ನಾಜೂಕಾಗಿ ಹಾರಾಡುವ ಕೂದಲ ಎಡೆಯಲ್ಲಿ ಬೆರಳಾಡಿಸುತ್ತ ನಸುನಗೆ ಸೂಸುವ ಅವರನ್ನು ಮೇಲ್ನೋಟಕ್ಕೆ ಸಿನಿಮಾ ನಟ ಎಂದು ಭಾವಿಸಿದರೆ ಅಚ್ಚರಿಪಡುವಂಥದ್ದು ಏನೂ ಇಲ್ಲ. ಎತ್ತರದ ನಿಲುವಿನ ಸ್ಫುರದ್ರೂಪಿಯಾದ ಆ ವ್ಯಕ್ತಿ ಯಾವಾಗಲೂ ಶಾಂತಚಿತ್ತ. ಆದರೆ ಫುಟ್‌ಬಾಲ್ ಅಂಗಣದಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನ.
ಕೋಲ್ಕತ್ತದ ಸುಭಾಶಿಷ್ ರಾಯ್ ಚೌಧರಿ ಸದ್ಯ ಭಾರತದ ಪ್ರಮುಖ ಗೋಲ್‌ಕೀಪರ್‌ಗಳಲ್ಲಿ ಒಬ್ಬರು. ಗುರುಪ್ರೀತ್ ಸಿಂಗ್ ಸಂಧು, ಸುಬ್ರತಾ ಪಾಲ್, ಅಮರಿಂದರ್ ಸಿಂಗ್, ಅರಿಂದಂ ಭಟ್ಟಾಚಾರ್ಯ ಮುಂತಾದವರ ಸಾಲಿನಲ್ಲಿ ಸುಭಾಶಿಷ್ ಹೆಸರು ಹೇಳದೇ ಇರಲು ಸಾಧ್ಯವಿಲ್ಲ. ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಎಸ್‌ಎಲ್) ಟೂರ್ನಿಯ ಪ್ಲೇ ಆಫ್ ಹಂತಕ್ಕೇರಿಸುವಲ್ಲಿ ಸುಭಾಶಿಷ್ ಅವರ ಪಾತ್ರವೂ ಮಹತ್ವದ್ದಾಗಿತ್ತು. ಭಾರತ ತಂಡದಲ್ಲಿ ಆಡಿದ ಅನುಭವವೂ ಇದೆ ಈ ಆಟಗಾರನಿಗೆ.
ಗೋಲ್ ಪೋಸ್ಟ್ ಬಳಿ ಎದುರಾಳಿ ತಂಡದ ಮುನ್ನಡೆಗೆ ‘ಗೋಡೆ’ಯಾಗಿ ಅಡ್ಡಿಪಡಿಸುವ ಈ ಆಟಗಾರ ಬದುಕಿನಲ್ಲಿ ಸಂಕಷ್ಟಗಳ ಮಹಾ ತಡೆಗಳನ್ನು ಮೀರಿ ಬಂದವರು. ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆಯ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಬದುಕಿನ ಬಗ್ಗೆ ಹಂಚಿಕೊಂಡಿರುವ ಮಾಹಿತಿ ಕಲ್ಲು ಹೃದಯವನ್ನೂ ಕರಗಿಸಬಲ್ಲುದು. ‘ಬದುಕು ಕ್ರೂರಿ; ಅತ್ಯಂತ ಕ್ರೂರಿ’ ಎಂದು ಹೇಳಿಕೊಂಡಿರುವ ಸುಭಾಶಿಷ್ ತಂದೆಯ ಚಾಳಿ, ತಾಯಿಯ ಛಲದ ನಡುವೆ ತಾವು ಫುಟ್‌ಬಾಲ್ ಅಂಗಣದಲ್ಲಿ ಆಡಿ–ಬೆಳೆದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
‘ದಿನಗಟ್ಟಲೆ ಹಸಿವಿನಿಂದಿದ್ದು, ನೆರೆಮನೆಯವರು ನೀಡುವ ಹಳಸಿದ ಆಹಾರಕ್ಕಾಗಿ ಕಾಯುವ ಪರಿಸ್ಥಿತಿ ಎಂಥವರನ್ನೂ ಕುಗ್ಗಿಸಬಲ್ಲುದು, ನಾನು ಕೂಡ ಹಾಗೆಯೇ ಬೆಳೆದವ’ ಎಂದು ಹೇಳಿರುವ ಸುಭಾಶಿಷ್ ಕಷ್ಟಗಳು ಬಾಗಿಲ ಬಳಿ ನಿಂತು ಗಹಗಹಿಸಿ ನಗುವಾಗ ತಲೆ ಮೇಲೆ ಕೈ ಹೊತ್ತುಕೊಂಡು ಕೂತವರಲ್ಲ. ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಯಶಸ್ಸಿನ ಮೆಟ್ಟಿಲು ಏರಿದವರು. 18 ವರ್ಷಗಳಿಂದ ವೃತ್ತಿಪರ ಗೋಲ್‌ಕೀಪಿಂಗ್‌ನಲ್ಲಿ ತೊಡಗಿರುವ ಅವರಿಗೆ ಈಗ 35ರ ಹರಯ. ಆದರೂ ಯಾವುದೇ ಕ್ಷಣದಲ್ಲಿ ರಾಷ್ಟ್ರೀಯ ತಂಡದಿಂದ ಕರೆ ಬರುವಷ್ಟು ವಿಶ್ವಾಸವನ್ನು ಮೂಡಿಸಿದವರು; ಚೈತನ್ಯವನ್ನು ಉಳಿಸಿಕೊಂಡವರು.
