ADVERTISEMENT

ಯುರೊ ಕಪ್‌ ಫುಟ್‌ಬಾಲ್‌: ಸ್ಪೇನ್‌ ನಾಲ್ಕನೇ ಬಾರಿ ಯುರೋಪ್‌ ಸಾಮ್ರಾಟ

ಇಂಗ್ಲೆಂಡ್‌ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 14:13 IST
Last Updated 15 ಜುಲೈ 2024, 14:13 IST
ಸ್ಪೇನ್‌ ತಂಡ ಭಾನುವಾರ ಫೈನಲ್ ಗೆದ್ದ ನಂತರ ವಿಜಯೋತ್ಸವದ ವೇಳೆ ಡಿಫೆಂಡರ್‌ ಅಲೆಜಾಂಡ್ರೊ ಗ್ರಿಮೆಲ್ಡೊ ಅವರು ಯುರೊ ಕಪ್‌ ಟ್ರೋಫಿಯನ್ನು ಎತ್ತಿಹಿಡಿದು ಸಹ ಆಟಗಾರರೊಂದಿಗೆ ಸಂಭ್ರಮಿಸಿದರು.
ಎಎಫ್‌ಪಿ ಚಿತ್ರ
ಸ್ಪೇನ್‌ ತಂಡ ಭಾನುವಾರ ಫೈನಲ್ ಗೆದ್ದ ನಂತರ ವಿಜಯೋತ್ಸವದ ವೇಳೆ ಡಿಫೆಂಡರ್‌ ಅಲೆಜಾಂಡ್ರೊ ಗ್ರಿಮೆಲ್ಡೊ ಅವರು ಯುರೊ ಕಪ್‌ ಟ್ರೋಫಿಯನ್ನು ಎತ್ತಿಹಿಡಿದು ಸಹ ಆಟಗಾರರೊಂದಿಗೆ ಸಂಭ್ರಮಿಸಿದರು. ಎಎಫ್‌ಪಿ ಚಿತ್ರ   

ಬರ್ಲಿನ್‌: ಸ್ಪೇನ್‌ ದಾಖಲೆಯ ನಾಲ್ಕನೇ ಬಾರಿ ಯುರೋಪ್‌ನ ಫುಟ್‌ಬಾಲ್‌ ಸಾಮ್ರಾಟನಾಯಿತು. ಪ್ರಮುಖ ಪ್ರಶಸ್ತಿಗಾಗಿ 58 ವರ್ಷಗಳಿಂದ ಕಾಯುತ್ತಿದ್ದ ಇಂಗ್ಲೆಂಡ್‌ ತಂಡ ಮತ್ತೆ ನಿರಾಸೆ ಅನುಭವಿಸಬೇಕಾಯಿತು. ಭಾನುವಾರ ರಾತ್ರಿ ನಡೆದ ಯುರೊ ಕಪ್‌ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ 2–1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು.

ಪಂದ್ಯ ಮುಗಿಯಲು ನಾಲ್ಕು ನಿಮಿಷಗಳಿರುವಾಗ (86ನೇ ನಿಮಿಷ) ಮೈಕೆಲ್‌ ಒಯರ್‌ಜಬಾಲ್‌ ಗೋಲು ಗಳಿಸಿ ಸ್ಪೇನ್‌ ‘ಗೆಲುವಿನ ರೂವಾರಿ’ ಎನಿಸಿದರು. ಪಂದ್ಯದ 67ನೇ ನಿಮಿಷ ನಾಯಕ ಅಲ್ವಾರೊ ಮೊರಾಟಾ ಅವರಿಗೆ ಸಬ್‌ಸ್ಟಿಟ್ಯೂಟ್‌ ಆಗಿ ಆಡಲಿಳಿದ ಒಯರ್‌ಜಬಾಲ್‌, ಪ್ರತಿ ದಾಳಿಯೊಂದರ ವೇಳೆ ಲೆಫ್ಟ್‌ ವಿಂಗ್ ಮಾರ್‌ ಕುಕುರೆಲ್ಲಾ ಅವರ ಕ್ರಾಸ್‌ನಲ್ಲಿ ನಿರ್ಣಾಯಕ ಗೋಲು ಗಳಿಸಿದರು.

