ಸಮಾರಾ : ಮೊದಲ ಎರಡು ಪಂದ್ಯಗಳಲ್ಲಿ ರಷ್ಯಾದ ಕೈ ಹಿಡಿದಿದ್ದ ಡೆನಿಸ್ ಚೆರಿಶೆವ್ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಕಳನಾಯಕನಾದರು. ಅವರು ನೀಡಿದ ಉಡುಗೊರೆ ಗೋಲಿನ ನೆರವಿನಿಂದ ಉರುಗ್ವೆ ತಂಡ ‘ಎ’ ಗುಂಪಿನ ಪಂದ್ಯದಲ್ಲಿ 3–0ಯಿಂದ ಗೆದ್ದಿತು.
ಇದರೊಂದಿಗೆ ಆಡಿದ ಮೂರು ಪಂದ್ಯಗಳನ್ನು ಗೆದ್ದ ಉರುಗ್ವೆ ಒಂಬತ್ತು ಪಾಯಿಂಟ್‌ಗಳನ್ನು ಕಲೆ ಹಾಕಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಸಮಾರಾ ಅರೆನಾದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಉರುಗ್ವೆ 10ನೇ ನಿಮಿಷದಲ್ಲಿ ಖಾತೆ ತೆರೆದು ಸಂಭ್ರಮಿಸಿತು. ಲೂಯಿಸ್ ಸ್ವಾರೆಜ್ ಗಳಿಸಿದ ಗೋಲು ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟಿತು.
ಎದುರಾಳಿ ತಂಡದ ಆಟಗಾರ ಎಸಗಿದ ತಪ್ಪಿನಿಂದ ಪೆನಾಲ್ಟಿ ಅವಕಾಶ ಪಡೆದ ಉರುಗ್ವೆಯ ಸ್ವಾರೆಜ್ ಜಾದೂ ಮಾಡಿದರು. ಅವರು ಬಲವಾಗಿ ಒದ್ದ ಚೆಂಡು ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ, ಗೋಲ್ ಕೀಪರ್ ಕಣ್ಣು ತಪ್ಪಿಸಿ ಗುರಿ ಸೇರಿತು.
ಸಮಬಲ ಸಾಧಿಸಲು ಪ್ರಯತ್ನಿಸಿದ ರಷ್ಯಾ 23ನೇ ನಿಮಿಷದಲ್ಲಿ ಎಡವಟ್ಟು ಮಾಡಿಕೊಂಡಿತು. ಡೆನಿಸ್ ಚೆರಿಶೆವ್ ಉಡುಗೊರೆ ಗೋಲು ನೀಡಿ ಎದುರಾಳಿಗಳ ಮುನ್ನಡೆಯನ್ನು ಹೆಚ್ಚಿಸಿದರು.
ದ್ವಿತೀಯಾರ್ಧದಲ್ಲಿ ಉರುಗ್ವೆ ರಕ್ಷಣೆಗೆ ಒತ್ತು ನೀಡಿತು. ಗೌರವ ಉಳಿಸಿಕೊಳ್ಳಲು ಆತಿಥೇಯರು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. 90ನೇ ನಿಮಿಷದಲ್ಲಿ ಕವಾನಿ ಸುಲಭ ಗೋಲು ಗಳಿಸಿ ರಷ್ಯಾಗೆ ಮತ್ತೊಂದು ಪೆಟ್ಟು ನೀಡಿದರು. ಉರುಗ್ವೆ ಆಟಗಾರ ಒದ್ದ ಚೆಂಡನ್ನು ರಷ್ಯಾ ಗೋಲ್ ಕೀಪರ್ ತಡೆದಿದ್ದರು. ಆದರೆ ಅವರ ಕೈಗೆ ಸೋಕಿ ವಾಪಸ್ ಚಿಮ್ಮಿದ ಚೆಂಡನ್ನು ಕವಾನಿ ಸುಲಭವಾಗಿ ಒದ್ದು ಗುರಿ ಸೇರಿಸಿದರು.
ಸೌದಿಗೆ ಗೆಲುವು: ‘ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಅಮೋಘ ಆಟವಾಡಿದ ಸೌದಿ ಅರೇಬಿಯಾ ತಂಡ ಈಜಿಪ್ಟ್ ಎದುರು 2–1ರಿಂದ ಗೆದ್ದಿತು. ಇದು ಈ ಬಾರಿ ತಂಡದ ಮೊದಲ ಜಯ ಆಗಿದೆ.
22ನೇ ನಿಮಿಷದಲ್ಲಿ ಮೊಹಮ್ಮದ್ ಸಲಾ ಗಳಿಸಿದ ಗೋಲಿನೊಂದಿಗೆ ಈಜಿಪ್ಟ್ ಮುನ್ನಡೆ ಸಾಧಿಸಿತ್ತು. 45+6ನೇ ನಿಮಿಷದಲ್ಲಿ ಸಲ್ಮಾನ್ ಗಳಿಸಿದ ಗೋಲಿನೊಂದಿಗೆ ಸೌದಿ ಸಮಬಲ ಸಾಧಿಸಿತು. 90+5ನೇ ನಿಮಿಷದಲ್ಲಿ ಸಲೇಮ್ ಗೋಲು ಗಳಿಸಿ ಸೌದಿಗೆ ಗೆಲುವು ತಂದುಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.