ADVERTISEMENT

ಡೇವಿಸ್‌ ಕಪ್ ಫೈನಲ್ ನಂತರ ಟೆ‌ನ್ನಿಸ್‌ಗೆ ರಫೆಲ್‌ ನಡಾಲ್‌ ವಿದಾಯ

ಪಿಟಿಐ
Published 10 ಅಕ್ಟೋಬರ್ 2024, 13:18 IST
Last Updated 10 ಅಕ್ಟೋಬರ್ 2024, 13:18 IST
<div class="paragraphs"><p>ರಫೆಲ್‌ ನಡಾಲ್‌ </p></div>

ರಫೆಲ್‌ ನಡಾಲ್‌

   

ರಾಯಿಟರ್ಸ್‌ ಚಿತ್ರ

ಪ್ಯಾರಿಸ್‌ : ಆವೆ ಅಂಕಣದ ಸಾಮ್ರಾಟ (ಕಿಂಗ್‌ ಆಫ್‌ ಕ್ಲೇ) ಎಂದೇ ಹೆಸರಾದ ಸ್ಪೇನ್‌ನ ಟೆನಿಸ್‌ ದಿಗ್ಗಜ ರಫೆಲ್ ನಡಾಲ್ ಅವರು ಮುಂದಿನ ತಿಂಗಳ ಡೇವಿಸ್‌ ಕಪ್ ನಂತರ ತಮ್ಮ ಅತ್ಯಮೋಘ ಟೆನಿಸ್‌ ಜೀವನಕ್ಕೆ ಭಾವನಾತ್ಮಕ ವಿದಾಯ ಹೇಳಲಿದ್ದಾರೆ. 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್‌ ಗುರುವಾರ ತಮ್ಮ ನಿರ್ಧಾರ ಪ್ರಕಟಿಸಿದರು.

ADVERTISEMENT

ಅವರ ಯಶಸ್ವಿ ಟೆನಿಸ್‌ ಬದುಕಿಗೆ ಪದೇ ಪದೇ ಕಾಡುತ್ತಿದ್ದ ನೋವು, ಗಾಯಗಳು ಸಮಸ್ಯೆ ತಂದೊಡ್ಡಿದ್ದವು. 23 ವರ್ಷಗಳ ಟೆನಿಸ್‌ ಬದುಕಿನಲ್ಲಿ ಅವರು ದಾಖಲೆಯ 14 ಫ್ರೆಂಚ್‌ ಓಪನ್ ಸಿಂಗಲ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆನ್ನಿನ ಕೆಳಭಾಗದ ನೋವಿಗೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ವರ್ಷ ನಿವೃತ್ತರಾಗುವುದಾಗಿ 38 ವರ್ಷ ವಯಸ್ಸಿನ ನಡಾಲ್ ವರ್ಷದ ಆರಂಭದಲ್ಲೇ ಸುಳಿವು ನೀಡಿದ್ದರು.

ಡೇವಿಸ್‌ ಕಪ್ ಫೈನಲ್ ಸ್ಪೇನ್‌ ಮಲಗಾದಲ್ಲಿ ನವೆಂಬರ್‌ 19 ರಿಂದ 24ರವರೆಗೆ ನಡೆಯಲಿದ್ದು, ನಡಾಲ್ ಅವರು ಸ್ಪೇನ್ ತಂಡಕ್ಕೆ ಅಚ್ಚರಿಯ ಆಯ್ಕೆಯಾಗಿದ್ದಾರೆ. ಜುಲೈನಲ್ಲಿ ಕೊನೆಯ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಅವರು ಫಿಟ್ನೆಸ್‌ ಸಮಸ್ಯೆಯಿಂದಾಗಿ ಅಮೆರಿಕ ಓಪನ್ ಮತ್ತು ಲೇವರ್ ಕಪ್ ಟೂರ್ನಿಗಳಲ್ಲಿ ಆಡಿರಲಿಲ್ಲ.

