ADVERTISEMENT

ವಿಶ್ವ ಕಪ್‌ ಅರ್ಹತಾ ಪಂದ್ಯ: ಚೆಟ್ರಿ ಇಲ್ಲದ ಭಾರತ ತಂಡಕ್ಕೆ ಇಂದು ಕತಾರ್‌ ಸವಾಲು

ಪಿಟಿಐ
Published 10 ಜೂನ್ 2024, 23:30 IST
Last Updated 10 ಜೂನ್ 2024, 23:30 IST
<div class="paragraphs"><p>ಸುನಿಲ್ ಚೆಟ್ರಿ</p></div>

ಸುನಿಲ್ ಚೆಟ್ರಿ

   

ರಾಯಿಟರ್ಸ್‌ ಚಿತ್ರ

ದೋಹಾ: ಸುಮಾರು ಎರಡು ದಶಕಗಳ ಕಾಲ ಭಾರತದ ಫುಟ್‌ಬಾಲ್‌ ರಂಗದ ತಾರೆಯಾಗಿ ಮಿನುಗಿದ್ದ ಸುನಿಲ್‌ ಚೆಟ್ರಿ ಅವರ ನಿವೃತ್ತಿ ಈಗ ತಂಡದಲ್ಲಿ ನಿರ್ವಾತ ಸೃಷ್ಟಿಸಿದೆ. ಅವರಿಲ್ಲದ ಭಾರತ ತಂಡ, ಮಂಗಳವಾರ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಟೂರ್ಇ ‘ಎ’ ಗುಂಪಿನ ಪಂದ್ಯದಲ್ಲಿ ಪ್ರಬಲ ಕತಾರ್ ತಂಡವನ್ನು ಎದುರಿಸಬೇಕಾಗಿದೆ.

ADVERTISEMENT

ಕಳೆದ ವಾರ ಕುವೈತ್ ವಿರುದ್ಧ ಕೋಲ್ಕತ್ತದಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ಚೆಟ್ರಿ ಕೊನೆಯ ಬಾರಿ ರಾಷ್ಟ್ರೀಯ ತಂಡದ ಪರ ಆಡಿದ್ದರು. ಚೆಟ್ರಿ ಅವರಿಗೆ ಗೆಲುವಿನ ಉಡುಗೊರೆ ನೀಡಲು ತಂಡಕ್ಕೆ ಆಗಿರಲಿಲ್ಲ. ಆ ಪಂದ್ಯ ಗೋಲಿಲ್ಲದೇ ‘ಡ್ರಾ’ ಆಗಿತ್ತು. 151 ಪಂದ್ಯಗಳನ್ನಾಡಿರುವ ಚೆಟ್ರಿ 94 ಗೋಲುಗಳನ್ನು ಹೊಡೆದಿದ್ದಾರೆ.

72 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಗೋಲ್‌ ಕೀಪರ್‌ ಗುರುಪ್ರೀತ್ ಸಿಂಗ್ ಸಂಧು ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 32 ವರ್ಷದ ಸಂಧು ತಂಡದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಆಟಗಾರರಾಗಿದ್ದಾರೆ.