ತವರಿನಲ್ಲಿ 1966ರ ವಿಶ್ವಕಪ್‌ ಗೆದ್ದ ನಂತರ ಯಾವುದೇ ಪ್ರಮುಖ ಪ್ರಶಸ್ತಿ ಗೆಲ್ಲಲು ಇಂಗ್ಲೆಂಡ್‌ಗೆ ಸಾಧ್ಯವಾಗಿಲ್ಲ. ಈ ಹಿಂದಿನ (2021)  ಯುರೊ ಕಪ್‌ನಲ್ಲೂ ಇಂಗ್ಲೆಂಡ್‌ ಫೈನಲ್ ತಲುಪಿದ್ದರೂ ಇಟಲಿ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲನುಭವಿಸಿತ್ತು. 1936ರ ಒಲಿಂಪಿಕ್ಸ್‌ಗಾಗಿ ನಿರ್ಮಿಸಲಾಗಿದ್ದ ಬರ್ಲಿನ್‌ನ ಒಲಿಂಪಿಯಾ ಕ್ರಿಡಾಂಗಣದಲ್ಲಿ ಸುಡುಮದ್ದುಗಳ ಹಿನ್ನೆಲೆಯಲ್ಲಿ ಮೊರಾಟ ಅವರು ಬೆಳ್ಳಿಯ ದೊಡ್ಡ ಟ್ರೋಫಿ ಎತ್ತಿ ಹಿಡಿಯುವುದನ್ನು ಇಂಗ್ಲೆಂಡ್‌ ಆಟಗಾರರು ಹತಾಶೆಯಿಂದ ನೋಡಬೇಕಾಯಿತು.

ADVERTISEMENT

ಈ ಹಿಂದೆ 1964, 2008 ಮತ್ತು 2012ರಲ್ಲಿ ಸ್ಪೇನ್‌ ಯುರೊ ಚಾಂಪಿಯನ್ ಆಗಿತ್ತು. ಉದಯೋನ್ಮುಖ ಆಟಗಾರ ನಿಕೊ ವಿಲಿಯಮ್ಸ್‌  ಅವರು 47ನೇ ನಿಮಿಷ ಸ್ಪೇನ್‌ಗೆ ಮುನ್ನಡೆ ಒದಗಿಸಿದ್ದರು. ಆದರೆ 73ನೇ ನಿಮಿಷ, ಇಂಗ್ಲೆಂಡ್‌ ಪರ ಸಬ್‌ಸ್ಟಿಟ್ಯೂಟ್‌ ಕೋಲ್ ಪಾಮರ್‌ ಸ್ಕೋರ್ ಸಮ ಮಾಡಿದ್ದರು. ಪಂದ್ಯ ಹೆಚ್ಚುವರಿ ಅವಧಿಯತ್ತ ಸಾಗುವಂತೆ ಕಂಡಾಗಲೇ ಸ್ಪೇನ್‌ ಗೋಲು ಗಳಿಸಿತು.

ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಗೋಲು ಗಳಿಸಿದ ಅತಿ ಕಿರಿಯ ಆಟಗಾರ ಎನಿಸಿದ್ದ ಲಮಿನ್ ಯಮಾಲ್ ಅವರು ವಿಲಿಯಮ್ಸ್‌ ಅವರಿಗೆ ಗೋಲು ಗಳಿಸಲು ಒಳ್ಳೆಯ ಪಾಸ್ ಪೂರೈಸಿದ್ದರು.

ಸ್ಪೇನ್‌ನ ಇಬ್ಬರು ತಾರೆಗಳು..

ಲಮಿನ್‌ ಮತ್ತು ವಿಲಿಯಮ್ಸ್‌ ಪ್ರಸಕ್ತ ಯುರೊ ಕೂಟದಲ್ಲಿ ಸ್ಪೇನ್‌ ತಂಡದ ‘ಪೋಸ್ಟರ್‌ ಬಾಯ್‌’ಗಳೆನಿಸಿದರು. ಯಮಾಲ್‌ ಈ ‘ಟೂರ್ನಿಯ ಶ್ರೇಷ್ಠ ಯುವ ಆಟಗಾರ’ ಪ್ರಶಸ್ತಿಗೆ ಪಾತ್ರರಾದರು. ಒಂದು ದಿನ ಹಿಂದಷ್ಟೇ (ಶನಿವಾರ) ಅವರು 17ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದರು. ಯಮಾಲ್ ಅವರ ತಾಯಿ ಮಧ್ಯ ಆಫ್ರಿಕದ ಇಕ್ವೆಟೋರಿಯಲ್ ಗಿನಿ ದೇಶದವರು. ತಂದೆ ಮೊರಾಕ್ಕೊದವರು.