‘ಕೆಲವು ವರ್ಷಗಳು, ಅದರಲ್ಲೂ ವಿಶೇಷವಾಗಿ ಕೊನೆಯ ಎರಡು ವರ್ಷಗಳು ನನ್ನ ಪಾಲಿಗೆ ಕಠಿಣವಾದವು’ ಎಂದು ನಡಾಲ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

ನನ್ನ ಕೊನೆಯ ಪ‍ಂದ್ಯಾವಳಿ ಡೇವಿಸ್‌ ಕಪ್‌ ಆಗಿದ್ದು ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಾನು 2004ರಲ್ಲಿ ಸೆವಿಲ್‌ನಲ್ಲಿ (ಸ್ಪೇನ್‌) ಡೇವಿಸ್ ಕಪ್ ಫೈನಲ್‌ನೊಡನೆ ನನ್ನ ವೃತ್ತಿ ಜೀವನ ಆರಂಭಿಸಿದ್ದೆ. ಈಗ ಡೇವಿಸ್‌ ಕಪ್‌ ಫೈನಲ್‌ನೊಡನೆ ಟೆನಿಸ್ ಪಯಣ ಕೊನೆಗೊಳಿಸಿ ವರ್ತುಲ ಪೂರ್ಣಗೊಳಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ನಡಾಲ್, ಗಾಯಗಳಿಗೆ ಒಳಗಾಗುತ್ತಿರುವುದು ಹೊಸದೇನಲ್ಲ. 2023ರ ಆಸ್ಟ್ರೇಲಿಯಾ ಓಪನ್ ಸಮಯದಲ್ಲಿ ಅವರು ಬೆನ್ನಿನ ಕೆಳಭಾಗದ ನೋವಿಗೆ ಒಳಗಾಗಿದ್ದರು. ಆ ವರ್ಷ ಅವರೊಗೆ ತಮ್ಮ ಅಚ್ಚುಮೆಚ್ಚಿನ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡಲಾಗಲಿಲ್ಲ. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಕೊನೆಯ ಎರಡು ಋತುಗಳಲ್ಲಿ ಅವರು 23 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಈ ವರ್ಷ ರೋಲಂಡ್‌ ಗ್ಯಾರೋಸ್‌ ಕ್ರೀಡಾಂಗಣದಲ್ಲಿ ಆಡಲಿಳಿದರೂ, ಮೊದಲೇ ಸುತ್ತಿನಲ್ಲೇ ಅಲೆಕ್ಸಾಂಡರ್‌ ಜ್ವರೇವ್ ಅವರಿಗೆ ಮಣಿದಿದ್ದರು. ಮುಂದಿನ ವರ್ಷ ಆಡುವ ಬಯಕೆಯಿಂದ ತಮಗೆ ನೀಡಲುದ್ದೇಶಿಸಿದ ‘ಭವ್ಯ ವಿದಾಯ’ ನಿರಾಕರಿಸಿದ್ದರು.

ಫ್ರೆಂಚ್‌ ಓಪನ್‌ನಲ್ಲಿ ಅವರ ಸಾಧನೆ ಹುಬ್ಬೇರಿಸುವ ರೀತಿಯಲ್ಲಿದೆ. ಜಯಾಪಜಯದ ದಾಖಲೆ 112–4. ಅವರು 2022ರಲ್ಲಿ ಕೊನೆಯ ಬಾರಿಗೆ ರೋಲಂಡ್‌ ಗ್ಯಾರೋಸ್‌ನಲ್ಲಿ ಸಿಂಗಲ್ಸ್ ಕಿರೀಟ ಧರಿಸಿದ್ದರು.

ಪ್ರಬಲ ಎದುರಾಳಿಯಾಗಿದ್ದ ರೋಜರ್‌ ಫೆಡರರ್‌ ಅವರು ನಿವೃತ್ತಿ ಘೋಷಿಸಿದ ಎರಡು ವರ್ಷಗಳ ನಂತರ ನಡಾಲ್ ಕೂಡ ಅದೇ ಹಾದಿ ಹಿಡಿದಿದ್ದಾರೆ. ಫೆಡರರ್‌ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ 24 ಪ್ರಶಸ್ತಿ ಗೆದ್ದಿದ್ದರು. 