ಚೆಟ್ರಿ ಅನುಪಸ್ಥಿತಿಯಲ್ಲಿ ಜಾಸಿನ್ ಬಿನ್ ಹಮದ್‌ ಕ್ರೀಡಾಂಗಣದಲ್ಲಿ ಭಾರತಕ್ಕೆ ಸತ್ವಪರೀಕ್ಷೆ ಎದುರಾಗಲಿದೆ. ಇಲ್ಲಿ ಸೋಲು ಎದುರಾದರೆ, ವಿಶ್ವಕಪ್‌ ಅರ್ಹತಾ ಮೂರನೇ ಸುತ್ತಿನಲ್ಲಿ ಆಡುವ ಕನಸು ಕೂಡ ಕೈಜಾರಲಿದೆ ಎಂದು ತಂಡಕ್ಕೂ ತಿಳಿದಿದೆ. ಭಾರತ ಈಗ –3 ಗೋಲು ವ್ಯತ್ಯಾಸದೊಡನೆ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ಸೌದಿ ಅರೇಬಿಯಾದ ಹೌಫ್‌ನಲ್ಲಿ ಕಳೆದ ವಾರ ನಡೆದ ಪಂದ್ಯದಲ್ಲಿ ಕತಾರ್ ಜೊತೆ ಗೋಲಿಲ್ಲದೇ ‘ಡ್ರಾ’ ಮಾಡಿಕೊಂಡಿದ್ದ ಅಫ್ಗಾನಿಸ್ತಾನ ಮೂರನೇ ಸ್ಥಾನದಲ್ಲಿದೆ. ಭಾರತ ಮತ್ತು ಅಫ್ಗಾನಿಸ್ತಾನ (ತಲಾ 1 ಗೆಲುವು, 2 ಡ್ರಾ) ತಲಾ ಐದು ಪಾಯಿಂಟ್ಸ್‌ ಗಳಿಸಿವೆ. ಅದರೆ ಅಫ್ಗಾನಿಸ್ತಾನ ಗೋಲು ವ್ಯತ್ಯಾಸ (–10) ಹೆಚ್ಚು ಇದೆ.

ಈ ಎಲ್ಲ ಕಾರಣಗಳಿಂದ ಇಗೊರ್‌ ಸ್ಟಿಮಾಚ್‌ ತರಬೇತಿಯಲ್ಲಿರುವ ಭಾರತ ತಂಡದ ಆಟಗಾರರ ಮೇಲೆ ಹೆಚ್ಚಿನ ಒತ್ತಡವೂ ಇದೆ.

ಗುಂಪಿನಲ್ಲಿ ಅಗ್ರಸ್ಥಾನ (13 ಪಾಯಿಂಟ್ಸ್‌) ಗಳಿಸಿ ಈಗಾಗಲೇ ಮೂರನೇ ಸುತ್ತಿಗೆ ಮುನ್ನಡೆದಿರುವ ಕತಾರ್‌ ಯುವ ತಂಡವನ್ನು ಹೊಂದಿದೆ. ತಂಡದಲ್ಲಿರುವ 29 ಮಂದಿ ಆಟಗಾರರ ಪೈಕಿ 21 ಮಂದಿ 24 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ದೋಹಾದಲ್ಲಿ ಎರಡು ದಿನ ಅಭ್ಯಾಸ ನಡೆಸಿರುವ ಭಾರತ ಮಂಗಳವಾರದ ಪಂದ್ಯ ಗೆದ್ದಲ್ಲಿ, ಗುಂಪಿನಲ್ಲಿ ಎರಡನೇ ಸ್ಥಾನದೊಡನೆ ಮೂರನೇ ಸುತ್ತಿಗೆ ಹೋಗುವ ದಾರಿ ಸುಲಭವಾಗಲಿದೆ. ಜೊತೆಗೆ ಏಷ್ಯನ್ ಕಪ್‌ನಲ್ಲಿ ಆಡಲು ನೇರ ರಹದಾರಿಯೂ ಸಿಗಲಿದೆ.

