ಬ್ರಿಸ್ಬೇನ್ : ವಿರಾಮಕ್ಕೆ ಮೊದಲು ಮತ್ತು ನಂತರ ಒಂದೊಂದು ಗೋಲುಗಳನ್ನು ಗಳಿಸಿದ ಸ್ವೀಡನ್ ತಂಡ 2–0 ಯಿಂದ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಮೂರನೇ ಸ್ಥಾನ ಪಡೆಯಿತು.
ಸುಮಾರು 50,000ದಷ್ಟಿದ್ದ ಪ್ರೇಕ್ಷಕರಿದ್ದ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸ್ವೀಡನ್ 30ನೇ ನಿಮಿಷ ಮುನ್ನಡೆಯಿತು. ಫ್ರಿಡೊಲಿನಾ ರೋಲ್ಫೊ ತಂಡಕ್ಕೆ ಮುನ್ನಡೆ ಒದಗಿಸಿದರು. 62ನೇ ನಿಮಿಷ ಕೊಸೊವರೆ ಅಸ್ಲಾನಿ ಶಕ್ತಿಶಾಲಿ ಒದೆತದಲ್ಲಿ ಚೆಂಡನ್ನು ಗುರಿಮುಟ್ಟಿಸಿ ಮುನ್ನಡೆಯನ್ನು ಹೆಚ್ಚಿಸಿದರು.
ವಿಶ್ವದಲ್ಲಿ ಮೂರನೇ ಕ್ರಮಾಂಕ ಪಡೆದಿರುವ ಸ್ವೀಡನ್ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಮೂರನೇ ಸ್ಥಾನ ಪಡೆದಂತಾಗಿದೆ. ಆಟದ ರೀತಿ ನೋಡಿದರೆ ಈ ತಂಡವು ವಿಜಯಕ್ಕೆ ಯೋಗ್ಯವಾಗಿತ್ತು. ಮಿಡ್‌ಫೀಲ್ಡ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಸ್ವೀಡನ್, ಆಸ್ಟ್ರೇಲಿಯಾದ ಅಪಾಯಕಾರಿ ಆಟಗಾರ್ತಿ ಸ್ಯಾಮ್ ಕೆರ್ ಅವರಿಗೆ ‘ಸರ್ಪಗಾವಲು’ ಹಾಕಿದರು. ಹೀಗಾಗಿ ಅವರಿಗೆ ಪದೇ ಪದೇ ಗೋಲಿನತ್ತ ಮುನ್ನುಗ್ಗಲು ಆಗಲಿಲ್ಲ.
ಆಸ್ಟ್ರೇಲಿಯಾದ ಇನ್ನೊಬ್ಬ ಸ್ಟಾರ್ ಆಟಗಾರ್ತಿ ಮೇರಿ ಫೌಲರ್ ಅವರಿಗೂ ಈ ಪಂದ್ಯ ನೆನಪಿನಲ್ಲಿಡುವಂತೆ ಇರಲಿಲ್ಲ. ಅವರು ಸ್ವೀಡನ್ ಡಿಫೆಂಡರ್‌ಗಳ ವೇಗ ಮತ್ತು ಶಕ್ತಿಗೆ ಸುಸ್ತಾದಂತೆ ಕಂಡರು.
ಇನ್ನೊಂದೆಡೆ ಸ್ವೀಡನ್‌ನ ದಾಳಿಯ ಮುಂಚೂಣಿಯಲ್ಲಿದ್ದ ಸ್ಟಿನಾ ಬ್ಲ್ಯಾಕ್‌ಸ್ಟೀನಿಯಸ್, ಆಸ್ಟ್ರೇಲಿಯಾದ ಗೋಲಿನತ್ತ ಆಗಾಗ ಮುನ್ನುಗ್ಗಿದರು. 63 ನಿಮಿಷಗಳ ಕಾಲ ಆಡಿದ ಅವರು ತಂಡ ಗಳಿಸಿದ್ದ ಎರಡೂ ಗೋಲಿನಲ್ಲಿ ಪಾತ್ರ ವಹಿಸಿದ್ದರು.
ಕೊನೆಯ 20 ನಿಮಿಷ ಆಸ್ಟ್ರೇಲಿಯಾ ಗೋಲು ಗಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿತು. ದೂರದ ‘ಕ್ರಾಸ್’
ಗಳ ಮೂಲಕ ಸ್ವೀಡನ್ ಗೋಲಿನತ್ತ ಸಾಗಿದರು. ಆದರೆ ಸ್ವೀಡನ್ ಗೋಲ್‌ಕೀಪರ್ ಝೆಸಿರಾ ಮುಸೊವಿಕ್ ಅವರಿಗೆ ಅಂಥ ಅಗ್ನಿಪರೀಕ್ಷೆ ಎದುರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.