ADVERTISEMENT

ಅಭಿನಂದನ್‌ಗೆ ಚಿನ್ನದ ಕಾಣಿಕೆ ನೀಡಿದ ಬಜರಂಗ್

ಬಲ್ಗೇರಿಯಾ ಕುಸ್ತಿ ಚಾಂಪಿಯನ್‌ಷಿಪ್‌; ಪೂಜಾಗೆ ಚಿನ್ನ, ವಿನೇಶಾಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 18:41 IST
Last Updated 3 ಮಾರ್ಚ್ 2019, 18:41 IST
   

ನವದೆಹಲಿ: ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಬಲ್ಗೇರಿಯಾದ ರೂಸ್‌ನಲ್ಲಿ ನಡೆಯುತ್ತಿರುವ ಡ್ಯಾನ್ ಕೊಲೊವ್ ನಿಕೊಲಾ ಪೆಟ್ರೊವ್ ಕುಸ್ತಿ ಟೂರ್ನಿಯಲ್ಲಿ ಚಿನ್ನ ಗೆದ್ದರು. ಅವರು ತಮ್ಮ ಗೆಲುವನ್ನು ಭಾರತದ ವಾಯುಸೇನೆಯ ವಿಂಗ್‌ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಸಮರ್ಪಿಸಿದ್ದಾರೆ.

ಪುರುಷರ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಬಜರಂಗ್ ಅವರು 12–3ರಿಂದ ಅಮೆರಿಕದ ಜೋರ್ಡಾನ್ ಒಲಿವರ್ ವಿರುದ್ಧ ಗೆದ್ದರು. ಬಜರಂಗ್ ಅವರು ಈಚೆಗೆ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ ಜಯಿಸಿದ್ದರು.

‘ಪಾಕ್‌ ಸೇನೆಯಿಂದ ಬಂಧಮುಕ್ತರಾಗಿ ಮರಳಿಸ ಅಭಿನಂದನ್ ಅವರು ದೇಶದ ನಿಜವಾದ ಹೀರೊ. ಅವರ ಸಾಹಸ, ತ್ಯಾಗ ಮತ್ತು ಧೈರ್ಯಕ್ಕೆ ನಾನು ಶರಣಾಗಿದ್ದೇನೆ. ಆದ್ದರಿಂದ ಈ ಚಿನ್ನದ ಸಾಧನೆಯನ್ನು ಅವರಿಗೆ ಕಾಣಿಕೆ ನೀಡಿದ್ದೇನೆ. ಭಾರತಕ್ಕೆ ಮರಳಿದ ನಂತರ ಅವರನ್ನು ಒಂದು ಬಾರಿ ಭೇಟಿಯಾಘಗಿ ಅಭಿನಂದಿಸುತ್ತೇನೆ’ ಎಂದು ಬಜರಂಗ್ ಹೇಳಿದ್ದಾರೆ.

2017ರಿಂದ ಇಲ್ಲಿಯವರೆಗೆ ಬಜರಂಗ್ ಅವರು ಗಳಿಸಿದ ಹತ್ತನೇ ಪದಕ ಇದಾಗದೆ.

ಪೂಜಾಗೆ ಚಿನ್ನ, ವಿನೇಶಾಗೆ ಬೆಳ್ಳಿ: ಮಹಿಳೆಯರ 59 ಕೆ.ಜಿ ವಿಭಾಗದಲ್ಲಿ ಪೂಜಾ ದಂಡಾ ಅವರು ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಅವರು ಭಾರತದವರೇ ಆದ ಸರಿತಾ ಮೊರ್ ಅವರನ್ನು ಮಣಿಸಿದರು.

ಒಲಿಂಪಿಯನ್ ಸಾಕ್ಷಿ ಮಲಿಕ್ 65 ಕೆ.ಜಿ. ವಿಭಾಗದಲ್ಲಿ ಬೆಳ್ಳಿಪದಕ ಜಯಿಸಿದರು. 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಭಾರತದ ವಿನೇಶಾ ಪೋಗಟ್ ಅವರು ಸೋತರು. ಹರಿಯಾಣದ ವಿನೇಶಾ 2–9ರಿಂದ ಚೀನಾದ ಕಿಯಾನ್ ಪಾಂಗ್ ವಿರುದ್ಧ ಸೋತು ಬೆಳ್ಳಿ ಪದಕ ಪಡೆದರು. ಅವರು 50 ಕೆ.ಜಿ. ವಿಭಾಗವನ್ನು ಬಿಟ್ಟು ಕೊಟ್ಟ ನಂತರ ಸ್ಪರ್ಧಿಸಿದ ಮೊದಲ ಟೂರ್ನಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.