ಗುವಾಹಟಿ: ಫೆಬ್ರುವರಿ 19 ರಿಂದ 11 ದಿನಗಳ ಕಾಲ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ (ಕೆಐಯುಜಿ) 200 ಸಂಸ್ಥೆಗಳಿಂದ 4,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವೆ ನಂದಿತಾ ಗರ್ಲೋಸಾ, ಸರುಸಜೈ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪಾಪೋನ್ ಎಂದೇ ಖ್ಯಾತರಾಗಿರುವ ಗಾಯಕ ಅಂಗರಾಗ್ ಮಹಾಂತ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ .
ತಳಮಟ್ಟದ ಕ್ರೀಡೆಗಳನ್ನು ಉತ್ತೇಜಿಸುವುದು ಹಾಗೂ ದೇಶದಾದ್ಯಂತದ ಇರುವ ಯುವ ಪ್ರತಿಭೆಗಳನ್ನು ಗುರುತಿಸುವುದು ಕೆಐಯುಜಿನ ಮುಖ್ಯ ಉದ್ದೇಶವಾಗಿದೆ.
ಸ್ಪರ್ಧಿಗಳು 20 ಕ್ರೀಡಾ ವಿಭಾಗಗಳಲ್ಲಿ ಒಟ್ಟು 262 ಚಿನ್ನ, 263 ಬೆಳ್ಳಿ ಮತ್ತು 297 ಕಂಚಿನ ಪದಕಗಳಿಗೆ ಸೆಣಸಲಿದ್ದಾರೆ. ಗುವಾಹಟಿ ಸೇರಿದಂತೆ ರಾಜ್ಯದ ಆರು ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಅಥ್ಲೆಟಿಕ್ಸ್ , ರಗ್ಬಿ, ಬಾಸ್ಕೆಟ್‌ಬಾಲ್, ವಾಲಿಬಾಲ್, ಈಜು, ಬ್ಯಾಡ್ಮಿಂಟನ್, ಹಾಕಿ, ಫೆನ್ಸಿಂಗ್, ಕಬಡ್ಡಿ, ಮಹಿಳಾ ಫುಟ್‌ಬಾಲ್, ಟೆನಿಸ್, ಮಲ್ಲಖಾಂಬ್, ಜೂಡೋ ಮತ್ತು ಟೇಬಲ್ ಟೆನ್ನಿಸ್ ಸೇರಿದಂತೆ 16 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.