ADVERTISEMENT

ಯುರೊ ಕಪ್‌ |ಮಿಂಚಿದ ಯರೆಮ್‌ಚುಕ್‌: ಹಿನ್ನಡೆಯಿಂದ ಗೆದ್ದ ಉಕ್ರೇನ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:12 IST
Last Updated 21 ಜೂನ್ 2024, 16:12 IST
ರೋಮನ್ ಯರೆಮ್‌ಚುಕ್‌
ರಾಯಿಟರ್ಸ್‌ ಚಿತ್ರ
ರೋಮನ್ ಯರೆಮ್‌ಚುಕ್‌ ರಾಯಿಟರ್ಸ್‌ ಚಿತ್ರ   

ಡಸೆಲ್‌ಡಾರ್ಫ್‌ (ಜರ್ಮನಿ): ಸಬ್‌ಸ್ಟಿಟ್ಯೂಟ್‌ ಆಟಗಾರ ರೋಮನ್ ಯರೆಮ್‌ಚುಕ್‌ ಅವರು 80ನೇ ನಿಮಿಷ ಗಳಿಸಿದ ಗೋಲಿನ ನೆರವಿನಿಂದ ಉಕ್ರೇನ್ ತಂಡ ಶುಕ್ರವಾರ ಯೂರೊ ಕಪ್ ಹಿನ್ನಡೆಯಿಂದ ಚೇತರಿಸಿ ಸ್ಲೊವಾಕಿಯಾ ತಂಡವನ್ನು 2–1 ಗೋಲುಗಳಿಂದ ಸೋಲಿಸಿತು.

‘ಇ’ ಗುಂಪಿನ ಈ ಪಂದ್ಯ ಗೆದ್ದರೆ ಒಂದು ಪಂದ್ಯ ಉಳಿದಿರುವಂತೆ ನಾಕೌಟ್‌ ಹಂತಕ್ಕೆ ತಲುಪಬಹುದೆಂಬ ಲೆಕ್ಕಾಚಾರದಲ್ಲಿ ಆಡಿದ ಸ್ಲೊವಾಕಿಯಾ 17ನೇ ನಿಮಿಷ ಇವಾನ್‌ ಶ್ರಾಂಝ್ ಅವರ ಗೋಲಿನಿಂದ ಮುನ್ನಡೆ ಪಡೆದಿತ್ತು. ಬೆಲ್ಜಿಯಂ ವಿರುದ್ಧ ಅಚ್ಚರಿಯ ಗೆಲುವಿನಲ್ಲೂ ಇವಾನ್‌ ಗೋಲು ಗಳಿಸಿದ್ದರು.

ರುಮೇನಿಯಾ ಕೈಲಿ 0–3 ಗೋಲಿನಿಂದ ಸೋಲನುಭವಿಸಿದ್ದ ಉಕ್ರೇನ್ ಈ ಪಂದ್ಯದಲ್ಲಿ ಧೃತಿಗೆಡಲಿಲ್ಲ. ಅವಕಾಶಕ್ಕಾಗಿ ಕಾಯುತ್ತಿದ್ದ ತಂಡ ವಿರಾಮಕ್ಕೆ 9 ನಿಮಿಷಗಳಿರುವಾಗ ಮಿಕೊಲಾ ಶಪರೆಂಕೊ ಗಳಿಸಿದ ಗೋಲಿನಿಂದ ಸಮ ಮಾಡಿಕೊಂಡಿತು.

ADVERTISEMENT

ಡೈನವೊ ಕೀವ್‌ ಕ್ಲಬ್‌ಗೆ ಆಡುವ ಶಪರೆಂಕೊ ಪಂದ್ಯ ಮುಕ್ತಾಯಕ್ಕೆ 10 ನಿಮಿಷಗಳಿರುವಾಗ ಉಕ್ರೇನ್‌ ಮತ್ತೊಂದು ಗೋಲಿಗೆ ಬುನಾದಿ ಹಾಕಿಕೊಟ್ಟರು. ಅವರ ಪಾಸ್‌ನಲ್ಲಿ ಯರೆಮ್‌ಚುಕ್‌ ಸ್ಕೋರ್ ಮಾಡಿದರು.

