ADVERTISEMENT

ಯುರೊ ಕಪ್ | ‘ಡ್ರಾ’ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌, ಸ್ಕಾಟ್ಲೆಂಡ್‌

ಏಜೆನ್ಸೀಸ್
Published 20 ಜೂನ್ 2024, 16:36 IST
Last Updated 20 ಜೂನ್ 2024, 16:36 IST
   

ಕೊಲೋನ್ (ಜರ್ಮನಿ): ಸ್ವಿಜರ್ಲೆಂಡ್‌ ವಿರುದ್ಧ 28 ವರ್ಷಗಳಲ್ಲಿ ಮೊದಲ ಜಯ ಗಳಿಸುವ ಸ್ಕಾಟ್ಲೆಂಡ್‌ ಆಸೆ ಈಡೇರಲಿಲ್ಲ. ಆದರೆ ಸ್ಕಾಟರು ಗುರುವಾರ ನಡೆದ ಯುರೊ ಕಪ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ‘ಎ’ ಗುಂಪಿನ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿ ಸ್ವಿಟ್ಜರ್ಲೆಂಡ್ ಜೊತೆ 1–1 ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಜರ್ಮನಿ ಎದುರು ಮ್ಯೂನಿಕ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎದುರಾದ ಸೋಲಿನಿಂದ ಚೇತರಿಸಿಕೊಂಡ ಸ್ಕಾಟ್ಲೆಂಡ್‌ ಈ ಡ್ರಾದಿಂದಾಗಿ ಅಂತಿಮ 16ರ ಸುತ್ತು ತಲುಪುವ ಆಸೆಯನ್ನು ಜೀವಂತವಾಗಿರಿಕೊಂಡಿತು.

ಅನುಭವಿಗಳಿದ್ದ ಸ್ವಿಸ್‌ ತಂಡದ ಎದುರು ಸ್ಕಾಟ್ಲೆಂಡ್‌ 13ನೇ ನಿಮಿಷ ಮುನ್ನಡೆಯಿತು. ಮ್ಯಾಂಚೆಸ್ಟರ್‌ ಯುನೈಟೆಡ್‌ಗೆ ಆಡುವ ಸ್ಕಾಟ್ ಮೆಕ್‌ಟೊಮಿನೆ ಅವರು, ಕ್ಯಾಲಂ ಮೆಕ್‌ಗ್ರೆಗೋರ್ ಪಾಸ್‌ನಲ್ಲಿ ಚೆಂಡನ್ನು ಗುರಿತಲುಪಿಸಿದರು.

ADVERTISEMENT

ಆದರೆ ವಿರಾಮಕ್ಕೆ ಮೊದಲೇ ಸ್ವಿಟ್ಜರ್ಲೆಂಡ್‌ ಸಮ ಮಾಡಿಕೊಂಡಿತು. 26ನೇ ನಿಮಿಷ ಶೆಡ್ರಾನ್ ಶಾಖಿರಿ ಅವರು ಅಂಥೊನಿ ರಾಲ್ಸ್ಟನ್‌ ಅವರಿಂದ ಪಡೆದ ಪಾಸ್‌ನಲ್ಲಿ ಚೆಂಡನ್ನು ಅಮೋಘ ರೀತಿ ಗೋಲಿನೊಳಕ್ಕೆ ನಿರ್ದೇಶಿಸಿದ್ದರಿಂದ ಸ್ಕೋರ್ ಸಮನಾಯಿತು.

ಸ್ಕಾಟ್ಲೆಂಡ್ ತಂಡವೇ ಹೆಚ್ಚು ಅವಕಾಶಗಳನ್ನು ಪಡೆಯಿತು. ಗ್ರಾಂಟ್‌ ಹನ್ಲಿ ಅವರು ಉತ್ತಮ ಗೋಲು ಅವಕಾಶದಲ್ಲಿ ‘ಹೆಡ್‌’ ಮಾಡಿದ ಚೆಂಡು ಗೋಲುಗಂಬಕ್ಕೆ ಹೊಡೆಯಿತು.

1996ರ ಯೂರೊ ಕಪ್‌ನಲ್ಲಿ ಸ್ಕಾಟ್ಲೆಂಡ್‌ ಕೊನೆಯ ಸಲ ಸ್ವಿಟ್ಜರ್ಲೆಂಡ್ ತಂಡವನ್ನು (1–0ಯಿಂದ) ಸೋಲಿಸಿತ್ತು.

