ADVERTISEMENT

ಒಲಿಂಪಿಕ್ಸ್‌ ಪ್ರಥಮಗಳು: ಇತಿಹಾಸದ ಇಣುಕು ನೋಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 4:24 IST
Last Updated 26 ಜುಲೈ 2024, 4:24 IST
   
  • ಒಲಿಂಪಿಕ್ಸ್‌ನಲ್ಲಿ, ಒಂದಕ್ಕೊಂದು ಜೋಡಿಸಿರುವ ಐದು ಬಳೆಗಳ ಲಾಂಛನವನ್ನು ಮೊದಲ ಬಾರಿ ಬೆಲ್ಜಿಯಮ್‌ನ ಆ್ಯಂಟ್‌ವರ್ಪ್‌ (1920) ಕ್ರೀಡೆಗಳಲ್ಲಿ ಬಳಸಲಾಯಿತು. ಇದನ್ನು ಒಲಿಂಪಿಕ್ಸ್‌ ಆಂದೋಲನದ ಪಿತಾಮಹ ಪಿಯರೆ ಡಿ ಕೂಬರ್ತಿ ಅವರೇ 1913ರಲ್ಲಿ ವಿನ್ಯಾಸಗೊಳಿಸಿದ್ದರು. ಐದು ಬಳೆಗಳು ಐದು ಖಂಡಗಳನ್ನು ಪ್ರತಿನಿಧಿಸಿದ್ದವು. ಇವುಗಳಿಗೆ ಬಳಸಿದ ಬಣ್ಣಗಳು, ಜಗತ್ತಿನ ಒಂದಲ್ಲ ಒಂದು ದೇಶಗಳ ಧ್ವಜಗಳಲ್ಲಿ ಬಳಕೆಯಾಗಿದ್ದವು.

  • ಒಲಿಂಪಿಕ್ಸ್‌ನಲ್ಲಿ ಮ್ಯಾಸ್ಕಟ್‌ಗಳ (ಚಿಹ್ನೆಯಾಗಿ ಬಳಕೆಯಾಗುವ ಗೊಂಬೆ) ಬಳಕೆಯಾಗಿದ್ದು 1972ರ ಮ್ಯೂನಿಕ್‌ (ಪಶ್ಚಿಮ ಜರ್ಮನಿ) ಕ್ರೀಡೆಗಳಲ್ಲಿ. ಡ್ಯಾಷೌಂಡ್‌ ತಳಿಯ ನಾಯಿಯನ್ನು ವಿನ್ಯಾಸವಾಗಿ ಬಳಸಲಾಯಿತು. ಇದಕ್ಕೆ ‘ವಾಲ್ಡಿ’ ಎಂಬ ಹೆಸರನ್ನು ಇಡಲಾಯಿತು. ಜರ್ಮನಿಯ ಕಲಾವಿದ ಒಟ್ಲ್ ಐಚೆರ್‌ ಇದನ್ನು ವಿನ್ಯಾಸಗೊಳಿಸಿದ್ದರು. ನಂತರ ಇದು ಪರಂಪರೆಯಾಗಿ ಮುಂದುವರೆಯಿತು. ಪ್ಯಾರಿಸ್‌ ಕ್ರೀಡೆಗಳಿಗೆ ಕೆಂಬಣ್ಣದ ‘ಫ್ರಿಜಿಯನ್‌ ಕ್ಯಾಪ್ಸ್‌’ ಮ್ಯಾಸ್ಕಟ್‌ ಆಗಿದೆ. ಈ ಟೋಪಿಯನ್ನು ಫ್ರೆಂಚ್‌ ಕ್ರಾಂತಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತಿದೆ.

  • ಮೊದಲ ಪ್ಯಾರಾಲಿಂಪಿಕ್ಸ್‌ (ಅಂಗವಿಕಲರ ಒಲಿಂಪಿಕ್ಸ್‌) ನಡೆದಿದ್ದು 1960ರಲ್ಲಿ. ರೋಮ್‌ ಒಲಿಂಪಿಕ್ಸ್‌ ನಂತರ ಇದನ್ನು ನಡೆಸಲಾಯಿತು. ಇದು ಕೂಡ ನಾಲ್ಕು ವರ್ಷಗಳಿಗೊಮ್ಮೆ, ಒಲಿಂಪಿಕ್ಸ್‌ ನಡೆದ ತಾಣದಲ್ಲೇ ನಡೆಯುತ್ತದೆ. 23 ದೇಶಗಳ 400 ಅಥ್ಲೀಟುಗಳು ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಅಂಗವೈಕಲ್ಯಕ್ಕೆ ಅನುಗುಣವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಒಲಿಂಪಿಕ್ಸ್‌ ರೀತಿಯಲ್ಲೇ ಪದಕಗಳನ್ನು ನೀಡಲಾಗುತ್ತದೆ.

