ADVERTISEMENT

19 ಶಸ್ತ್ರಚಿಕಿತ್ಸೆ; ಸವಾಲುಗಳ ಸಾಗರದಲ್ಲಿ ಈಜಿದ ಕನ್ನಡಿಗ ನಿರಂಜನ್

ಪ್ಯಾರಾಲಿಂಪಿಕ್ಸ್‌ಗೆ ಕನ್ನಡಿಗ; 19 ಶಸ್ತ್ರಚಿಕಿತ್ಸೆಗಳ ನೋವು ಮೀರಿದ ಈಜುಪಟು

ಗಿರೀಶದೊಡ್ಡಮನಿ
Published 21 ಆಗಸ್ಟ್ 2021, 20:30 IST
Last Updated 21 ಆಗಸ್ಟ್ 2021, 20:30 IST
ನಿರಂಜನ್ ಮುಕುಂದನ್
ನಿರಂಜನ್ ಮುಕುಂದನ್   

ಬೆಂಗಳೂರು: ಬಾಲ್ಯದಿಂದ ಕಾಡಿದ ಅಂಗವೈಕಲ್ಯದ ಸವಾಲು, ಹತ್ತೊಂಬತ್ತು ಶಸ್ತ್ರಚಿಕಿತ್ಸೆಗಳ ನೋವು ಮೀರಿ ನಿಂತ ಬೆಂಗಳೂರಿನ ನಿರಂಜನ್ ಮುಕುಂದನ್ ಇದೀಗ ಟೋಕಿಯೊ ವಿಮಾನವೇರಲು ಸಿದ್ಧರಾಗಿದ್ದಾರೆ.

ಹುಟ್ಟಿನಿಂದಲೇ ಕಾಡಿದ ಬೆನ್ನು ಹುರಿಯ ದೌರ್ಬಲ್ಯದಿಂದಾಗಿ ನಿರಂ ಜನ್‌ಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಏಳನೇ ವಯಸ್ಸಿನಲ್ಲಿ ವೈದ್ಯರೊಬ್ಬರು ಅಕ್ವಾ ಥೆರಪಿ (ಈಜು) ಅಥವಾ ಕುದುರೆ ಸವಾರಿ ಕಲಿಸಿ ಎಂದು ಪಾಲಕರಿಗೆ ಸಲಹೆ ನೀಡಿದರು. ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದ ಅಪ್ಪ ಆರ್. ಮುಕುಂದನ್ ಮತ್ತು ತಾಯಿ ಎಂ. ಲಕ್ಷ್ಮೀ ಅವರು ಮಗನಿಗೆ ಅಕ್ವಾ ಥೆರಪಿಯನ್ನೇ ಆಯ್ಕೆ ಮಾಡಿಕೊಂಡರು.

ಮಗನ ಕಾಲುಗಳಿಗೆ ಶಕ್ತಿ ತುಂಬಲು ಅಪ್ಪ, ಅಮ್ಮ ಮಾಡಿದ ನಿರ್ಧಾರ ಇವತ್ತು ರಂಗು ತಂದಿದೆ. ಇದೇ 24ರಿಂದ ಜಪಾನಿನ ಟೋಕಿಯೊದಲ್ಲಿ ಆಯೋ ಜನೆ ಆಗಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ನಿರಂಜನ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಈ ಹಾದಿಯಲ್ಲಿ ಅವರು ಅನುಭವಿಸಿದ ನೋವು ಹಲವು. 19 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಆದರೆ, ಆ ನೋವುಗಳನ್ನು ನುಂಗುತ್ತ ಕಳೆದ 19 ವರ್ಷಗಳಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಈಜುಕೂಟಗಳಲ್ಲಿ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದ ದಾಖಲೆಯನ್ನೂ ಮಾಡಿದ್ದಾರೆ. ಬಿ.ಕಾಂ ಪದವೀಧರರಾಗಿರುವ ಅವರು, ಕ್ರೀಡಾ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ. ತಮ್ಮ ಸಾಧನೆಯ ಹಾದಿಯ ಕುರಿತು 26 ವರ್ಷದ ನಿರಂಜನ್ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

*ಈಜು ಕ್ರೀಡೆಗೆ ಬಂದಿದ್ದು ಹೇಗೆ? ಸ್ಪರ್ಧಾತ್ಜಕ ಈಜುಗಾರನಾಗುವ ವಿಶ್ವಾಸ ಮೊದಲ ಸಲ ಮೂಡಿದ್ದು ಹೇಗೆ?

