ರೂರ್ಕೆಲಾ: ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ತಡವಾಗಿ ತಮ್ಮ ಸಾಮರ್ಥ್ಯ ಮೆರೆದ ಭಾರತ ತಂಡದ ಆಟಗಾರರು ಗುರುವಾರ ಜಪಾನ್ ವಿರುದ್ಧ ಮಿಂಚಿದರು.
ಅಂತರರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ‘ಸ್ಥಾನ ನಿರ್ಣಯ’ ಪಂದ್ಯದಲ್ಲಿ ಭಾರತ ತಂಡವು 8–0 ಗೋಲುಗಳಿಂದ ಜಪಾನ್ ವಿರುದ್ಧ ಗೆದ್ದಿತು. ಇದರೊಂದಿಗೆ 9 ರಿಂದ 12ನೇ ಸ್ಥಾನಗಳ ನಿರ್ಣಯ ಸುತ್ತಿಗೆ ಪ್ರವೇಶಿಸಿತು. ಶನಿವಾರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಆತಿಥೇಯ ಭಾರತ ತಂಡವು ಕ್ರಾಸ್ ಓವರ್ ಪಂದ್ಯದಲ್ಲಿ ಸೋತು ಹೊರಬಿದ್ದಿತ್ತು. ಎಂಟರ ಘಟ್ಟಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು.
ಗುಂಪು ಹಂತದ ಪಂದ್ಯಗಳಲ್ಲಿ ಆಡಿದ್ದಕ್ಕಿಂತ ಇಲ್ಲಿ ಭಾರತ ತಂಡವು ಉತ್ತಮವಾಗಿ ಆಡಿತು. ಡ್ರ್ಯಾಗ್ ಫ್ಲಿಕ್‌ನಲ್ಲಿ ಕೊನೆಗೂ ಮಿಂಚಿದ ನಾಯಕ ಹರ್ಮನ್‌ಪ್ರೀತ್ ಸಿಂಗ್ (46ನಿ ಮತ್ತು 59ನಿ) ನಾಲ್ಕನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳನ್ನಾಗಿ ಪರಿವರ್ತಿಸಿದರು. ಗುಂಪು ಹಂತದಲ್ಲಿ ಅವರು ಪೆನಾಲ್ಟಿ ಅವಕಾಶಗಳಲ್ಲಿ ಗೋಲು ಗಳಿಸುವಲ್ಲಿ ಎಡವಿದ್ದರು.
23 ವರ್ಷದ ಅಭಿಷೇಕ್ (36ನಿ ಮತ್ತು 44ನಿ) ಫೀಲ್ಡ್ ಗೋಲುಗಳನ್ನು ಹೊಡೆದರು. ಮನದೀಪ್ ಸಿಂಗ್ (33ನಿ), ವಿವೇಕ್ ಸಾಗರ್ ಪ್ರಸಾದ್ (40ನಿ), ಮನಪ್ರೀತ್ ಸಿಂಗ್ (59ನಿ) ಮತ್ತು ಸುಖಜೀತ್ ಸಿಂಗ್ (60ನಿ) ತಂಡಕ್ಕೆ ಗೋಲುಗಳ ಕಾಣಿಕೆ ನೀಡಿದರು.
ಏಷ್ಯನ್ ಚಾಂಪಿಯನ್ ಜಪಾನ್ ತಂಡವು ಭಾರತದ ರಕ್ಷಣಾ ವ್ಯೂಹವನ್ನು ದಾಟಿ ಗೋಲು ಗಳಿಸುವಲ್ಲಿ ವಿಫಲವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.