ಒಂದೊಮ್ಮೆ ಕತಾರ್ ಎದುರು ‘ಡ್ರಾ’ ಮಾಡಿಕೊಂಡಲ್ಲೂ ಮೂರನೇ ಸುತ್ತಿಗೆ ಹೋಗುವ ತಂಡಕ್ಕೆ ಅವಕಾಶವಿದೆ. ಆದರೆ ಕುವೈತ್ ಮತ್ತು ಅಫ್ಗಾನಿಸ್ತಾನ ನಡುವಣ ಪಂದ್ಯವೂ ‘ಡ್ರಾ’ ಆಗಬೇಕಷ್ಟೇ. ಆಗ ಉತ್ತಮ ಗೋಲು ವ್ಯತ್ಯಾಸದಲ್ಲಿ ಭಾರತ ಮುನ್ನಡೆಯಲಿದೆ. ‘ಎ’ ಗುಂಪಿನಲ್ಲಿ ಕುವೈತ್ ನಾಲ್ಕನೇ ಸ್ಥಾನದಲ್ಲಿದ್ದರೂ, ಗೆದ್ದಲ್ಲಿ ಅದಕ್ಕೂ ಅವಕಾಶ ಇಲ್ಲದಿಲ್ಲ.

ಚೆಟ್ರಿ ನಂತರ ಮುಂದೆ ಯಾರು ಎಂಬ ಪ್ರಶ್ನೆ ದೀರ್ಘ ಕಾಲದಿಂದ ಕೇಳಿಬರುತ್ತಿದೆ. ಅದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಅಂಥ ಪರ್ಯಾಯ ಆಟಗಾರನ ಲಕ್ಷಣ ಇದುವರೆಗೆ ಯಾರಲ್ಲೂ ಕಂಡಿಲ್ಲ.

ಬದಲಿ ಆಟಗಾರನಾಗಿ ಈ ಹಿಂದಿನ (ಕುವೈತ್ ವಿರುದ್ಧ) ಪಂದ್ಯದಲ್ಲಿ ಕಣಕ್ಕಿಳಿದಿದ್ದ ರಹೀಮ್ ಅಲಿ ‘ಫಿನಿಷಿಂಗ್‌ ಕೌಶಲದಲ್ಲಿ’ ಹಿಂದೆಬಿದ್ದಿದ್ದರು. ಮುನ್ಪಡೆಯಲ್ಲಿರುವ ಮನ್ವಿರ್‌ ಸಿಂಗ್, ವಿಕ್ರಮ್ ಪ್ರತಾಪ್ ಸಿಂಗ್ ಮತ್ತು ಡೇವಿಡ್‌ ಲಾಲನ್‌ಸಂಗ ಇನ್ನೂ ಛಾಪು ಮೂಡಿಸಿಲ್ಲ.

ಭಾರತದ ಈ ದೌರ್ಬಲ್ಯವನ್ನು ಕತಾರ್ ತನ್ನ ಲಾಭಕ್ಕೆ ಬಳಸಲು ಮುಂದಾಗುವುದು ಖಚಿತ. ಹೀಗಾಗಿ ಡಿಫೆಂಡರ್‌ಗಳಾದ ಅನ್ವರ್ ಅಲಿ, ಮೆಹ್ತಾಬ್‌ ಸಿಂಗ್‌, ನಿಖಿಲ್ ಪೂಜಾರಿ ಮತ್ತು ರಾಹುಲ್‌ ಭೆಕೆ ಅವರು ಒತ್ತಡ ನಿಭಾಯಿಸಬೇಕಾಗಲಿದೆ.

ಮಿಡ್‌ಫೀಲ್ಡ್‌ನಲ್ಲಿ ಸಹಲ್ ಅಬ್ದುಲ್ ಸಮದ್, ಅನಿರುದ್ಧ ಥಾಪಾ, ಬ್ರಂಡನ್ ಫರ್ನಾಂಡಿಸ್‌, ಲಿಸ್ಟನ್ ಕೊಲಾಕೊ ಮತ್ತು ಲಾಲಿಯನ್‌ಜುವಾಲ ಚಾಂಗ್ಟೆ ಅವರು ಪಾಸಿಂಗ್‌ನಲ್ಲಿ ಚುರುಕಾದಲ್ಲಿ ಈ ಒತ್ತಡ ಕಡಿಮೆಯಾಗಬಹುದು.

ಪಂದ್ಯ ಆರಂಭ: ರಾತ್ರಿ 9.15.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.