ಸ್ಕಾಟ್ಲೆಂಡ್ ‘ಎ’ ಗುಂಪಿನ ಅಂತಿಮ ಪಂದ್ಯವನ್ನು ಭಾನುವಾರ ಸ್ಟುಟ್‌ಗಾರ್ಟ್‌ನಲ್ಲಿ ಹಂಗೆರಿ ವಿರುದ್ಧ ಆಡಲಿದೆ. ಆ ಪಂದ್ಯ ಗೆದ್ದರೆ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ನಾಕೌಟ್‌ ಹಂತಕ್ಕೆ ತಲುಪಬಹುದು.

ಇನ್ನೊಂದು ಡ್ರಾ

ಲುಕಾ ಜೋವಿಕ್‌ ‘ಇಂಜುರಿ ಅವಧಿ’ಯಲ್ಲಿ (90+5) ಗಳಿಸಿದ ಗೋಲಿನಿಂದ ಸರ್ಬಿಯಾ ಮ್ಯೂನಿಕ್‌ನಲ್ಲಿ ಗುರುವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಸ್ಲೊವೇನಿಯಾ ಜೊತೆ 1–1 ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಯಾನ್‌ ಕಾರ್ನಿಸ್ನಿಕ್‌ ಅವರು 69ನೇ ನಿಮಿಷ ಸ್ಲೊವೇನಿಯಾಕ್ಕೆ ಮುನ್ನಡೆ ಒದಗಿಸಿದ್ದರು. ಚಾರಿತ್ರಿಕ ವಿಜಯದ ಕನಸಿನಲ್ಲಿದ್ದ ಸ್ಲೊವೇನಿಯಾ ತಂಡಕ್ಕೆ ಜೋವಿಕ್ ಗಳಿಸಿದ ಅಂತಿಮ ಕ್ಷಣದ ಗೋಲಿನಿಂದ ನಿರಾಸೆಯಾಯಿತು.

ದಂಡ:

ಅಲ್ಬೇನಿಯಾ ಮತ್ತು ಸರ್ಬಿಯಾ ಅಭಿಮಾನಿಗಳು ತಮ್ಮ ತಂಡದ ಪಂದ್ಯಗಳ ವೇಳೆ ‘ರಾಷ್ಟ್ರೀಯವಾದಿ’ ಬ್ಯಾನರ್‌ಗಳನ್ನು ಪ್ರದರ್ಶಿಸಿದ ಕಾರಣಕ್ಕೆ ಯುಇಎಫ್‌ಎ, ಆ ರಾಷ್ಟ್ರಗಳ ಫೆಡರೇಷನ್‌ಗೆ ಬುಧವಾರ ತಲಾ ₹9 ಲಕ್ಷ ದಂಡ ವಿಧಿಸಿದೆ.

ಕ್ರೀಡಾ ಸ್ಪರ್ಧೆಯ ವೇಳೆ ಯೋಗ್ಯವಲ್ಲದ ರೀತಿ, ಪ್ರಚೋದನಕಾರಿ ಸಂದೇಶ ರವಾನಿಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ. ಅಲ್ಬೇನಿಯಾ ಅಭಿಮಾನಿಗಳು ಪ್ರದರ್ಶಿಸಿದ ಬ್ಯಾನರ್‌ನಲ್ಲಿ ಆ ದೇಶದ ಗಡಿಯೊಳಗೆ ನೆರೆಯ ರಾಷ್ಟ್ರಗಳ ಪ್ರದೇಶಗಳನ್ನು  ಸೇರಿಸಲಾಗಿತ್ತು. ಡೋರ್ಟ್‌ಮುಂಡ್‌ನಲ್ಲಿ ಇಟಲಿ ವಿರುದ್ಧ 2–1 ರಿಂದ ಸೋತಿದ್ದ ಪಂದ್ಯದಲ್ಲಿ ಬ್ಯಾನರ್ ಕಾಣಿಸಿತ್ತು.

ಗೆಲ್ಸೆನ್‌ಕಿರ್ಚೆನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಪಂದ್ಯದ ವೇಳೆ ಸರ್ಬಿಯಾ ಅಭಿಮಾನಿಗಳು ಪ್ರದರ್ಶಿಸಿದ ಬ್ಯಾನರ್‌ನಲ್ಲಿ ಕೊಸೊವೊ ದೇಶದ ಭಾಗವನ್ನು ಸರ್ಬಿಯಾದ ನಕ್ಷೆಯೊಳಗೆ ಸೇರಿಸಲಾಗಿತ್ತು. ‘ನೊ ಸರಂಡರ್‌’ ಎಂಬ ಸಂದೇಶವೂ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.