ಬೆಂಗಳೂರು: ಹಾಲಿ ಚಾಂಪಿಯನ್ ಸುಮಿತ್ ನಗಾಲ್ ಅವರು ಸೋಮವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ಆರಂಭವಾಗಲಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜರ್ಮನಿಯ ಜೆ ಕ್ಲರ್ಕ್ ಅವರನ್ನು ಎದುರಿಸುವರು.
ಶನಿವಾರ ಮುಖ್ಯ ಸುತ್ತಿನ ಡ್ರಾ ಪ್ರಕಟಿಸಲಾಯಿತು. 28 ಆಟಗಾರರ ಹೆಸರನ್ನು ಪ್ರಕಟಿಸಲಾಯಿತು. ಇನ್ನುಳಿದ ನಾಲ್ವರು ಆಟಗಾರರ ಹೆಸರುಗಳನ್ನು ಭಾನುವಾರ ನಡೆಯಲಿರುವ ಕ್ವಾಲಿಫೈಯರ್ ಪಂದ್ಯಗಳ ನಂತರ ಪ್ರಕಟಿಸಲಾಗುತ್ತದೆ.
ಹೋದ ವರ್ಷ ನಗಾಲ್ ಚಾಂಪಿಯನ್ ಆಗಿದ್ದರು. ಈ ಬಾರಿಯೂ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ. ಜೆ. ಕ್ಲರ್ಕ್ ಅವರು ಏಳನೇ ಶ್ರೇಯಾಂಕದ ಆಟಗಾರರಾಗಿದ್ದಾರೆ. ಭಾರತದ ನಾಲ್ಕನೇ ಶ್ರೇಯಾಂಕದ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ರಷ್ಯಾದ ನಿಡೆಲ್ಕೊ ಇವಾನ್ ವಿರುದ್ಧ ಸೆಣಸುವರು.
ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ‘ಮೈಸೂರು ಹುಡುಗ’ ಸೂರಜ್ ಪ್ರಬೋಧ್ ಆರನೇ ಶ್ರೇಯಾಂಕದ ಫ್ರಾನ್ಸ್‌ನ ಹ್ಯಾಲಿಸ್ ಕ್ವಿಂಟನ್ ವಿರುದ್ಧ ಆಡುವರು.
ಆಂತರರಾಷ್ಟ್ರೀಯ ಆಟಗಾರ ಸಾಕೇತ್ ಮೈನೆನಿ ಅವರನ್ನು ಕರ್ನಾಟಕದ ಆದಿಲ್ ಕಲ್ಯಾಣಪುರ್ ಎದುರಿಸುವರು. ಹೋದ ವರ್ಷ ಗಾಯದ ಸಮಸ್ಯೆಯಿಂದಾಗಿ ಸಾಕೇತ್ ಇಲ್ಲಿ ಆಡಿರಲಿಲ್ಲ.
ಡ್ರಾ ಆಯ್ಕೆ ಕಾರ್ಯಕ್ರಮದಲ್ಲಿ ಆಟಗಾರ ಸಾಕೇತ್ ಮೈನೇನಿ, ರೆಫರಿ ಅಹಮದ್ (ಈಜಿಪ್ಟ್ ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಕೆಎಸ್‌ಎಲ್‌ಟಿಎ ಉಪಾಧ್ಯಕ್ಷ ಸುನಿಲ್ ಯಜಮಾನ್ ಹಾಜರಿದ್ದರು.
ಸಿದ್ಧಾರ್ಥ್ ಮುನ್ನಡೆ: ಭಾರತದ ಸಿದ್ಧಾರ್ಥ್ ವಿಶ್ವಕರ್ಮ, ರಂಜೀತ್ ಮುರುಗೇಶನ್, ಅರ್ಜುನ ಖಾಡೆ, ಮುಕುಂದ ಶಶಿಕುಮಾರ ಮತ್ತು ಆರ್ಯನ್ ಗೋವಿಸ್ ಅವರು ಶನಿವಾರ ನಡೆದ ಅರ್ಹತಾ ಪಂದ್ಯಗಳ ಎರಡನೇ ಸುತ್ತಿಗೆ ಮುನ್ನಡೆ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.