ಭುವನೇಶ್ವರ್: ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡವು ಭಾನುವಾರ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್ನಲ್ಲಿ ಜರ್ಮನಿ ಎದುರು ಸೆಣಸಲಿದೆ.
ಈ ಹಿಂದೆ ವಿಶ್ವಕಪ್ ಟೂರ್ನಿಗಳಲ್ಲಿ ಜರ್ಮನಿ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಒಂದರ ಹಿಂದೆ ಒಂದರಂತೆ ಪ್ರಶಸ್ತಿ ಗೆದ್ದಿರುವ ಇತಿಹಾಸ ಇದೆ. ಈಗ ಆ ಸಾಲಿಗೆ ಸೇರುವ ಅವಕಾಶ ಬೆಲ್ಜಿಯಂ ತಂಡಕ್ಕೂ ಇದೆ. ಕಳೆದ ಬಾರಿ (2018) ಚಾಂಪಿಯನ್ ಆಗಿದ್ದ ಬೆಲ್ಜಿಯಂ 2021ರಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನ ಕೂಡ ಜಯಿಸಿತ್ತು.
ಈ ವರ್ಷದ ಟೂರ್ನಿಯಲ್ಲಿಯೂ ಅಮೋಘ ಆಟವಾಡಿದೆ. ಈ ತಂಡದಲ್ಲಿರುವ 11 ಆಟಗಾರರು 30 ವರ್ಷ ಮತ್ತು ಮೂವರು 35 ವರ್ಷ ದಾಟಿರುವವರಾಗಿದ್ದಾರೆ. ಈ ತಂಡವು ಬೆಲ್ಜಿಯಂ ಹಾಕಿ ಇತಿಹಾಸದ ಬಂಗಾರದ ಪೀಳಿಗೆ ಎಂದೇ ಪ್ರಖ್ಯಾತವಾಗಿದೆ. ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿ ಆಡುವ ಬಲಾಢ್ಯ ತಂಡ ಇದಾಗಿದೆ.
ಎರಡು ಬಾರಿಯ ಚಾಂಪಿಯನ್ (2002 ಹಾಗೂ 2006) ಈ ಸಲದ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ಶೂಟೌಟ್ನಲ್ಲಿ ರೋಚಕ ಜಯಸಾಧಿಸಿತ್ತು. ಛಲದ ಆಟಕ್ಕೆ ಹೆಸರಾಗಿರುವ ಜರ್ಮನಿಯು ಚಾಂಪಿಯನ್ ಬೆಲ್ಜಿಯಂಗೆ ಕಠಿಣ ಸವಾಲು ಒಡ್ಡುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.