    ADVERTISEMENT
  • ಒಲಿಂಪಿಕ್ಸ್‌ ಜ್ಯೋತಿಯಾತ್ರೆ ಮೊದಲ ಬಾರಿ ನಡೆದಿದ್ದು ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ. ಒಲಿಂಪಿಯಾದಲ್ಲಿ ಜ್ಯೋತಿ ಬೆಳಗಿ ಅದನ್ನು ಕ್ರೀಡೆ ನಡೆಯುವ ಸ್ಥಳಕ್ಕೆ ತರುವ ಪರಂಪರೆ ಆರಂಭವಾಯಿತು. ಮೊದಲ ಬಾರಿ ನಡೆದಾಗ ಏಳು ರಾಷ್ಟ್ರಗಳ ಮೂರು ಸಹಸ್ರ ಮಂದಿ ಈ ದೀವಟಿಗೆ ಓಟದಲ್ಲಿ ಪಾಲ್ಗೊಂಡಿದ್ದರು. ನಂತರದ ಒಲಿಂಪಿಕ್ಸ್‌ಗಳಲ್ಲಿ ಜ್ಯೋತಿ ಯಾತ್ರೆ ಇದು ಅನೂಚಾನವಾಗಿ ನಡೆಯುತ್ತಿದೆ. ಅಂತಿಮವಾಗಿ ಇದನ್ನು ಒಲಿಂಪಿಕ್ಸ್‌ ನಡೆಯುವಷ್ಟೂ ದಿನ ಮುಖ್ಯ ಕ್ರೀಡಾಂಗಣದ ಬಳಿ ಬೆಳಗಲಾಗುತ್ತದೆ.

  • ಒಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕಗಳನ್ನು ಗೆದ್ದುಕೊಂಡವರು ಮೈಕೆಲ್‌ ಫೆಲ್ಸ್ಪ್ಸ್‌. ಈಜುಪಟುವಾಗಿದ್ದ ಅವರು ನಾಲ್ಕು ಒಲಿಂಪಿಕ್ಸ್‌ಗಳಲ್ಲಿ 28 ಪದಕಗಳನ್ನು ಗೆದ್ದುಕೊಂಡಿದ್ದರು. 2004ರ ಅಥೆನ್ಸ್‌ ಒಲಿಂಪಿಕ್ಸ್‌ನಿಂದ 2016ರ ರಿಯೊ ಒಲಿಂಪಿಕ್ಸ್‌ವರೆಗೆ ಒಟ್ಟು ನಾಲ್ಕು ಕ್ರೀಡೆಗಳಲ್ಲಿ ಅವರು 23 ಚಿನ್ನ, 3 ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಬಾಚಿದ್ದರು. 2008ರ ಬೀಜಿಂಗ್‌ ಕ್ರೀಡೆಗಳಲ್ಲಿ ಎಂಟು ಚಿನ್ನ ಗೆದ್ದಿದ್ದು ಶ್ರೇಷ್ಠ ಸಾಧನೆ.

  • ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಕ್ರೀಡಾ ಗ್ರಾಮ (ಗೇಮ್ಸ್‌ ವಿಲೇಜ್‌) ಕಲ್ಪನೆ ಅಧಿಕೃತವಾಗಿ ಸಾಕಾರಗೊಂಡಿದ್ದು 1932ರ ಲಾಸ್‌ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ. ನಗರದ ಪಶ್ಚಿಮ ಭಾಗದಲ್ಲಿ ಈ ಗ್ರಾಮ ಮೈದಳೆಯಿತು. ಇದರಲ್ಲಿ 2000 ಅಥ್ಲೀಟುಗಳ (ಪುರುಷ) ವಾಸ್ತವ್ಯಕ್ಕೆಂದು ಕೊಠಡಿಗಳಿರುವ ಕೆಲವು ಕಟ್ಟಡಗಳು ನಿರ್ಮಾಣವಾದವು. ಇಲ್ಲಿ ಊಟ–ತಿಂಡಿ, ಆಸ್ಪತ್ರೆ, ಅಗ್ನಿಶಾಮಕ ಕಚೇರಿ, ಅಂಚೆ ಕಚೇರಿಯಿದ್ದು, ಮುಂದಿನ ಒಲಿಂಪಿಕ್ಸ್‌ಗೆ ಮಾದರಿಯಾಯಿತು. ಈಗ ಕ್ರೀಡಾಗ್ರಾಮಗಳು ಇನ್ನಷ್ಟು ಸುಸಜ್ಜಿತವಾಗುತ್ತಿವೆ.

