ಇನ್ನೇನು 2023 ತೆರೆಮರೆಗೆ ಸರಿಯುತ್ತಿದೆ. ಈ ವರ್ಷದಲ್ಲಿ ಕ್ರೀಡಾಕ್ಷೇತ್ರದಲ್ಲಿ ಹಲವು ಮಹತ್ವದ ಸಾಧನೆಗಳು, ವಿವಾದಗಳು ಮತ್ತು ದಾಖಲೆಗಳು ಆಗಿವೆ. ಭಾರತದ ಕ್ರೀಡಾಪಟುಗಳು ಹತ್ತಾರು ಸಾಧನೆಗಳ ಸಿಹಿ ಉಣಬಡಿಸಿದ್ದಾರೆ. ಕೆಲವು ವೈಫಲ್ಯಗಳ ಕಹಿಯನ್ನೂ ಅನುಭವಿಸಿದ್ದಾರೆ
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ದಾಖಲೆ ಪದಕ
ಚೀನಾದ ಹಾಂಗ್‌ಝೌನಲ್ಲಿ ಸೆಪ್ಟೆಂಬರ್– ಅಕ್ಟೋಬರ್‌ನಲ್ಲಿ ನಡೆದ ಹತ್ತೊಂಬತ್ತನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 107 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು. ಇದರಲ್ಲಿ 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕಗಳು ಸೇರಿವೆ. ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನೂ ಪಡೆಯಿತು. ಈ ಬಾರಿ ಭಾರತ ತಂಡದಲ್ಲಿ ದಾಖಲೆಯ 655 ಅಥ್ಲೀಟ್‌ಗಳು ಭಾಗವಹಿಸಿದ್ದರು. ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ 6 ಚಿನ್ನ ಸೇರಿದಂತೆ 29 ಪದಕಗಳು ದೊರಕಿವೆ.
ಫಿಫಾ ಮಹಿಳಾ ವಿಶ್ವಕಪ್– ಸ್ಪೇನ್‌ಗೆ ಕಿರೀಟ
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಆಗಸ್ಟ್‌ನಲ್ಲಿ ನಡೆದ ಫಿಫಾ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ನಾಯಕಿ ಓಲ್ಗಾ ಕರ್ಮೋನಾ ನಾಯಕತ್ವದ ಸ್ಪೇನ್ ಚೊಚ್ಚಲ ಪ್ರಶಸ್ತಿ ಗೆದ್ದು ಸಂಭ್ರಮಿಸಿತು. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 1–0ಯಿಂದ ಮಣಿಸಿ ಚಾಂಪಿಯನ್ ಆಯಿತು.
ಆಟಗಾರ್ತಿಯ ತುಟಿ ಚುಂಬನ ವಿವಾದ
ಫಿಫಾ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸ್ಪೇನ್ ತಂಡದ ಆಟಗಾರ್ತಿ ಜೆನಿ ಹರ್ಮೊಸೊ ತುಟಿಗೆ ಸ್ಪೇನ್ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲ್ಸ್ ಚುಂಬಿಸಿದ್ದು, ಭಾರಿ ವಿವಾದಕ್ಕೆ ಕಾರಣವಾಯಿತು. ನಂತರ ಅವರನ್ನು ಹುದ್ದೆಯಿಂದಲೇ ಪದಚ್ಯುತಗೊಳಿಸಲಾಯಿತು.
