ಮ್ಯಾಡ್ರಿಡ್: ತಮ್ಮ ಮೇಲೆ ನಂಬಿಕೆ ಇರಿಸಿಕೊಳ್ಳಲು ತಂಡ ಮುಂದಾಗದ ಕಾರಣ ರಿಯಲ್ ಮ್ಯಾಡ್ರಿಡ್ ಕೋಚ್ ಹುದ್ದೆಯನ್ನು ತೊರೆದೆ ಎಂದು ಜಿನೆದಿನ್ ಜಿದಾನೆ ಸೋಮವಾರ ತಿಳಿಸಿದ್ದಾರೆ. ಈ ಕುರಿತು ಅವರು ಬರೆದ ಪತ್ರ ಕ್ರೀಡಾ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
‘ನಾನು ಗೆಲ್ಲುವುದಕ್ಕಾಗಿ ಇರುವವನು. ಕೋಚ್ ಆಗಿ ತಂಡವನ್ನು ಸದಾ ಗೆಲುವಿನ ಹಾದಿಯಲ್ಲಿ ನಡೆಸಬೇಕು ಎಂಬುದು ನನ್ನ ಆಸೆ. ಅದರೆ ಈ ತಂಡದಲ್ಲಿ ಅಂಥ ಮೌಲ್ಯಗಳಿಗೆ ಬೆಲೆ ಇಲ್ಲ. ಆದ್ದರಿಂದ ದೂರವಾಗುವುದೇ ಒಳಿತು ಎನಿಸಿತು’ ಎಂದು ಅವರು ಹೇಳಿದ್ದಾರೆ.
ರಿಯಲ್ ಮ್ಯಾಡ್ರಿಡ್ ಈ ಬಾರಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಲಾಲಿಗಾ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದ ತಂಡ ಅಥ್ಲೆಟಿಕೊ ಮ್ಯಾಡ್ರಿಡ್‌ಗೆ ಪ್ರಶಸ್ತಿಯನ್ನು ಬಿಟ್ಟುಕೊಟ್ಟಿತ್ತು. ಚಾಂಪಿಯನ್ಸ್ ಲೀಗ್‌ನಲ್ಲಿ ಚೆಲ್ಸಿ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿತ್ತು. ರಿಯಲ್ ಮ್ಯಾಡ್ರಿಡ್ ತಂಡದ ಕೋಚ್ ಹುದ್ದೆಗೆ ಜಿದಾನೆ ಎರಡನೇ ಬಾರಿ ರಾಜೀನಾಮೆ ಸಲ್ಲಿಸಿದ್ದಾರೆ.
1998ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಜಿದಾನೆ 2016ರ ಜನವರಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ಕೋಚ್ ಆಗಿ ಮೊದಲ ಬಾರಿ ನೇಮಕವಾಗಿದ್ದರು. 2017ರಲ್ಲಿ ತಂಡ ಲಾಲಿಗಾ ಪ್ರಶಸ್ತಿ ಜಯಿಸಿತ್ತು. ಚಾಂಪಿಯನ್ಸ್ ಲೀಗ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿತ್ತು. ಆದರೆ 2018ರ ಮೇ 31ರಂದು ಅವರು ತಂಡವನ್ನು ತೊರೆದಿದ್ದರು. ಒಂದು ವರ್ಷದ ಒಳಗೆ ಅವರನ್ನು ಮತ್ತೆ ಕೋಚ್ ಆಗಿ ನೇಮಕ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.