ಕಲಿನಿಂಗ್ರಾದ್, ರಷ್ಯಾ: ಸರ್ಬಿಯಾ ಎದುರಿನ ಪಂದ್ಯದಲ್ಲಿ ಗೋಲು ಗಳಿಸಿದ ನಂತರ ಸ್ವಿಟ್ಜರ್‌ಲೆಂಡ್‌ನ ಕ್ಸಾಕಾ ಮತ್ತು ಶಾಕಿರಿ ಅವರು ಅಲ್ಬೇನಿಯಾ ದೇಶದ ಧ್ವಜದಲ್ಲಿರುವ ಎರಡು ತಲೆಯ ಹದ್ದಿನ ರೀತಿ ಸಂಜ್ಞೆ ಮಾಡಿ ಸಂಭ್ರಮಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಉಭಯ ಆಟಗಾರರು ಈ ರೀತಿ ಸಂಭ್ರಮಿಸಿದ್ದಕ್ಕೆ ಅಲ್ಬೇನಿಯಾದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಮತ್ತು ಜನಾಂಗೀಯ ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ ಎಂದು ಹಲವರು ಟೀಕಿಸಿದ್ದಾರೆ.
ಕ್ಸಾಕಾ ಮತ್ತು ಶಾಕಿರಿ ಅವರು ಸರ್ಬಿಯಾ ಮತ್ತು ಅಲ್ಬೇನಿಯಾದ ಗಡಿಭಾಗದಲ್ಲಿರುವ ವಿವಾದಿತ ಪ್ರದೇಶ ಕೊಸೊವೊದಲ್ಲಿ ಜನಿಸಿದವರು. ಕೊಸೊವೊವನ್ನು ಸ್ವತಂತ್ರ ಪ್ರದೇಶವನ್ನಾಗಿ ಘೋಷಿಸುವಂತೆ ನಡೆದ ಹೋರಾಟದಲ್ಲಿ ಕ್ಸಾಕಾ ಅವರ ತಂದೆ ಭಾಗಿಯಾಗಿದ್ದರು. ಇದಕ್ಕಾಗಿ ಅವರು ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು.
ಶಾಕಿರಿ ಅವರ ಕುಟುಂಬದವರು ಕೊಸೊವೊದಿಂದ ವಲಸೆ ಹೋಗಿ ಸ್ವಿಟ್ಜರ್‌ಲೆಂಡ್‌ನಲ್ಲಿ ನಿರಾಶ್ರಿತರಾಗಿ ನೆಲೆ ಕಂಡುಕೊಂಡಿದ್ದರು. ಶಾಕಿರಿ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ನೆಲೆಸಿದ್ದರೂ ಕೊಸೊವೊ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ ಅವರು ಧರಿಸುತ್ತಿರುವ ಬೂಟುಗಳ ಪೈಕಿ ಒಂದರ ಮೇಲೆ ಸ್ವಿಟ್ಜರ್‌ಲೆಂಡ್, ಮತ್ತೊಂದರ ಮೇಲೆ ಕೊಸೊವೊದ ಧ್ವಜದ ಚಿತ್ರಗಳಿವೆ.
‘ಗೋಲು ಗಳಿಸಿದ ನಂತರ ಭಾವುಕನಾಗಿ ಆ ರೀತಿ ಸಂಭ್ರಮಿಸಿದ್ದೆ. ಇದಕ್ಕೆ ವಿವಾದದ ರೂಪ ನೀಡುವುದು ಬೇಡ. ಈ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ’ ಎಂದು ಪಂದ್ಯದ ನಂತರ ಶಾಕಿರಿ ಪ್ರತಿಕ್ರಿಯಿಸಿದ್ದಾರೆ.
ಶಾಕಿರಿ ಅವರು ಸರ್ಬಿಯಾ ಎದುರಿನ ಪಂದ್ಯದ ವೇಳೆ ಧರಿಸಿದ್ದ ಬೂಟುಗಳ ಮೇಲೆ ಸ್ವಿಟ್ಜರ್‌ಲೆಂಡ್ (ಎಡ) ಮತ್ತು ಕೊಸೊವೊ ದೇಶಗಳ ಧ್ವಜದ ಚಿತ್ರ ಇರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.