ADVERTISEMENT

ಚೌಬೆ ದೂರವಿದ್ದಷ್ಟೂ ಭಾರತದ ಫುಟ್‌ಬಾಲ್‌ಗೆ ಒಳಿತು: ಸ್ಟಿಮಾಚ್‌

ಪಿಟಿಐ
Published 21 ಜೂನ್ 2024, 14:02 IST
Last Updated 21 ಜೂನ್ 2024, 14:02 IST
   

ನವದೆಹಲಿ: ಭಾರತ ತಂಡದ ಕೋಚ್‌ ಸ್ಥಾನದಿಂದ ಪದಚ್ಯುತರಾದ ಕೋಚ್‌ ಇಗೊರ್‌ ಸ್ಟಿಮಾಚ್‌ ಅವರು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷ ಕಲ್ಯಾಣ್ ಚೌಬೆ ವಿರುದ್ಧ ಹರಿಹಾಯ್ದಿದ್ದಾರೆ. ಅವರು ಅಧ್ಯಕ್ಷ ಸ್ಥಾನದಿಂದ ಎಷ್ಟು ಬೇಗ ನಿರ್ಗಮಿಸುವರೊ, ದೇಶದ ಫುಟ್‌ಬಾಲ್‌ ಭವಿಷ್ಯಕ್ಕೆ ಅಷ್ಟು ಒಳಿತಾಗಲಿದೆ ಎಂದು ಹೇಳಿದ್ದಾರೆ.

ಕಳೆದ ಸೋಮವಾರ ಕ್ರೊವೇಷಿಯಾದ ಸ್ಟಿಮಾಚ್ ಅವರನ್ನು ಕೋಚ್ ಸ್ಥಾನದಿಂದ ವಜಾ ಮಾಡಲಾಗಿತ್ತು. ಅದರ ಮರುದಿನವೇ ಆಕ್ರೋಶ ವ್ಯಕ್ತಪಡಿಸಿದ್ದ ಸ್ಟಿಮಾಚ್‌, ತಮ್ಮ ಬಾಕಿಯನ್ನು 10 ದಿನಗಳ ಒಳಗೆ ತೀರಿಸದಿದ್ದರೆ, ಫಿಫಾ ಟ್ರಿಬ್ಯೂನಲ್‌ನಲ್ಲಿ ಎಐಎಫ್‌ಎಫ್‌ ವಿರುದ್ಧ ದಾವೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು.

ಭಾರತದ ಫುಟ್‌ಬಾಲ್‌ ‘ಬಂದಿಯಾಗಿದೆ’ ಎಂದು ಶುಕ್ರವಾರ ದೀರ್ಘ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಸ್ಟಿಮಾಚ್‌ ಈ ಆಟವನ್ನು ಕಾಡುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಚೌಬೆ ಅವರನ್ನು ಹೊಣೆ ಮಾಡಿದರು. ತಮ್ಮ ಅವಧಿಯಲ್ಲಿ ಅವರ ಸುಳ್ಳೂ ಮತ್ತು ಈಡೇರಿಸದೇ ಹೋದ ಭರವಸೆಗಳಿಂದ ಜುಗುಪ್ಸೆಗೊಂಡಿರುವುದಾಗಿ ತಿಳಿಸಿದರು.

ADVERTISEMENT

‘ಜನಪ್ರಿಯತೆಯ ಕಡೆಗಷ್ಟೇ ಕಲ್ಯಾಣ್ ಅವರ ಗಮನವಿದೆ. ಇತ್ತೀಚಿನ ಮಾಧ್ಯಮಗೋಷ್ಠಿಗಳಿಂದ ಇದು ಗೊತ್ತಾಗುತ್ತದೆ.  ಅವರು ರಾಜಕಾರಣಿಯೆಂದು ನೀವು ಹೇಳುತ್ತೀರಿ. ಆದರೆ ಕೋಲ್ಕತ್ತದಲ್ಲೇ ಬಹಳಷ್ಟು ಮಂದಿಗೆ ಅವರು ಗೊತ್ತಿಲ್ಲ. ನಮಗೆ ಸಮರ್ಥ, ಪ್ರಭಾವಶಾಲಿ ಮತ್ತು ಭಾರತದ ಫುಟ್‌ಬಾಲ್‌ ಮುನ್ನಡೆಸುವವರ ಅಗತ್ಯವಿದೆ’ ಎಂದು ಸ್ಟಿಮಾಚ್ ಹೇಳಿದರು.

ಎಐಎಫ್‌ಎಫ್‌ ತಾಂತ್ರಿಕ ಸಮಿತಿ ಮುಖ್ಯಸ್ಥ ಐ.ಎಂ.ವಿಜಯನ್ ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಸ್ಟಿಮಾಚ್‌, ‘ಅವರು ಈ ಹುದ್ದೆಗೆ ಯೋಗ್ಯರಲ್ಲ‘ ಎಂದರು. ‘ವಿಜಯನ್ ಅಮೋಘ ಆಟಗಾರ. ಆದರೆ ಫೆಡರೇಷನ್‌ನ ತಾಂತ್ರಿಕ ಸಮಿತಿಗೆ ಅವರು ಸರಿಹೊಂದುವ ವ್ಯಕ್ತಿಯಲ್ಲ’ ಎಂದರು.

1998ರ ಫ್ರಾನ್ಸ್‌ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ತಂಡದಲ್ಲಿ ಸ್ಟಿಮಾಚ್ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.