22 ವರ್ಷದ ವಿಲಿಯಮ್ಸ್ ಅವರ ಪೋಷಕರು ಘಾನಾ ದೇಶದಿಂದ ವಲಸೆ ಬಂದವರು. ಹೊಟ್ಟೆಪಾಡಿಗಾಗಿ ಯುರೋಪ್‌ಗೆ ಅವರು ಕಿಕ್ಕಿರಿದಿದ್ದ  ಟ್ರಕ್‌ನಲ್ಲಿ ಹೇಗೊ ಜಾಗಪಡೆದು ಪಯಣಿಸಿದ್ದರು. ಸಹರಾ ಮರುಭೂಮಿಯ ಉರಿಬಿಸಿಲಲ್ಲಿ ಬರಿಗಾಲಲ್ಲಿ ನಡೆದಿದ್ದರು.

ಮುಂಚೂಣಿ ಪಡೆಯಲ್ಲಿ ಚುರುಕಿನಿಂದ ಓಡಾಡಿದ ವಿಲಿಯಮ್ಸ್‌ ಯುರೊ ಕಪ್‌ನಲ್ಲಿ ಎರಡನೇ ಗೋಲು ಗಳಿಸಿದರು. ಪಂದ್ಯದ ಆಟಗಾರ ಗೌರವವೂ ಅವರದಾಯಿತು.

‘ನಾನು ಈ ಹಂತಕ್ಕೆ ಬರಲು ನನ್ನ ತಂದೆ–ತಾಯಿ ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸಿದರು. ನನ್ನಲ್ಲಿ ಗೌರವ ಮತ್ತು ಸ್ವಾಭಿಮಾನ ಮೂಡಲು ಅವರೇ ಕಾರಣ. ನಮ್ಮ ತಂಡ ಈಗ ಇತಿಹಾಸ ನಿರ್ಮಿಸುತ್ತಿರುವುದು ಸಂತಸ ಮೂಡಿಸಿದೆ’ ಎಂದು ವಿಲಿಯಮ್ಸ್ ಹೇಳಿದರು.

ವಿಲಿಯಮ್ಸ್‌ ಸೋದರ ಇನಾಕಿ ಘಾನಾ ತಂಡಕ್ಕೆ ಆಡುತ್ತಿದ್ದಾರೆ. ನಿಕೊ ಸ್ಪೇನ್‌ಗೆ ಆಡುವುದನ್ನು ಆಯ್ಕೆ ಮಾಡಿದರು. ಈಗ ಅವರಿಗೆ ‘ರಾಷ್ಟ್ರೀಯ ಹೀರೊ’ ರೀತಿಯ ಆದರ ಸಿಗುತ್ತಿದೆ.‌

ಪ್ರಬಲ ಶಕ್ತಿ

ಸ್ಪೇನ್‌ ಈಗ ಯುರೋಪ್‌ನಲ್ಲಿ ಪ್ರಬಲ ಫುಟ್‌ಬಾಲ್‌ ಶಕ್ತಿಯಾಗಿ ಹೊಮ್ಮಿದೆ. ಮಹಿಳಾ ವಿಶ್ವಕಪ್‌ ನಂತರ ಪುರುಷರ ತಂಡ ಯುರೊ ಕಪ್‌ ಗೆದ್ದುಕೊಂಡಿದೆ. ಕಳೆದ ವರ್ಷ ಪುರುಷರ ತಂಡ ಯುಇಎಫ್‌ಎ ಕಪ್‌ ಗೆದ್ದುಕೊಂಡಿತ್ತು. 2001ರಿಂದೀಚೆ ಸ್ಪೇನ್‌ ಪುರುಷರ ತಂಡ ಕ್ಲಬ್‌ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 23 ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪೇನ್‌ ಆಡಿದ ಎಲ್ಲ ಏಳೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದು ಅಭೂತಪೂರ್ವ ಸಾಧನೆ. ಅದು ಈ ಸಲ ಗಳಿಸಿದ 15 ಗೋಲುಗಳು ಒಂದೇ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಗೋಲುಗಳ ದಾಖಲೆ ಎನಿಸಿತು.

