ವೋಲ್ಗಾಗ್ರ್ಯಾದ್: ನಾಯಕ ಹ್ಯಾರಿ ಕೇನ್ ಅವರ ಅಮೋಘ ಎರಡು ಗೋಲುಗಳ ನೆರವಿನಿಂದ ಟ್ಯುನಿಷಿಯಾ ತಂಡದ ವಿರುದ್ಧ ಸೋಮವಾರ ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಗಳಿಸಿದೆ.
ಇಲ್ಲಿನ ವೋಲ್ಗಾಗ್ರ್ಯಾದ್‌ಕ್ರೀಡಾಂಗಣದಲ್ಲಿ ‘ಜಿ’ ಗುಂಪಿನ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ (90+1ನೇ ನಿಮಿಷ) ಹ್ಯಾರಿ ಕೇನ್ ಅವರು ಹೆಡರ್ ಮೂಲಕ ಗೋಲು ದಾಖಲಿಸಿ ನಾಯಕನ ಆಟಆಡಿದರು.
3–1–4–2ರ ರಣನೀತಿಯೊಂದಿಗೆ ಅಂಗಳಕ್ಕಿಳಿದಿದ್ದ ಇಂಗ್ಲೆಂಡ್ ತಂಡ ಆರಂಭದಿಂದಲೇ ಚುರುಕಿನ ಆಟ ಆಡಿತು. ಆದರೆ, ಇಂಗ್ಲೆಂಡ್ ತಂಡದ ತಂತ್ರಗಳಿಗೆ ಪ್ರತಿತಂತ್ರ ಹೂಡಿದ ಟ್ಯುನಿಷಿಯಾ ಕೂಡ ಉತ್ತಮ ಪೈಪೋಟಿ ನೀಡಿತು. ಇದರಿಂದ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಯಿತು.
ಪಂದ್ಯದ 11ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡದ ಸ್ಟ್ರೈಕರ್ ಹ್ಯಾರಿ ಕೇನ್ ಅವರು ಚೆಂಡನ್ನು ಗುರಿ ಮುಟ್ಟಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ಇಂಗ್ಲೆಂಡ್ ತಂಡದ ಸಂತಸ ಬಹಳ ಹೊತ್ತು ಉಳಿಯಲಿಲ್ಲ.
ಟ್ಯುನಿಷಿಯಾ ತಂಡದ ರಕ್ಷಣಾ ಹಾಗೂ ಮಿಡ್‌ಫೀಲ್ಡ್ ವಿಭಾಗಗಳ ಆಟಗಾರರು ಇಂಗ್ಲೆಂಡ್ ತಂಡದ ಗೋಲು ಗಳಿಸುವ ಹಲವುಪ್ರಯತ್ನಗಳನ್ನು ವಿಫಲಗೊಳಿಸಿದರು.
35ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಟ್ಯುನಿಷಿಯಾದ ಸ್ಯಾಸಿ ಸದುಪಯೋಗಪಡಿಸಿಕೊಂಡರು. ಅಮೋಘ ರೀತಿಯಲ್ಲಿ ಅವರು ಗೋಲು ಗಳಿಸಿ ಉಭಯ ತಂಡಗಳು 1–1ರ ಸಮಬಲ ಕಾಯ್ದುಕೊಳ್ಳಲು ನೆರವಾದರು.
ದ್ವಿತಿಯಾರ್ಧದ ಆರಂಭದಿಂದಲೂ ಎರಡು ತಂಡದ ಆಟಗಾರರುಹಲವು ಬಾರಿ ಗೋಲು ಗಳಿಸಲು ಯತ್ನಿಸಿದರು. ಆದರೆ, ನಿಗದಿತ ಸಮಯದಲ್ಲಿ ಮುನ್ನಡೆ ಗಳಿಸಲು ಸಾಧ್ಯವಾಗಲಿಲ್ಲ.
ಹೆಚ್ಚುವರಿ ಸಮಯದಲ್ಲಿ ಮತ್ತೆ ಹ್ಯಾರಿ ಕೇನ್ ಮಿಂಚಿದರು. ಚುರುಕಿನ ಆಟ ಆಡಿದ ಅವರು ಹೆಡರ್ ಮಾಡಿದರು. ಈ ಮೂಲಕ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ತಂಡಕ್ಕೆ ಗೆಲುವಿನ ಸಿಹಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.