ಬ್ಯಾಡ್ಮಿಂಟನ್ ತಾರೆಯರ ಸಾಧನೆ
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ವಿಶ್ವದ ನಂ.1 ಸ್ಥಾನವನ್ನು ತಲುಪಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಅಕ್ಟೋಬರ್‌ನಲ್ಲಿ ಪಾತ್ರವಾದರು. ಈ ಜೋಡಿಯು ಏಷ್ಯಾ ಚಾಂಪಿಯನ್‌ಷಿಪ್, ಸ್ವಿಸ್ ಓಪನ್, ಇಂಡೊನೇಷ್ಯಾ ಓಪನ್, ಕೊರಿಯಾ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಜತೆಗೆ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ, ಚೀನಾ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದು ಅಮೋಘ ಸಾಧನೆ ಮೆರೆಯಿತು. ಈ ಸಾಧನೆಗಾಗಿ 2023ರ ಸಾಲಿನ ಖೇಲ್ ರತ್ನ ಪ್ರಶಸ್ತಿಗೆ ಚಿರಾಗ್– ಸಾತ್ವಿಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಎಚ್.ಎಸ್. ಪ್ರಣಯ್ ಆಗಸ್ಟ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದರು. ಈ ಮೂಲಕ ವಿಶ್ವದಲ್ಲಿ 6ನೇ ರ‍್ಯಾಂಕ್ ಪಡೆದು ವೈಯಕ್ತಿಕ ಶ್ರೇಷ್ಠ ಸಾಧನೆ ಮೆರೆದರು. ಮಲೇಷ್ಯಾ ಮಾಸ್ಟರ್‌ನಲ್ಲಿ ಚಾಂಪಿಯನ್ ಆಗುವ ಜತೆಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದರು. ಏಷ್ಯನ್ ಕ್ರೀಡಾಕೂಟದಲ್ಲೂ ಐತಿಹಾಸಿಕ ಕಂಚು ಗೆದ್ದರು. ಆದರೆ, ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಈ ವರ್ಷ ನಿರಾಸೆ ಅನುಭವಿಸಿದರು. ಗಾಯದ ಕಾರಣ ಕೆಲ ತಿಂಗಳು ವಿಶ್ರಾಂತಿ ಪಡೆದು ಮರಳಿದ್ದ ಸಿಂಧು, ಸ್ಪೇನ್ ಮಾಸ್ಟರ್‌ನಲ್ಲಿ ಫೈನಲ್ ತಲುಪಿದ್ದೇ ವರ್ಷದ ಶ್ರೇಷ್ಠ ಸಾಧನೆಯಾಗಿದೆ.
ನೊವಾಕ್ ಜೊಕೊವಿಚ್‌ಗೆ 24ನೇ ಗ್ರ್ಯಾನ್‌ಸ್ಲಾಮ್
ಸರ್ಬಿಯಾದ 36 ವರ್ಷದ ಆಟಗಾರ ನೊವಾಕ್ ಜೊಕೊವಿಚ್ ಸೆಪ್ಟೆಂಬರ್‌ನಲ್ಲಿ ಅಮೆರಿಕಾ ಓಪನ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ 24ನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದು ದಾಖಲೆ ನಿರ್ಮಿಸಿದರು. ಈ ವರ್ಷ ಆಸ್ಟ್ರೇಲಿಯನ್ ಮತ್ತು ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದ ಜೊಕೊ ಅವರಿಗೆ ಕೈತಪ್ಪಿದ್ದು ವಿಂಬಲ್ಡನ್ ಪ್ರಶಸ್ತಿ ಮಾತ್ರ. ಅಲ್ಲೂ ಫೈನಲ್ ತಲುಪಿದರೂ ಕಾರ್ಲೋಸ್ ಅಲ್ಕರಾಜ್ ಎದುರು ಸೋಲನುಭವಿಸಿದ್ದರು.
ಹಾಕಿ ಸಾಧನೆ
ಭಾರತ ಹಾಕಿ ತಂಡ ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ಆಗಸ್ಟ್ 12ರಂದು ನಡೆದ ಫೈನಲ್‌ನಲ್ಲಿ ಮಲೇಷ್ಯಾ ತಂಡವನ್ನು 4–3 ಗೋಲುಗಳಿಂದ ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಿರೀಟ ಧರಿಸಿಕೊಂಡಿತು. ಭಾರತ ನಾಲ್ಕನೇ ಬಾರಿ ಚಾಂಪಿಯನ್ ಆಯಿತು. ವಿರಾಮದ ವೇಳೆ ಭಾರತ 1–3 ರಿಂದ ಹಿಂದಿತ್ತು. ಏಷ್ಯನ್ ಗೇಮ್ಸ್‌ನಲ್ಲೂ ಅಮೋಘ ಸಾಧನೆಯೊಡನೆ ಚಿನ್ನದ ಪದಕ ಗೆದ್ದುಕೊಂಡಿತು.
ಆದರೆ ವರ್ಷದ ಆರಂಭದಲ್ಲಿ ಒಡಿಶಾದ ರೂರ್ಕೆಲಾದಲ್ಲಿ (ಬಿರ್ಸಾ ಮುಂಡಾ ಕ್ರೀಡಾಂಗಣ) ನಡೆದ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ಉತ್ತಮ ಸಾಧನೆ ತೋರಲು ವಿಫಲವಾಗಿ 9ನೇ ಸ್ಥಾನ ಪಡೆಯಿತು. ಜರ್ಮನಿ, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ತಂಡಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವು.