‘ಕೋಲ್ಕತ್ತದ ತೆಗಾರಿಯಾದಲ್ಲಿ ನಾವು ವಾಸವಾಗಿದ್ದೆವು. ಅಪ್ಪ, ಅಮ್ಮ ಸೇರಿ ಎಂಟು ಮಂದಿಯ ದೊಡ್ಡ ಕುಟುಂಬ, ಚೆನ್ನಾಗಿಯೇ ಇದ್ದೆವು. ಆದರೆ ಸಹವಾಸ ದೋಷದಿಂದ ಅಪ್ಪ ಕ್ರಮೇಣ ಮದ್ಯ ಸೇವಿಸಲು ಅರಂಭಿಸಿದರು. ಅಲ್ಲಿಂದ ಸಮಸ್ಯೆಗಳು ಆರಂಭವಾದವು. ಆರ್ಥಿಕ ತೊಂದರೆ ತೀವ್ರವಾದಾಗ ತಾಯಿ ಮನೆಕೆಲಸಕ್ಕೆ ಹೋದರು. ತಂಗಿಯೂ ಅವರನ್ನು ಹಿಂಬಾಲಿಸಿದಳು. ಕೆಲವೊಮ್ಮೆ ಎರಡು ದಿನ ಉಪವಾಸ ಇರುತ್ತಿದ್ದೆವು. ಬಾಡಿಗೆ ಕಟ್ಟಲಾಗದೇ ಮನೆ ಮಾಲೀಕರು ಹೊರಹಾಕಿದರು. ದೂರದ ಪ್ರದೇಶಕ್ಕೆ ಹೋಗಿ ಗುಡಿಸಲಿನಿಂಥ ಸಣ್ಣ ಮನೆಯನ್ನು ಬಾಡಿಗೆಗೆ ಪಡೆದುಕೊಂಡೆವು. ಒಮ್ಮೆ ಅಮ್ಮನ ಆರೋಗ್ಯ ಹದಗೆಟ್ಟಾಗ ಆಕೆ ಕೆಲಸ ಮಾಡುತ್ತಿದ್ದ ಮನೆಗಳಿಂದ ಸಂಬಳ ಪಡೆಯಲು ಹೋಗಿದ್ದೆ. ಒಂದು ಮನೆಯವರು ಒಂದಷ್ಟು ಕೆಲಸ ಬಾಕಿ ಉಳಿಸಿದ್ದಾಳೆ, ಹೀಗಾಗಿ ಸಂಬಳ ಕೊಡಲಾಗುವುದಿಲ್ಲ ಎಂದರು. ಆಗ, ಆ ಕೆಲಸವನ್ನು ನಾನೇ ಮಾಡಿ ಮುಗಿಸಿದೆ’ ಎಂದು ಸುಭಾಷಿಷ್ ಹೇಳಿಕೊಂಡಿದ್ದಾರೆ.
‘ಮಳೆಗಾಲದಲ್ಲಿ ಮನೆ ಸೋರುತ್ತಿತ್ತು. ಆಗ ನಾವು ದೂರ ಓಡಿ ಹೋಗಿ ಯಾವುದೋ ಕಟ್ಟಡದ ಕೆಳಗೆ ಆಶ್ರಯ ಪಡೆದುಕೊಳ್ಳುತ್ತಿದ್ದೆವು. ದಿನಗಳೆದಂತೆ ಸಮಸ್ಯೆಗಳು ಹೆಚ್ಚತೊಡಗಿದವು. ಅಮ್ಮ ಸಣ್ಣದೊಂದು ಚಹಾ ಅಂಗಡಿ ತೆರೆದಳು. ಏಳನೇ ವಯಸ್ಸಿನಲ್ಲಿ ನಾನು ಕೋಳಿ ಮಾಂಸ ಮಾರಾಟದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದೆ. ಅಂಗಡಿ ಸಮೀಪದಲ್ಲೇ ಇದ್ದ ಶಾಲೆಯಲ್ಲಿ ಫುಟ್‌ಬಾಲ್ ಟೂರ್ನಿಗಳು ನಡೆಯುತ್ತಿದ್ದವು. ನಾನು ಕೆಲಸಗಳನ್ನೆಲ್ಲ ಬೇಗ ಮುಗಿಸಿ ಪಂದ್ಯ ವೀಕ್ಷಿಸಲು ಹೋಗುತ್ತಿದ್ದೆ. ಅಲ್ಲಿ ಈ ಕ್ರೀಡೆಯ ಮೇಲೆ ಪ್ರೀತಿ ಬೆಳೆಯಿತು’ ಎಂದು ಕಾಲ್ಚೆಂಡಿನಾಟಕ್ಕೆ ಮನಸೋತ ಮಾಹಿತಿ ಹಂಚಿಕೊಂಡಿದ್ದಾರೆ.