ಇಮ್ಮಡಿಸಿದ ಖುಷಿ

ಸ್ಪೇನ್‌ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಸಾವಿರಾರು ಮಂದಿ ಫುಟ್‌ಬಾಲ್ ಅಭಿಮಾನಿಗಳು ದೈತ್ಯ ಪರದೆಯಲ್ಲಿ ಫೈನಲ್ ವೀಕ್ಷಿಸಿ ‘ಚಾಂಪಿಯನ್ಸ್, ಚಾಂಪಿಯನ್ಸ್‌’ ಎಂದು ಸ್ಪ್ಯಾನಿಷ್‌ನಲ್ಲಿ ಘೋಷಣೆಗಳನ್ನು ಕೂಡಿದರು.

ವಿಂಬಲ್ಡನ್‌ ಟೆನಿಸ್‌ನಲ್ಲಿ ಇದೇ ದೇಶದ ಕಾರ್ಲೋಸ್‌ ಅ‌ಲ್ಕರಾಜ್‌ ಅವರೂ ಭಾನುವಾರ ಚಾಂಪಿಯನ್ ಆಗಿದ್ದು ಸ್ಪೇನ್ ದೇಶದ ಸಂತಸವನ್ನು ಇಮ್ಮಡಿಸಿತು.

ಪಂದ್ಯ ವೀಕ್ಷಿಸಿದವರಲ್ಲಿ ಇಂಗ್ಲೆಂಡ್‌ನ ರಾಜಮನೆತನದ ಪ್ರಿನ್ಸ್‌ ವಿಲಿಯಮ್ಸ್, ಸ್ಪೇನ್‌ನ ರಾಜ ಫಿಲಿಪ್‌ ಅವರೂ ಒಳಗೊಂಡಿದ್ದರು. ಇಂಗ್ಲೆಂಡ್‌ ಈ ಟೂರ್ನಿಯಲ್ಲಿ ಹಿನ್ನಡೆಯಿಂದ ಚೇತರಿಸಿದ್ದು ಇದು ನಾಲ್ಕನೇ ಬಾರಿ. ‘ಈಗಲೂ ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ’

ನಿವೃತ್ತರಾದ ಮುಲ್ಲರ್ ಮ್ಯೂನಿಚ್

ಜರ್ಮನಿಯ ಫಾರ್ವರ್ಡ್ ಆಟಗಾರ ಥಾಮಸ್‌ ಮುಲ್ಲರ್‌ 14 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಜೀವನಕ್ಕೆ ವಿದಾಯ ಹೇಳಿದರು. 2014ರ ವಿಶ್ವಕಪ್‌ನಲ್ಲಿ ಗೆದ್ದ ಜರ್ಮನಿ ತಂಡದಲ್ಲಿ ಅವರು ಆಡಿದ್ದರು. ಬಯಾನ್ ಮ್ಯೂನಿಚ್‌ನ ಆಟಗಾರನಾದ ಮುಲ್ಲರ್ 131 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 45 ಗೋಲು ಗಳಿಸಿದ್ದಾರೆ. ‘ದೇಶಕ್ಕೆ ಆಡುವುದು ನನ್ನಲ್ಲಿ ಹೆಮ್ಮೆ ಮೂಡಿಸುತ್ತದೆ. ನಾವು ಒಟ್ಟಾಗಿ ಸಂಭ್ರಮ ಆಚರಿಸಿದ್ದೇವೆ. ಕಣ್ಣೀರು ಹರಿಸಿದ್ದೂ ಇದೆ’ ಎಂದು ಅವರು ಯುಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ. 34 ವರ್ಷದ ಮಿಲ್ಲರ್ ತಮ್ಮ ಕೊನೆಯ ಪಂದ್ಯ ಆಡಿದ್ದು ಈ ಬಾರಿಯ ಯುರೊ ಕ್ವಾರ್ಟರ್‌ಫೈನಲ್‌ನಲ್ಲಿ. ಜರ್ಮನಿ ಆ ಪಂದ್ಯದಲ್ಲಿ ಸ್ಪೇನ್‌ಗೆ ಮಣಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.