ಚೆಸ್ ವಿಶ್ವಕಪ್‌ನಲ್ಲಿ ರನ್ನರ್ಅಪ್ ಆದ ಪ್ರಜ್ಞಾನಂದ
ಅಝರ್ಬೈಜಾನ್ನ ಬಾಕುವಿನಲ್ಲಿ ಆಗಸ್ಟ್‌ನಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ರನ್ನರ್ ಅಪ್ ಆಗಿ ಇತಿಹಾಸ ನಿರ್ಮಿಸಿದರು. ರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಫೈನಲ್ ಪಂದ್ಯಗಳಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ 18 ವರ್ಷದ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಚೆನ್ನೈನ ಆಟಗಾರ ಫೈನಲ್‌ನಲ್ಲಿ ಸೋತರೂ ಕೋಟ್ಯಂತರ ಭಾರತೀಯರ ಹೃದಯ ಗೆದ್ದರು.
ಅಕ್ಕ–ತಮ್ಮ ಗ್ರ್ಯಾಂಡ್‌ಮಾಸ್ಟರ್
ಆರ್. ಪ್ರಜ್ಞಾನಂದ ಅವರ ಸಹೋದರಿ ಆರ್.ವೈಶಾಲಿ ಅವರು ಡಿಸೆಂಬರ್‌ನಲ್ಲಿ ‘ಗ್ರ್ಯಾಂಡ್ ಮಾಸ್ಟರ್’ ಪಟ್ಟ ಪಡೆದ ಭಾರತದ ಮೂರನೇ ಆಟಗಾರ್ತಿ ಎನಿಸಿದರು. ಮಾತ್ರವಲ್ಲ, ಗ್ರ್ಯಾಂಡ್ ಮಾಸ್ಟರ್ ಆದ ವಿಶ್ವದ ಮೊದಲ ಸೋದರ–ಸೋದರಿ ಜೋಡಿ ಎನಿಸಿದರು. ವೈಶಾಲಿ, ಭಾರತದ 84ನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ.
ಗುಕೇಶ್ ಸಾಧನೆ
ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ 37 ವರ್ಷಗಳ ದೀರ್ಘ ಕಾಲದ ಆಧಿಪತ್ಯ ಅಂತ್ಯಗೊಳಿಸಿ ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಸೆಪ್ಟೆಂಬರ್‌ನಲ್ಲಿ ಭಾರತದ ಅಗ್ರಮಾನ್ಯ ಚೆಸ್ ಆಟಗಾರ ಎನಿಸಿದರು. 1986ರ ಜುಲೈ 1ರಿಂದ ಆನಂದ್ ಅವರು ದೇಶದ ನಂಬರ್ ವನ್ ಆಟಗಾರರಾಗಿದ್ದರು. ಚೆನ್ನೈನ ಗುಕೇಶ್ ಅವರು ಬಾಕುವಿನಲ್ಲಿ (ಅಜರ್‌ಬೈಜಾನ್) ನಡೆದ ವಿಶ್ವಕಪ್ ಚೆಸ್ ಟೂರ್ನಿಯ ವೇಳೆ ರೇಟಿಂಗ್‌ನಲ್ಲಿ ಆನಂದ್ ಅವರನ್ನು ಹಿಂದೆ ಹಾಕಿದ್ದರು.
ಕುಸ್ತಿಪಟುಗಳ ಪ್ರತಿಭಟನೆ, ಡಬ್ಲ್ಯುಎಫ್‌ಐ ವಿವಾದ
ಮಹಿಳಾ ಕುಸ್ತಿಪಟುಗಳ ಮೇಲೆ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ, ಪ್ರತಿಭಟನೆ, ಡಬ್ಲ್ಯುಎಫ್‌ಐ ಚುನಾವಣೆ ವರ್ಷವಿಡೀ ಸದ್ದು ಮಾಡಿದವು. ಪ್ರತಿಭಟನೆನಿರತ ಕುಸ್ತಿಪಟುಗಳು ಹೊಸ ಸಂಸತ್ ಭವನ ಉದ್ಘಾಟನೆಯಂದು ಒಳನುಗ್ಗಲು ನಡೆಸಿದ ಯತ್ನ ಭಾರೀ ಸುದ್ದಿಯಾಯಿತು.