ಬೆನ್ನುಹುರಿಯ (ಸ್ಪೈನಾ ಬೈಫಿರಾ) ಸಮಸ್ಯೆಯಿಂದಾಗಿ ನನಗೆ ನಡೆಯಲು ಬರುತ್ತಿರಲಿಲ್ಲ. ಕಾಲುಗಳ ಶಕ್ತಿ ಹೆಚ್ಚಿಸಲು ವೈದ್ಯರು ಅಕ್ವಾಥೆರಪಿಯ (ಈಜು ಚಿಕಿತ್ಸೆ) ಸಲಹೆ ನೀಡಿದ್ದರು. ಅದರಂತೆ ಜಯನಗರದ ಪಿ.ಎಂ. ಈಜುಕೊಳಕ್ಕೆ ಅಪ್ಪ ನನ್ನನ್ನು ಸೇರಿಸಿದರು. ನಡೆಯಲು ಕಷ್ಟಪಡುತ್ತಿದ್ದ ನನಗೆ ಈಜುವುದು ಸುಲಭ ಎನಿಸಿತು. ಮೀನಿನಂತೆ ಈಜುತ್ತಿದ್ದೆ. ಅಲ್ಲಿದ್ದ ಕೆಲವು ಕೋಚ್‌ಗಳು ಇದನ್ನು ಗಮನಿಸಿದರು. ಅಲ್ಲಿದ್ದ ಮುಖ್ಯ ಕೋಚ್ ಆಗಿದ್ದ ಜಾನ್ ಕ್ರಿಸ್ಟೋಫರ್ ಅಪ್ಪ ಅಮ್ಮನಿಗೆ ಧೈರ್ಯ ತುಂಬಿ ಪ್ಯಾರಾ ಕ್ರೀಡೆಗೆ ಹಾಕಲು ಕಾರಣರಾದರು. ನನ್ನ ಕಾಲ ಮೇಲೆ ನಾನು ನಿಲ್ಲುವಂತಾಗಬೇಕು ಎಂಬ ಆಸೆ ಪಾಲಕರದ್ದಾಗಿತ್ತು.

*ಈ ಹಾದಿಯಲ್ಲಿ ನಿಮಗೆ ಎದುರಾದ ಸವಾಲುಗಳೇನು?

ತರಬೇತಿ ಆರಂಭವಾಗಿ ಮೂರು ತಿಂಗಳು ಆದ ನಂತರ ಮೊದಲ ಬಾರಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆದರಲ್ಲಿ ಕೊನೆಯ ಸ್ಥಾನ ಪಡೆದಿದ್ದೆ. ಆಗ ತುಂಬಾ ಬೇಸರವಾಗಿತ್ತು. ಆಗಲೇ ಬಿಟ್ಟುಬಿಡಬೇಕು ಎಂದು ಕೋಚ್‌ಗೆ ಹೇಳಿದ್ದೆ. ಅವರು ಒಪ್ಪಲಿಲ್ಲ. ಸೋಲುಗಳಿಗೆ ಹೆದರಬೇಡ. ಸಾಮಾನ್ಯ ರೊಂದಿಗೇ ಇಷ್ಟು ಚೆನ್ನಾಗಿ ಈಜಿದ್ದಿ, ಪ್ಯಾರಾ ಕೆಟಗರಿಯಲ್ಲಿ ಇನ್ನೂ ಚೆನ್ನಾಗಿ ಮಾಡಲು ಸಾಧ್ಯವಿದೆ ಎಂದು ಹುರಿದುಂ ಬಿಸಿದರು. ಅದು ಇವತ್ತು ಪ್ಯಾರಾಲಿಂಪಿಕ್ಸ್‌ಗೆ ಪ್ರವೇಶ ಪಡೆಯುವ ಮಟ್ಟಕ್ಕೆ ಬಂದಿದೆ. ಅಂಗವಿಕಲರಿಗೆ ಕ್ರೀಡೆ ಬೇಕಿಲ್ಲ. ಹೊರೆಯೆಂಬ ಭಾವ ವ್ಯಕ್ತಪಡಿಸಿದ್ದವರೆಲ್ಲ ಇವತ್ತು ಅಭಿನಂದಿಸುತ್ತಿದ್ದಾರೆ.

*ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯದ ವಿಶ್ವಾಸವಿದೆಯೇ?

