ಪಂಚಕುಲಾ: ಎಸ್.ಎಸ್. ಸ್ನೇಹಾ, ಕಾವೇರಿ ಪಾಟೀಲ, ಸಿಮಿ ಎನ್.ಎಸ್. ಮತ್ತು ದಾನೇಶ್ವರಿ ಅವರನ್ನು ಒಳಗೊಂಡ ಕರ್ನಾಟಕದ ಮಹಿಳೆಯರ 4x100 ಮೀಟರ್ ರಿಲೆ ತಂಡವು ಶುಕ್ರವಾರ ನಡೆದ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿತು.
ಕರ್ನಾಟಕ ತಂಡವು 45.38 ಸೆಕೆಂಡ್‌ನಲ್ಲಿ ಗುರಿ ತಲುಪಿತು. ಈ ಮೂಲಕ 2019ರಲ್ಲಿ ತಮಿಳುನಾಡು ತಂಡ ನಿರ್ಮಿಸಿದ್ದ ದಾಖಲೆಯನ್ನು (45.69 ಸೆ) ಮುರಿಯಿತು.
ಇಲ್ಲಿ ತಮಿಳುನಾಡು (45.40ಸೆ.) ಮತ್ತು ಒಡಿಶಾ (46.65 ಸೆ.) ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದವು.
ಮಹಿಳೆಯರ ಜಾವೆಲಿನ್ ಸ್ಪರ್ಧೆಯಲ್ಲಿ ಕರ್ನಾಟಕದ ರಮ್ಯಶ್ರೀ ಜೈನ್ (53.14 ಮೀಟರ್) ಅವರು ಬೆಳ್ಳಿ ಪದಕ ಗೆದ್ದರು. ಉತ್ತರಪ್ರದೇಶದ ಅನ್ನುರಾಣಿ (57.70 ಮೀ) ಚಿನ್ನ ಗೆದ್ದರೆ, ಆಂಧ್ರಪ್ರದೇಶದ ರಶ್ಮಿ ಕೆ. (52.39 ಮೀ) ಕಂಚು ಜಯಿಸಿದರು. ಕರ್ನಾಟಕದ ಕರಿಶ್ಮಾ ಸನಿಲ್ (50.63 ಮೀ.) ನಾಲ್ಕನೇ ಸ್ಥಾನ ಪಡೆದರು.
ಮಹಿಳೆಯರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕರ್ನಾಟಕದ ಪವಿತ್ರಾ ಜಿ. (13.20 ಮೀ) ಬೆಳ್ಳಿ ಪದಕ ಗೆದ್ದರು. ಕೇರಳದ ಶೀನಾ ವಿ. (13.44 ಮೀ) ಮತ್ತು ಆಂಧ್ರಪ್ರದೇಶದ ಎಂ. ಅನುಷಾ (13.09) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.