‘ಅಂತೂ ಇಂತೂ ಫುಟ್‌ಬಾಲ್ ಶಿಬಿರ ಸೇರಿದೆ. ಅಲ್ಲಿ ಅಭ್ಯಾಸಕ್ಕೆ ಸಮಯ ಹೊಂದಿಸುವುದಕ್ಕಾಗಿ ಮುಂಜಾನೆ ಮೂರು ಗಂಟೆಗೆ ಎದ್ದು ಕೆಲಸಕ್ಕೆ ಹೋಗಿ ಒಂದಷ್ಟು ಕೆಲಸಗಳನ್ನು ಮುಗಿಸುತ್ತಿದ್ದೆ. ಒಂದು ದಿನ ತಂದೆ ತೀರಿಕೊಂಡರು. ಅಮ್ಮ ತೆಗೆದಿರಿಸಿದ್ದ ಅಲ್ಪಸ್ವಲ್ಪ ಹಣದಲ್ಲಿ ಸಣ್ಣ ಜಾಗ ಖರೀದಿಸಿದೆವು. ಮನ್ಸೂರ್ ಅಲಿ ಖಾನ್ ಅವರು ನನ್ನನ್ನು ಪುರುಲಿಯಾಗೆ ಕಳುಹಿಸಿದರು. ಅಲ್ಲಿ ನನ್ನ ಆಟದ ಸಾಮರ್ಥ್ಯ ಪ್ರದರ್ಶನಕ್ಕೆ ಸಮರ್ಪಕ ವೇದಿಕೆ ಲಭಿಸಿತು. ಸುಬ್ರೊತೊ ಕಪ್‌ನಲ್ಲಿ ಶ್ರೇಷ್ಠ ಆಟಗಾರ ಪ್ರಶಸ್ತಿ ಲಭಿಸಿತು. 16–17ರ ಹರೆಯದಲ್ಲಿ ಫುಟ್‌ಬಾಲ್ ಅಭ್ಯಾಸ ಜೋರಾಗಿ ನಡೆಯಿತು. ನಂತರ ವೃತ್ತಿ–ಬದುಕು ಬದಲಾಯಿತು’ ಎಂದು ತಿಳಿಸಿದ್ದಾರೆ.
2008ರಿಂದ ರಾಷ್ಟ್ರೀಯ ತಂಡಲ್ಲಿ ಆಡುತ್ತಿರುವ ಸುಭಾಷಿಷ್ ಈ ವರೆಗೆ ನಾಲ್ಕು ಪಂದ್ಯಗಳಲ್ಲಿ ಗೋಲ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕ್ಲಬ್ ಮಟ್ಟದಲ್ಲಿ ಈಸ್ಟ್ ಬೆಂಗಾಲ್, ಮಹೀಂದ್ರಾ ಯುನೈಟೆಡ್, ಡೆಂಪೊ, ಅಟ್ಲೆಟಿಕೊ ಡಿ ಕೋಲ್ಕತ್ತ ಮುಂತಾದ ತಂಡಗಳಲ್ಲಿ ಆರಂಭದ ವರ್ಷಗಳನ್ನು ಕಳೆದು, ಐಎಸ್‌ಎಲ್ ಆರಂಭವಾದ ನಂತರ ಡೆಲ್ಲಿ ಡೈನಮೋಸ್, ಎಫ್‌ಸಿ ಗೋವಾ, ಕೇರಳ ಬ್ಲಾಸ್ಟರ್ಸ್ ಹಾಗೂ ಜೆಮ್ಶೆಡ್‌ಪುರ ಎಫ್‌ಸಿಯಲ್ಲಿ ಆಡಿದ್ದರೆ. 2019ರಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡದಲ್ಲಿದ್ದಾರೆ. ಐಎಸ್‌ಎಲ್‌ನಲ್ಲಿ ಒಟ್ಟು 53 ಪಂದ್ಯಗಳನ್ನು ಆಡಿದ್ದು 150 ಗೋಲು ತಡೆದಿದ್ದಾರೆ. 66 ಗೋಲು ಬಿಟ್ಟುಕೊಟ್ಟಿರುವ ಅವರ ಕ್ಲೀನ್ ಶೀಟ್ ಸಾಧನೆ 13. ಈ ಬಾರಿ 15 ಪಂದ್ಯಗಳಲ್ಲಿ 26 ಗೋಲು ತಡೆದಿದ್ದು 20 ಗೋಲು ಬಿಟ್ಟುಕೊಟ್ಟಿದ್ದಾರೆ. ಮೂರು ಕ್ಲೀನ್ ಶೀಟ್ ಸಾಧನೆಯೂ ಅವರ ಹೆಸರಿನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.