  • ‌1956ರ ಒಲಿಂಪಿಕ್ಸ್‌ ಕ್ರೀಡೆಗಳು ಮೆಲ್ಬರ್ನ್‌ನಲ್ಲಿ ನಡೆದವು. ಆದರೆ ಮೊದಲ ಬಾರಿ ಈಕ್ವೆಸ್ಟ್ರಿಯನ್‌ ಸ್ಪರ್ಧೆಯನ್ನು ಸ್ವೀಡನ್‌ನಲ್ಲಿ ನಡೆಸಲಾಯಿತು. ಆಸ್ಟ್ರೇಲಿಯಾದಲ್ಲಿ ಹೊರದೇಶಗಳಿಂದ ತರುವ ಕುದುರೆಗಳಿಗೆ ಆರು ತಿಂಗಳ ಕಡ್ಡಾಯ ಕ್ವಾರಂಟೈನ್ ನಿಯಮವಿದ್ದು, ಒಲಿಂಪಿಕ್ಸ್‌ಗೆ ರಿಯಾಯಿತಿ ನೀಡಲು ಅಲ್ಲಿನ ಆಡಳಿತ ನಿರಾಕರಿಸಿತು. ಹೀಗಾಗಿ ಸ್ಟಾಕ್‌ಹೋಮ್‌ನಲ್ಲಿ ಈಕ್ವೆಸ್ಟ್ರಿಯನ್‌ ಸ್ಪರ್ಧೆಗಳನ್ನು ನಡೆಸಲು ಒಲಿಂಪಿಕ್‌ ಸಮಿತಿ ನಿರ್ಧರಿಸಿತು.

  • ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಮತ್ತು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಸ್ಪರ್ಧಿ ಮತ್ತು ಏಕೈಕ ಸ್ಪರ್ಧಿ ಅಮೆರಿಕದ ಎಡ್ಡಿ ಈಗನ್. 1920ರ ಆ್ಯಂಟ್‌ವರ್ಪ್‌ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನ ಟ್‌ವೇಟ್‌ ವಿಭಾಗದಲ್ಲಿ ಅವರು ಚಿನ್ನ ಗೆದ್ದರು. 1932ರಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನ ನಾಲ್ಕು ಮಂದಿಯ ಬಾಬ್‌ಸ್ಲೆಡ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ನಂತರವೂ ಎರಡೂ ಕ್ರೀಡೆಗಳಲ್ಲಿ ಇದುವರೆಗೆ ಏಳು ಮಂದಿ ಪದಕ ಗೆದ್ದಿದ್ದಾರೆ. ಆದರೆ ಎರಡರಲ್ಲೂ ಚಿನ್ನ ಗೆದ್ದವರು ಈಗನ್ ಮಾತ್ರ.

  • ಅಮೆರಿಕದ ಜಾನಿ ವೀಸ್‌ಮುಲ್ಲರ್‌ ಒಲಿಂಪಿಕ್ಸ್‌ ಈಜಿನಲ್ಲಿ ಐದು ಚಿನ್ನಗಳನ್ನು ಗೆದ್ದವರು. 1924ರ ಪ್ಯಾರಿಸ್‌ ಕ್ರೀಡೆಗಳಲ್ಲಿ ಮೂರು ಮತ್ತು ಆಮ್‌ಸ್ಟರ್ಡಾಮ್‌ನಲ್ಲಿ ಎರಡು ಚಿನ್ನದ ಪದಕ ಅವರ ಪಾಲಾಗಿತ್ತು. 67 ವಿಶ್ವದಾಖಲೆಗಳೂ ಅವರ ಹೆಸರಿನಲ್ಲಿದ್ದವು. ನಂತರ ಅವರು ಟಾರ್ಜಾನ್‌ ಸಿನಿಮಾಗಳಲ್ಲಿ ಜನಪ್ರಿಯರಾದರು. ‘ಟಾರ್ಜಾನ್‌ ಆ್ಯಂಡ್‌ ದಿನ ಏಪ್‌ ಮ್ಯಾನ್‌’ನಿಂದ ಹಿಡಿದು 12 ಟಾರ್ಜಾನ್‌ ಸಿನಿಮಾಗಳಲ್ಲಿ ಅವರು ನಟಿಸಿದರು.

