ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಸೋಲುಣಿಸಿದ ಅತಿ ಕಿರಿಯ ಚೆಸ್ ಆಟಗಾರ ಎನಿಸಿಕೊಂಡಿದ್ದಾರೆ.
ಆನ್‌ಲೈನ್ ಮೂಲಕ ನಡೆಯುತ್ತಿರುವ ಏಮ್‌ಚೆಸ್ ರ‍್ಯಾಪಿಡ್ ಚೆಸ್ ಟೂರ್ನಿಯ ಪ್ರಿಲಿಮನರಿ ಹಂತದ ಒಂಬತ್ತನೇ ಸುತ್ತಿನಲ್ಲಿ, ಗುಕೇಶ್ ಅವರಿಗೆ ನಾರ್ವೆ ಆಟಗಾರನ ಎದುರು ಜಯ ಒಲಿಯಿತು. ಪಂದ್ಯದಲ್ಲಿ16 ವರ್ಷದ ಗುಕೇಶ್, ಬಿಳಿಕಾಯಿಗಳೊಂದಿಗೆ ಆಡಿ 19 ನಡೆಗಳಲ್ಲಿ ಜಯ ಸಾಧಿಸಿದರು. ಟೂರ್ನಿಯ 12 ಸುತ್ತುಗಳ ಅಂತ್ಯಕ್ಕೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಅವರ ಬಳಿ ಸದ್ಯ 21 ಪಾಯಿಂಟ್‌ಗಳಿವೆ.
ಪೋಲೆಂಡ್‌ನ ಜಾನ್ ಕ್ರಿಸ್ಟಾಫ್ ದುಡಾ (25 ಪಾಯಿಂಟ್ಸ್) ಮತ್ತು ಅಜರ್‌ಬೈಜಾನ್‌ನ ಶಕರಿಯಾರ್ ಮಮೆದ್ಯೆಯೊರ್ (23) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದರು.
ಭಾನುವಾರ ಭಾರತದ ಅರ್ಜುನ್ ಎರಿಗೈಸಿ ಅವರು ಕಾರ್ಲ್‌ಸನ್ ಅವರನ್ನು ಸೋಲಿಸಿದ್ದರು.
‘ಕಾರ್ಲ್‌ಸನ್ ವಿಶ್ವಚಾಂಪಿಯನ್ ಆದ ಬಳಿಕ ಅವರನ್ನು ಮಣಿಸಿದ ಅತಿ ಕಿರಿಯ ಆಟಗಾರ ಗುಕೇಶ. 16 ವರ್ಷದ ಸೂಪರ್‌ಸ್ಟಾರ್‌ಗೆ ಅಭಿನಂದನೆಗಳು‘ ಎಂದು ಮೆಲ್ಟ್‌ವೇರ್ ಚಾಂಪಿಯನ್ ಚೆಸ್ ಟೂರ್ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ.
ಗುಕೇಶ್ ಅವರ ವಯಸ್ಸು ಈಗ 16 ವರ್ಷ 4 ತಿಂಗಳು 20 ದಿನ. ಮ್ಯಾಗ್ನಸ್ ಅವರನ್ನು ಮಣಿಸಿದ ಅತಿ ಕಿರಿಯ ಎಂಬ ಈ ಹಿಂದಿನ ದಾಖಲೆ ಭಾರತದ ಪ್ರಗ್ನಾನಂದ (16 ವರ್ಷ, 6 ತಿಂಗಳು, 10 ದಿನ) ಅವರ ಹೆಸರಿನಲ್ಲಿತ್ತು.
‘ಕಾರ್ಲ್‌ಸನ್ ಅವರನ್ನು ಸೋಲಿಸುವುದು ಯಾವಾಗಲೂ ವಿಶೇಷ ಕ್ಷಣ. ಆದರೆ ಈ ಗೆಲುವಿನ ಕುರಿತು ಹೆಚ್ಚೇನೂ ಹೆಮ್ಮೆ ಇಲ್ಲ‘ ಎಂದು ಗುಕೇಶ್ ಪ್ರತಿಕ್ರಿಯಿಸಿದ್ದಾರೆ.
ಟೂರ್ನಿಯಲ್ಲಿ ಅರ್ಜುನ್ ಎರಿಗೈಸಿ ಅವರು 21 ಪಾಯಿಂಟ್ಸ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಾರ್ಲ್‌ಸನ್ ಐದನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.