ಈ ಮಧ್ಯೆ, ಭಾರತ ಕುಸ್ತಿ ಫೆಡರೇಷನ್ ಚುನಾವಣೆ ಹಲವು ಬಾರಿ ಮುಂದೂಡ ಲಾಯಿತು. ಹೀಗಾಗಿ, ನಿಗದಿಪಡಿಸಿದ ಗಡುವಿನೊಂದಿಗೆ ಚುನಾವಣೆ ನಡೆಸಲು ವಿಫಲವಾದ ಕಾರಣ ಜಾಗತಿಕ ಕುಸ್ತಿ ಸಂಸ್ಥೆಯು ಡಬ್ಲ್ಯುಎಫ್ಐಯನ್ನು ಅಮಾನತು ಮಾಡಿತು. ಡಿಸೆಂಬರ್‌ನಲ್ಲಿ ಕೊನೆಗೂ ಚುನಾವಣೆ ನಡೆದು, ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಡಬ್ಲ್ಯುಎಫ್‌ಐ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಆಯ್ಕೆಯನ್ನು ವಿರೋಧಿಸಿ, ಹೋರಾಟದ ಮುಂಚೂಣಿಯಲ್ಲಿದ್ದ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಡಿಸೆಂಬರ್ 21ರಂದು ಕುಸ್ತಿ ಕ್ರೀಡೆಗೆ ಕಣ್ಣೀರ ವಿದಾಯ ಘೋಷಿಸಿದರು. ಕುಸ್ತಿಪಟು ಬಜರಂಗ್ ಪೂನಿಯಾ ‘ಪದ್ಮಶ್ರೀ’ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿದರು. ನಿಯಮ ಉಲ್ಲಂಘಿಸಿದ ಕಾರಣಕ್ಕೆ ಡಬ್ಲ್ಯುಎಫ್‌ಐ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿತು.
ಮಾಹಿತಿ: ಪಿಟಿಐ, ಎಎಫ್‌ಪಿ ಮತ್ತು ವಿವಿಧ ವೆಬ್‌ಸೈಟ್, ಚಿತ್ರಗಳು: ಪಿಟಿಐ, ಎಎಫ್‌ಪಿ ಮತ್ತು ಪ್ರಜಾವಾಣಿ ಸಂಗ್ರಹ
ಪ್ಯಾರಾ ಏಷ್ಯನ್ ಗೇಮ್ಸ್ ಸಾಧನೆ
ಚೀನಾದ ಹಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಕೂಟದಲ್ಲೂ ಭಾರತದ ಕ್ರೀಡಾಪಟುಗಳು ದಾಖಲೆಯ 111 ಪದಕಗಳನ್ನು ಗೆದ್ದುಕೊಂಡರು. ಪದಕ ಪಟ್ಟಿಯಲ್ಲಿ 5ನೇಸ್ಥಾನ ಪಡೆದಿರುವುದು ಪ್ಯಾರಾ ಏಷ್ಯನ್ ಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆ ಎನಿಸಿಕೊಂಡಿತು. ಬ್ಯಾಡ್ಮಿಂಟನ್‌ನಲ್ಲಿ 4 ಚಿನ್ನ ಒಳಗೊಂಡಂತೆ 21 ಪದಕಗಳನ್ನು ಗೆದ್ದಿದೆ. ಚೆಸ್ ಮತ್ತು ಆರ್ಚರಿಯಲ್ಲಿ ಕ್ರಮವಾಗಿ ಎಂಟು ಹಾಗೂ ಏಳು ಪದಕಗಳನ್ನು ಭಾರತ ಜಯಿಸಿದೆ. ಜಾವೆಲಿನ್ ಥ್ರೋನಲ್ಲಿ ಸುಮಿತ್ ಅಂತಿಲ್ ವಿಶ್ವದಾಖಲೆ ನಿರ್ಮಿಸಿದರು
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚೋಪ್ರಾ ಚಿನ್ನದ ಸಾಧನೆ
ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದರು. ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ದೊರೆತ ಮೊಟ್ಟಮೊದಲ ಚಿನ್ನ ಇದಾಗಿದೆ. ಅವರು ವಿಶ್ವ ಚಾಂಪಿಯನ್‌ಷಿಪ್ ಹೊರತುಪಡಿಸಿ ಇತರ ಎಲ್ಲ ಪ್ರಮುಖ ಕೂಟಗಳಲ್ಲಿ ಚಿನ್ನ ಗೆದ್ದಿದ್ದರು. ಪ್ರಸಕ್ತ ವರ್ಷ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ, ಡೈಮಂಡ್ ಲೀಗ್ ಫೈನಲ್‌ನಲ್ಲಿ ಬೆಳ್ಳಿಯ ಸಾಧನೆ ಮೆರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.