ನವದೆಹಲಿ: ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿ ಸದೇ ಇದ್ದುದಕ್ಕೆ ಹಾಕಿ ಇಂಡಿಯಾದ ಹಿಂದಿನ ಮುಖ್ಯಸ್ಥ ರಾಜಿಂದರ್ ಸಿಂಗ್ ಅವರಿಗೆ ಕೇಂದ್ರ ಮಾಹಿತಿ ಆಯುಕ್ತರು (ಸಿಐಸಿ) ನೋಟಿಸ್ ಜಾರಿ ಮಾಡಿದ್ದಾರೆ.
‘ಪ್ರಾಯೋಜಕತ್ವಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಅವರ ದೂರಿನ ವಿಚಾರಣೆ ಸಂದರ್ಭದಲ್ಲಿ ಕೋರಿದ ಮಾಹಿತಿಯನ್ನು ಒದಗಿಸದೇ ಲೋಪ ಎಸಗಿದ್ದೀರಿ. ಆದ್ದರಿಂದ ನಿಮ್ಮ ಮೇಲೆ ಗರಿಷ್ಠ ಪ್ರಮಾಣದ ದಂಡವನ್ನು ಯಾಕೆ ವಿಧಿಸಬಾರದು’ ಎಂದು ಆಯುಕ್ತರು ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಮಾಹಿತಿ ಕೋರಿ ಕೀರ್ತಿ ಆಜಾದ್ ಅವರು ಹಾಕಿ ಇಂಡಿಯಾಗೆ ಅರ್ಜಿ ಹಾಕಿದ್ದರು. ಆದರೆ ಸೂಕ್ತ ಉತ್ತರ ಸಿಗದ ಕಾರಣ ಅವರು ಮಾಹಿತಿ ಹಕ್ಕು ಆಯೋಗದ ಮೊರೆ ಹೋಗಿದ್ದರು. ಅಂದಿನ ಸರ್ಕಾರದ ಸಚಿವರೊಬ್ಬರ ತೇಜೋವಧೆಗಾಗಿ ಆಜಾದ್ ಈ ಮಾಹಿತಿ ಕೋರಿದ್ದರು ಎಂದು ವಿಚಾರಣೆ ವೇಳೆ ಹಾಕಿ ಇಂಡಿಯಾ ಹೇಳಿತ್ತು.
ಸಂಸ್ಥೆಯ ಪರ ಹಾಜರಾದ ವಕೀಲರು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಿದ್ದರು. ಆದರೆ ಪ್ರಾಯೋಜಕತ್ವಕ್ಕೆ ಸಂಬಂಧಿಸಿದ ವಿವರಗಳನ್ನು ಅಳಿಸಿ ಹಾಕಿದ್ದರು. ಮಾಹಿತಿ ಆಯೋಗಕ್ಕೂ ದಾಖಲೆಗಳನ್ನು ಮಾಹಿತಿ ನೀಡಲು ಹಾಕಿ ಇಂಡಿಯಾ ಸಿದ್ಧ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಆಯುಕ್ತ ಶ್ರೀಧರ್ ಆಚಾರ್ಯುಲು ಅಭಿಪ್ರಾಯಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.