ನಡಾಲ್ ನಿವೃತ್ತಿ ನಿರ್ಧಾರದಿಂದ ಟೆನಿಸ್‌ನ ‘ಬಿಗ್‌ ತ್ರಿ’ ಆಟಗಾರರಲ್ಲಿ ನೊವಾಕ್ ಜೊಕೊವಿಚ್‌ ಮಾತ್ರ ಸಕ್ರಿಯರಾಗಿ ಉಳಿಯಲಿದ್ದಾರೆ.

‘ಎಂಥಾ ವೃತ್ತಿಜೀವನ..... ನಮಗೆ ಅವಿಸ್ಮರಣೀಯ ನೆನಪುಗಳನ್ನು ಕೊಟ್ಟಿದ್ದಕ್ಕೆ, ಪ್ರೀತಿಸುವ ಈ ಕ್ರೀಡೆಯಲ್ಲಿ ಅಮೋಘ ಸಾಧನೆಗೈದಿರುವುದಕ್ಕೆ ಧನ್ಯವಾದಗಳು. ಇದೊಂದು ದೊಡ್ಡ ಗೌರವ’ ಎಂದು ಅವರ ದೀರ್ಘ ಕಾಲದ ಎದುರಾಳಿ, ಸ್ವಿಸ್‌ ತಾರೆ ಫೆಡರರ್‌ ಅವರು ನಡಾಲ್ ನಿವೃತ್ತಿ ನಿರ್ಧಾರಕ್ಕೆ ಆತ್ಮೀಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ತಮ್ಮ ಅಮೋಘ ವೃತ್ತಿ ಜೀವನಕ್ಕೆ ನೆರವಾದ ಕುಟುಂಬ ಸದಸ್ಯರನ್ನು ಮತ್ತು ನೆರವು ತಂಡಕ್ಕೆ ನಡಾಲ್ ಧನ್ಯವಾದ ಸಲ್ಲಿಸಿದ್ದಾರೆ.

ನಡಾಲ್ ಗೆದ್ದ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳು:

ಫ್ರೆಂಚ್‌ ಓಪನ್: 14 (2005, 06, 07, 08, 2010, 2011, 2012, 2013, 2014, 2017,2018, 2019, 2020,2022) ಅಮೆರಿಕ ಓಪನ್ 4 (2010, 2013, 2017, 2109) ಆಸ್ಟ್ರೇಲಿಯಾ ಓಪನ್: 2 (2010, 2013, 1017, 2022 ವಿಂಬಲ್ಡನ್ 2 (2008, 2010) ಒಟ್ಟು ಎಟಿಪಿ ಪ್ರಶಸ್ತಿಗಳು: 92 (ಇವುಗಳಲ್ಲಿ 36 ಮಾಸ್ಟರ್ಸ್‌ ಪ್ರಶಸ್ತಿ ಸೇರಿವೆ) ಒಲಿಂಪಿಕ್ಸ್‌: 2008 (ಬೀಜಿಂಗ್): ಸಿಂಗಲ್ಸ್ ಪ್ರಶಸ್ತಿ 2016 (ರಿಯೊ) ಡಬಲ್ಸ್ ಪ್ರಶಸ್ತಿ (ಮಾರ್ಕ್ ಲೋಪೆಝ್ ಜೊತೆಗಾರ). ಆವೆ ಅಂಕಣದಲ್ಲಿ ಅವರು ಸತತವಾಗಿ 81 ಪಂದ್ಯಗಳನ್ನು ಗೆದ್ದಿರುವುದು ಮುಕ್ತ (ಓಪನ್‌) ಯುಗದಲ್ಲಿ ದಾಖಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.