last Updated 2 ಫೆಬ್ರುವರಿ 2021, 12:41 IST
ರಾಬಿ ಫ್ಲಾವರ್‌–ರಾಯಿಟರ್ಸ್‌ ಚಿತ್ರ
ರಾಬಿ ಫ್ಲಾವರ್‌–ರಾಯಿಟರ್ಸ್‌ ಚಿತ್ರ   

ಕೋಲ್ಕತ್ತ: ರೆಫರಿಗಳ ವಿರುದ್ಧ ಜನಾಂಗೀಯ ತಾರತಮ್ಯದ ಹೇಳಿಕೆ ನೀಡಿದ ಆರೋಪದ ಮೇಲೆ ಐಎಸ್‌ಎಲ್‌ ಫುಟ್‌ಬಾಲ್‌ ಫ್ರ್ಯಾಂಚೈಸ್‌ ಈಸ್ಟ್ ಬೆಂಗಾಲ್‌ನ ತರಬೇತುದಾರ ರಾಬಿ ಫಾವ್ಲರ್‌ ಅವರಿಗೆ ಕನಿಷ್ಠ ಐದು ಪಂದ್ಯಗಳ ನಿಷೇಧ ಮತ್ತು ₹ 6 ಲಕ್ಷ ದಂಡ ವಿಧಿಸುವ ಸಾಧ್ಯತೆಯಿದೆ.

ಮಡಗಾಂವ್‌ನಲ್ಲಿ ಜನವರಿ 29ರಂದು ಎಫ್‌ಸಿ ಗೋವಾ ಎದುರು ನಡೆದ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು 1–1ರ ಡ್ರಾ ಸಾಧಿಸಿತ್ತು. ಪಂದ್ಯದ ಬಳಿಕ ಹೇಳಿಕೆ ನೀಡಿದ್ದ ಇಂಗ್ಲೆಂಡ್‌ ಮೂಲದ ಫಾವ್ಲರ್‌ ‘ರೆಫರಿಗಳು ಇಂಗ್ಲಿಷ್‌ ವಿರೋಧಿ ಅಥವಾ ಈಸ್ಟ್ ಬೆಂಗಾಲ್ ತಂಡದ ವಿರೋಧಿಯಾಗಿದ್ದಾರೆ‘ ಎಂದಿದ್ದರು.

ಫಾವ್ಲರ್ ಹೇಳಿಕೆ ಇದ್ದ ಎಲ್ಲ ವಿಡಿಯೊ ತುಣುಕುಗಳನ್ನು ಅಳಿಸಲಾಗಿದೆ.

ADVERTISEMENT

‘ಪಂದ್ಯದ ಮೇಲ್ವಿಚಾರಕರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಶಿಸ್ತು ಸಮಿತಿಗೆ ವರದಿ ಮಾಡಿದ್ದಾರೆ. ಬುಧವಾರ ಫಾವ್ಲರ್ ಅವರ ವಿಚಾರಣೆ ನಡೆಯಲಿದ್ದು, ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ‘ ಎಂದು ಐಎಸ್‌ಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಫಾವ್ಲರ್ ತಪ್ಪು ಮಾಡಿದ್ದು ಸಾಬೀತಾದರೆ ಕನಿಷ್ಠ ಐದು ಪಂದ್ಯಗಳ ಮತ್ತು ₹ 6 ಲಕ್ಷ ದಂಡ ತೆರಬೇಕಾಗುತ್ತದೆ‘ ಎಂದು ಅವರು ಹೇಳಿದ್ದಾರೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಶಿಸ್ತು ಸಮಿತಿಯು, ವಿಡಿಯೊ ಕಾನ್ಫರೆನ್ಸ್ ಮೂಲಕ ಫಾವ್ಲರ್ ವಿಚಾರಣೆ ನಡೆಸಲಿದ್ದು ಬಳಿಕ ನಿರ್ಧಾರ ತೆಗೆದುಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.