‘ಇ’ ಗುಂಪಿನಲ್ಲಿ ಈ ಗೆಲುವಿನೊಡನೆ ಉಕ್ರೇನ್‌ ಸಹ ರುಮೇನಿಯಾ ಮತ್ತು ಸ್ಲೊವಾಕಿಯ ಜೊತೆ ತಲಾ ಮೂರು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಹಂಚಿಕೊಂಡಿತು.

ರುಮೇನಿಯಾ ತಂಡ ಫ್ರಾಂಕ್‌ಫರ್ಟ್‌ನಲ್ಲಿ ಶನಿವಾರ ಬೆಲ್ಜಿಯಂ ವಿರುದ್ಧ ಆಡಲಿದೆ.

ಡ್ರಾ ಪಂದ್ಯದಲ್ಲಿ ಇಂಗ್ಲೆಂಡ್‌:

ಗುರುವಾರ ರಾತ್ರಿ ಫ್ರಾಂಕ್‌ಫರ್ಟ್‌ನಲ್ಲಿ ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ನಡುವಣ ನಡೆದ ‘ಸಿ’ ಗುಂಪಿನ ಪಂದ್ಯ 1–1 ಡ್ರಾ ಆಯಿತು. ಇಂಗ್ಲೆಂಡ್‌ ಪರ ಹ್ಯಾರಿ ಕೇನ್‌ (18ನೇ ನಿಮಿಷ) ಮತ್ತು ಡೆನ್ಮಾರ್ಕ್ ಪರ ಮಾರ್ಟೆನ್ ಹುಲ್ಮಂಡ್‌ (34ನೇ ನಿಮಿಷ) ಗೋಲು ಗಳಿಸಿದರು.

ವಿಶೇಷ ಎಂದರೆ ಗುರುವಾರ ನಡೆದಿದ್ದ ಮೊದಲ ಎರಡು ಪಂದ್ಯಗಳೂ ಸಹ 1–1 ಡ್ರಾ ಆಗಿದ್ದವು.

ಆರ್ಜೆಂಟೀನಾಕ್ಕೆ ಜಯ

ಅಟ್ಲಾಂಟಾ (ಎಪಿ): ಲಯೊನೆಲ್ ಮೆಸ್ಸಿ ದಾಖಲೆಯ 35ನೇ ಕೋಪಾ ಅಮೆರಿಕ ಪಂದ್ಯದಲ್ಲಿ ಗೋಲು ಗಳಿಸಲಿಲ್ಲ. ಆದರೆ ಕೆನಡಾ ವಿರುದ್ಧ ಗುರುವಾರ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಜೆಂಟೀನಾ ತಂಡ 2–0 ಗೋಲುಗಳಿಂದ ಗೆಲ್ಲಲು ಸಹಾಯ ಮಾಡಿದರು.

ಅಟ್ಲಾಂಟಾ ಮರ್ಸಿಡಿಸ್‌ ಬೆಂಝ್ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಕ್ಕೆ ಒಂದು ಗಂಟೆ ಮೊದಲೇ ಮೆಸ್ಸಿ... ಮೆಸ್ಸಿ... ಎಂಬ ಅಭಿಮಾನದ ಘೋಷಣೆಗಳು ಕೇಳಿಬಂದವು ಅವರು ನಿರಾಸೆ ಮೂಡಿಸಲಿಲ್ಲ. 43ನೇ ನಿಮಿಷ ಅವರು ಒದಗಿಸಿದ ಪಾಸ್‌ನಲ್ಲಿ ಜೂಲಿಯನ್ ಅಲ್ವಾರೆಜ್‌ ಆರ್ಜೆಂಟೀನಾಕ್ಕೆ ಮುನ್ನಡೆ ಒದಗಿಸಿದರು. 89ನೇ ನಿಮಿಷ ಲೌತರೊ ಮಾರ್ಟಿನೆಜ್‌ ಗೆಲುವಿನ ಅಂತರ ಹೆಚ್ಚಿಸಲೂ ಮೆಸ್ಸಿ ಅವರ ಪಾಸ್‌ ನೆರವಿಗೆ ಬಂದಿತು.

ಉಕ್ರೇನ್‌ನ ಎರಡನೇ ಗೋಲು ಗಳಿಸಿದ ಸಂಭ್ರಮದಲ್ಲಿ ರೋಮನ್ ಯರೆಮ್‌ಚುಕ್‌ ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.