ಬೆಂಗಳೂರು: ಎಂಟು ವರ್ಷಗಳಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದಲ್ಲಿ ಆಡುತ್ತಿರುವ ಸ್ಟ್ರೈಕರ್ ಸುನಿಲ್ ಚೆಟ್ರಿ ಇನ್ನೂ ಎರಡು ವರ್ಷ ತಂಡದೊಂದಿಗೆ ಇರಲು ನಿರ್ಧರಿಸಿದ್ದಾರೆ. ಕ್ಲಬ್ ಜೊತೆಗಿನ ಒಪ್ಪಂದವನ್ನು ಚೆಟ್ರಿ ಮುಂದುವರಿಸಿದ್ದಾರೆ ಎಂದು ಬಿಎಫ್‌ಸಿ ಭಾನುವಾರ ತಿಳಿಸಿದೆ.
2013ರಲ್ಲಿ ಕ್ಲಬ್ ಆರಂಭವಾದಾಗಿನಿಂದ ಬಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸುನಿಲ್ ಚೆಟ್ರಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ತಂಡಕ್ಕಾಗಿ 203 ಪಂದ್ಯಗಳನ್ನು ಆಡಿದ್ದು 101 ಗೋಲು ಗಳಿಸಿದ್ದಾರೆ.
ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ನೀಡುವ ವರ್ಷದ ಆಟಗಾರ ಪ್ರಶಸ್ತಿಗೆ ಆರು ಬಾರಿ ಆಯ್ಕೆಯಾಗಿರುವ ಚೆಟ್ರಿ ಅವರು ಫೆಡರೇಷನ್ ಕಪ್ (2015, 2017), ಐಎಸ್‌ಲ್ (2018) ಮತ್ತು ಸೂಪರ್ ಕಪ್ (2018) ಸೇರಿದಂತೆ ಐದು ಪ್ರಮುಖ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
‘ಕ್ಲಬ್‌ನ ಆರಂಭದಿಂದ ಸನಿಲ್ ಚೆಟ್ರಿ ಅವಿಭಾಜ್ಯ ಅಂಗವಾಗಿದ್ದಾರೆ. ಆಟಗಾರನಾಗಿ ತಂಡಕ್ಕೆ ಅವರು ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ನಾಯಕನಾಗಿ ಅವರು ಮುನ್ನಡೆಸುತ್ತಿದ್ದರೆ ತಂಡದ ಆಟಗಾರರಿಗೆ ಹೊಸ ಹುರುಪು ಬಂದಿರುತ್ತದೆ. ಆದ್ದರಿಂದ ಅವರೊಂದಿಗೆ ಒಪ್ಪಂದ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಕ್ಲಬ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂದಾರ್ ತಮ್ಹಾನೆ ಹೇಳಿದ್ದಾರೆ.
‘ಬೆಂಗಳೂರು ನನಗೆ ಈಗ ತವರು ಇದ್ದಂತೆ. ಬಿಎಫ್‌ಸಿ ನನ್ನ ಕುಟುಂಬದಂತೆ. ಈ ತಂಡ, ಇದರ ಅಭಿಮಾನಿಗಳು ಮತ್ತು ಬೆಂಗಳೂರು ನಗರವನ್ನು ನಾನು ಹೃದಯಾಂತರಾಳದಿಂದ ಪ್ರೀತಿಸುತ್ತೇನೆ. ಆದ್ದರಿಂದ ಬಿಎಫ್‌ಸಿ ಜೊತೆಗೆ ಒಪ್ಪಂದ ಮುಂದುವರಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ’ ಎಂದು ಚೆಟ್ರಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.