ಕೊಚ್ಚಿ: ಗೋಕುಲಂ ಕೇರಳ ಫುಟ್‌ಬಾಲ್ ಕ್ಲಬ್‌ನ ಗೋಲ್‌ಕೀಪರ್ ಉಬೈದ್ ಸಿ.ಕೆ. ಅವರು ತಮ್ಮ ಜೆರ್ಜಿ ಹರಾಜು ಮಾಡಿದ್ದು, ₹ 33 ಸಾವಿರ ಸಂಗ್ರಹಿಸಿ ಕೋವಿಡ್ ವಿರುದ್ಧ ರಾಜ್ಯದ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಐ–ಲೀಗ್ ಪ್ರಶಸ್ತಿ ಗೆದ್ದ ತಂಡದಲ್ಲಿ ಗೋಲ್‌ಕೀಪರ್ ಆಗಿದ್ದ ಉಬೈದ್ ಸಂಗ್ರಹವಾದ ಹಣವನ್ನು ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಕೊಟ್ಟಿದ್ದಾರೆ.
‘ಐ–ಲೀಗ್ ಪ್ರಶಸ್ತಿ ಗಳಿಸಿದ್ದು ಕೇರಳಕ್ಕೆ ಸಂಬಂಧಿಸಿ ಐತಿಹಾಸಿಕ ಗಳಿಗೆ. ಈ ಪ್ರಶಸ್ತಿ ನನ್ನ ಕನಸು ಕೂಡ ಆಗಿತ್ತು. ಮಲಯಾಳಿಯಾಗಿದ್ದು, ನನ್ನ ರಾಜ್ಯದ ತಂಡವೊಂದಕ್ಕೆ ಈ ಪ್ರಶಸ್ತಿ ಗೆಲ್ಲಿಸಿಕೊಡಲು ಸಾಧ್ಯವಾದದ್ದು ನನ್ನ ಪಾಲಿಗೆ ಮರೆಯಲಾಗದ ಸಂಗತಿ’ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ವೆಬ್‌ಸೈಟ್‌ಗೆ ಉಬೈದ್ ತಿಳಿಸಿದ್ದಾರೆ.
’ಪ್ರಶಸ್ತಿ ಗೆದ್ದ ಪಂದ್ಯದಲ್ಲಿ ತೊಟ್ಟ ಜೆರ್ಸಿಯೂ ನನಗೆ ವಿಶೇಷವಾದದ್ದು. ಅದು ನನ್ನ ಹೃದಯಾಂತರಾಳದಲ್ಲಿ ನೆಲೆನಿಂತಿದೆ. ಆದರೆ ಸದ್ಯ ಎಲ್ಲಕ್ಕಿಂತ ಮಿಗಿಲಾಗಿರುವುದು ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಅದಕ್ಕೆ ಬೇಕಾದ ಸೌಲಭ್ಯ. ಹಿಗಾಗಿ ಜೆರ್ಸಿಯನ್ನು ಹರಾಜು ಮಾಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.
‘ಪ್ರತಿಯೊಬ್ಬರೂ ಯಾವುದಾದರೂ ಬಗೆಯಲ್ಲಿ ಈ ನಿಧಿಗೆ ಹಣ ನೀಡಿದರೆ ಅದು ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಇದು ವಿಷಮ ಘಟ್ಟ. ಇಂಥ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಿದರೆ ಮಾತ್ರ ಸಮಸ್ಯೆಯಿಂದ ಹೊರಬರಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಇನ್ನೊಬ್ಬರ ಬಗ್ಗೆಯೂ ಕಾಳಜಿ ವಹಿಸಲು ಮುಂದಾಗಿ’ ಎಂದು ಅವರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.