ನಾನು ಪ್ಯಾರಾಲಿಂಪಿಕ್ಸ್‌ನಲ್ಲಿ 50 ಮೀಟರ್ ಬಟರ್‌ಫ್ಲೈನಲ್ಲಿ ಕ್ವಾಲಿಫೈ ಆಗಿದ್ದೇನೆ. ಇದು ನನ್ನ ನೆಚ್ಚಿನ ವಿಭಾಗ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಹತ್ತನೇ ಶ್ರೇಯಾಂಕ ಪಡೆದಿದ್ದೇನೆ. ಜಪಾನ್ ವಾತಾವರಣಕ್ಕೆ ತಕ್ಕಂತೆ ಇಲ್ಲಿ ಅಭ್ಯಾಸ ಮಾಡಿದ್ದೆವೆ. 2012ರಲ್ಲಿ ಭಾರತ ಪ್ರತಿನಿಧಿಸುತ್ತಿದ್ದೆ. ಆಗ ಈ ಕನಸು ಕಂಡಿದ್ದೆ. 2016ರಲ್ಲಿ ತಾಂತ್ರಿಕ ಕಾರಣಗಳಿಗಾಗಿ ಹೋಗಲು ಸಾಧ್ಯವಾಗಿರಲಿಲ್ಲ ಅದೇ ವರ್ಷ ಸ್ಕಾಲರ್‌ಷಿಪ್ ಸಿಕ್ಕಿತು. ಥೈಲ್ಯಾಂಡ್‌ ನಲ್ಲಿ ತರಬೇತಿ ಪಡೆದೆ. ಸ್ಪೇನ್‌ಗೂ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಒಲಿಂಪಿಯನ್ ಕೋಚ್ ಮಿಗೆಲ್ ಅವರ ಮಾರ್ಗದರ್ಶನ ಸಿಕ್ಕಿತು. ಫೈನಲ್ ಪ್ರವೇಶಿಸುವ ಗುರಿ ಇದೆ.

*ಬಯೋಬಬಲ್ ಸವಾಲು ಗಳೇನು?

ಬಹಳಷ್ಟು ಕಟ್ಟುನಿಟ್ಟಾದ ನಿಯಮಗಳಿವೆ. ಅದಕ್ಕೆ ಹೊಂದಿ ಕೊಳ್ಳುವ ಅನಿವಾರ್ಯತೆ ಇದೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿರುವವರಿಂದ ನನಗೆ ಬಹಳ ಸ್ಪೂರ್ತಿಸಿಗುತ್ತಿದೆ. ಇಡೀ ಭಾರತವೇ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಗಾಲ್ಫ್‌ ಕ್ರೀಡೆಯನ್ನು ನೋಡುವಂತೆ ಮಾಡಿದ ಅದಿತಿ ಅಶೋಕ್, ನನ್ನ ಸ್ನೇಹಿತ, ಈಜುಪಟು ಶ್ರೀಹರಿ ನಟರಾಜ್, ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸಾಧನೆಗಳು ಪ್ರೇರಣಾದಾಯಕ.

*ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವ ಅಂಗವಿಕಲ ಮಕ್ಕಳಿಗೆ ನಿಮ್ಮ ಸಂದೇಶ

ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶ ನೀಡಬೇಕು. ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ಪ್ರತಿಭಾ ವಂತರಿದ್ದಾರೆ. ಕುಟುಂಬ, ಸಮಾ ಜದಲ್ಲಿ ಜಾಗೃತಿ ಮೂಡಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.

ಕೊರೊನಾ ಕಾಲಘಟ್ಟದಲ್ಲಿ ಎದುರಿಸಿದ ಸವಾಲುಗಳೇನು?
ಕೋವಿಡ್‌ನಿಂದಾಗಿ ತರಬೇತಿಯಲ್ಲಿ ಅಡೆತಡೆಗಳು ಬಹಳಷ್ಟಾದವು. ಡ್ರೈಲ್ಯಾಂಡ್ ಟ್ರೇನಿಂಗ್ ಮಾತ್ರ ಸಾಧ್ಯವಿತ್ತು. ಮನೆಯಲ್ಲಿ ಅಭ್ಯಾಸ ಮಾಡುವುದು ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ಕೋಚ್ ಗಳು ಸಹಾಯ ಮಾಡಿದರು. ಪ್ರಯಾಣ ನಿರ್ಬಂಧಗಳಿಂದಾಗಿ ಬಹಳಷ್ಟು ಸ್ಪರ್ಧೆಗಳಿಗೆ ಹೋಗಲು ಕಷ್ಟವಾಯಿತು. ಮೂರು ತಿಂಗಳುಗಳ ಹಿಂದೆ ಕೊರೊನಾದಿಂದಾಗಿ ಅಜ್ಜಿಯನ್ನು ಕಳೆದುಕೊಂಡೆ. ಅಪ್ಪ, ಅಮ್ಮ ಇಬ್ಬರೂ ನೌಕರಿಗೆ ಹೋಗುತ್ತಿದ್ದಾಗ ನನ್ನನ್ನು ಅಜ್ಜಿಯೇ ನೋಡಿಕೊಂಡಿದ್ದರು. ಅವರೇ ಪ್ರತಿ ಹೆಜ್ಜೆಯಲ್ಲಿಯೂ ಬೆಂಬಲಿಸಿದ್ದಾರೆ. ಪ್ಯಾರಾಲಿಂಪಿಕ್‌ನಲ್ಲಿ ನಾನು ಭಾಗವಹಿಸುವುದನ್ನು ನೋಡಲು ಅವರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.