  • ಟೆನಿಸ್‌ನ ನಾಲ್ಕೂ ಪ್ರಮುಖ ಗ್ರ್ಯಾನ್‌ಸ್ಲಾಮ್‌ (ಆಸ್ಟ್ರೇಲಿಯಾ ಓಪನ್, ಫ್ರೆಂಚ್‌ ಓಪನ್‌, ವಿಂಬಲ್ಡನ್ ಮತ್ತು ಅಮೆರಿಕ ಓಪನ್‌) ಮತ್ತು ಒಲಿಂಪಿಕ್ಸ್‌ ಇರುವ ವರ್ಷ ಆ ಚಿನ್ನವನ್ನೂ ಗೆದ್ದವರು ಒಬ್ಬರೇ ಒಬ್ಬರು. ಅವರು ಜರ್ಮನಿಯ ಸ್ಟೆಫಿ ಗ್ರಾಫ್‌. 1988ರ ಸೋಲ್‌ (ದಕ್ಷಿಣ ಕೊರಿಯಾ) ಕ್ರೀಡೆಗಳಲ್ಲಿ ಅವರು ನಾಲ್ಕೂ ಪ್ರಮುಖ ಟೂರ್ನಿಗಳ ಜೊತೆ ಸಿಂಗಲ್ಸ್‌ ಚಿನ್ನ ಗೆದ್ದರು. ಅವರು ಫೈನಲ್‌ನಲ್ಲಿ ಅರ್ಜೆಂಟೀನಾದ ಗೇಬ್ರಿಯೆಲಾ ಸೆಬಾಟಿನಿ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದರು. ಟೆನಿಸ್‌ 1924ರ ನಂತರ ಆ ವರ್ಷವೇ ಮರಳಿ ಒಲಿಂಪಿಕ್ಸ್‌ಗೆ ಸೇರ್ಪಡೆ ಆಗಿತ್ತು.‌‌

  • ಕ್ರಿಕೆಟ್‌ನಲ್ಲಿ ಟೆಸ್ಟ್‌ ಆಡಿದ ಇಬ್ಬರು ಒಲಿಂಪಿಕ್ಸ್‌ನಲ್ಲಿ ಹಾಕಿ ಆಟದಲ್ಲೂ ತಮ್ಮ ತಂಡವನ್ನು ಪ್ರತಿನಿಧಿಸಿದ್ದಾರೆ. ಕಳೆದ ವರ್ಷ, 89ನೇ ವಯಸ್ಸಿನಲ್ಲಿ ನಿಧನರಾದ ಆಸ್ಟ್ರೇಲಿಯಾದ ಪರ 29 ಟೆಸ್ಟ್‌ಗಳನ್ನು ಆಡಿದ್ದರು. ಬ್ಯಾಟರ್ ಆಗಿದ್ದ ಅವರು 1961ರಲ್ಲಿ ಮೊದಲ ಟೆಸ್ಟ್‌ ಆಡಿದ್ದರು. ಅದಕ್ಕೆ ಮೊದಲು 1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಅವರು ಹಾಕಿಯಲ್ಲೂ ತಂಡವನ್ನು ಪ್ರತಿನಿಧಿಸಿದ್ದರು. ನ್ಯೂಜಿಲೆಂಡ್‌ನ ಕೀತ್‌ ಥಾಮ್ಸನ್‌ ಕೂಡ ಹಾಕಿ ಮತ್ತು ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

  • ಮೊದಲ ಬಾರಿ ಒಲಿಂಪಿಕ್ಸ್‌ಗೆ ಬಹಿಷ್ಕಾರದ ಬಿಸಿ ತಟ್ಟಿದ್ದು 1976ರ ಮಾಂಟ್ರಿಯಲ್ ಕ್ರೀಡೆಗಳಲ್ಲಿ. ವರ್ಣಭೇದ ನೀತಿ ಅನುಸರಿಸುತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ನ್ಯೂಜಿಲೆಂಡ್‌ ರಗ್ಬಿ ತಂಡ ಪ್ರವಾಸ ಮಾಡಿತ್ತು. ಇದನ್ನು ಆಫ್ರಿಕಾದ ರಾಷ್ಟ್ರಗಳು ವಿರೋಧಿಸಿದ್ದವು. ತಾಂಜಾನಿಯಾ ನೇತೃತ್ವದಲ್ಲಿ 22 ರಾಷ್ಟ್ರಗಳು ಒಲಿಂಪಿಕ್ಸ್‌ ಬಹಿಷ್ಕರಿಸಿದವು. 1980ರ ಮಾಸ್ಕೊ ಒಲಿಂಪಿಕ್ಸ್‌ಗೆ ಅಮೆರಿಕ ಬಣದ ರಾಷ್ಟ್ರಗಳು, 1984ರ ಲಾಸ್‌ ಏಂಜಲಿಸ್‌ ಕ್ರೀಡೆಗಳಿಗೆ ರಷ್ಯಾ ಬಣದ ರಾಷ್ಟ್ರಗಳು ಬಹಿಷ್ಕರಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.