ADVERTISEMENT

ಬಿಂದ್ರಾಗೆ ‘ಬ್ಲೂ ಕ್ರಾಸ್‌’ ಗೌರವ

ಪಿಟಿಐ
Published 30 ನವೆಂಬರ್ 2018, 19:21 IST
Last Updated 30 ನವೆಂಬರ್ 2018, 19:21 IST
ಅಭಿನವ್‌ ಬಿಂದ್ರಾ
ಅಭಿನವ್‌ ಬಿಂದ್ರಾ   

ನವದೆಹಲಿ:ಭಾರತದ ಒಲಿಂಪಿಯನ್‌ ಶೂಟರ್‌ ಅಭಿನವ್‌ ಬಿಂದ್ರಾ ಅವರು ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ನೀಡುವ ಪ್ರತಿಷ್ಠಿತ ‘ಬ್ಲೂ ಕ್ರಾಸ್‌’ ಗೌರವಕ್ಕೆ ಭಾಜನರಾಗಿದ್ದಾರೆ.

ಶೂಟಿಂಗ್‌ ಲೋಕಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಗೌರವ ನೀಡಲಾಗಿದೆ. ಈ ಪುರಸ್ಕಾರ ಪಡೆದ ಭಾರತದ ಮೊದಲ ಶೂಟರ್‌ ಎಂಬ ಹಿರಿಮೆಗೂ ಅಭಿನವ್‌ ಪಾತ್ರರಾಗಿದ್ದಾರೆ.

36 ವರ್ಷ ವಯಸ್ಸಿನ ಬಿಂದ್ರಾ, ಒಲಿಂ‍‍ಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಏಕೈಕ ಶೂಟರ್‌ ಆಗಿದ್ದಾರೆ. 2008ರ ಬೀಜಿಂಗ್‌ ಒಲಿಂಪಿಕ್ಸ್‌ನ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. 2006ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದಿರುವ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಜಯಿಸಿದ್ದಾರೆ.

2010ರಿಂದ 2014ರ ವರೆಗೆ ಐಎಸ್‌ಎಸ್‌ಎಫ್‌ ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿದ್ದ ಅವರು 2014 ರಿಂದ 2018ರ ವರೆಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

‘ಐಎಸ್‌ಎಸ್‌ಎಫ್‌ ನೀಡುವ ಪ್ರತಿಷ್ಠಿತ ‘ಬ್ಲೂ ಕ್ರಾಸ್‌’ ಗೌರವಕ್ಕೆ ಭಾಜನವಾಗಿರುವುದು ಅತೀವ ಖುಷಿ ನೀಡಿದೆ. ಈ ಪುರಸ್ಕಾರ ಹೆಮ್ಮೆಯಿಂದ ಬೀಗುವಂತೆ ಮಾಡಿದೆ’ ಎಂದು ಬಿಂದ್ರಾ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.