ಖ್ಯಾತ ಶೂಟಿಂಗ್ ಪಟು ಅಭಿನವ್ ಬಿಂದ್ರಾ ಅವರ ಜಿರಕ್‌ಪುರದ ನಿವಾಸಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ಗುರುವಾರ ಭೇಟಿ ನೀಡಿದ್ದಾರೆ.
ಈ ವೇಳೆ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ ಅಭಿನವ್ ಬಿಂದ್ರಾ 'ಟೋಕಿಯೊ' ಹೆಸರಿನ ಸಾಕು ನಾಯಿಮರಿಯನ್ನು ಕಾಣಿಕೆ ನೀಡಿದ್ದಾರೆ.
ಭೇಟಿ ಸಮಯದ ಫೋಟೊಗಳನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ನೀರಜ್ ಚೋಪ್ರಾ, 'ಅಭಿನವ್ ಬಿಂದ್ರಾ ಸರ್, ನಿಮ್ಮ ಕುಟುಂಬದ ಆತ್ಮೀಯ ಆತಿಥ್ಯಕ್ಕಾಗಿ ಮತ್ತು ಟೋಕಿಯೊ(ಸಾಕು ನಾಯಿಮರಿ) ಅನ್ನು ನೀಡಿದ್ದಕ್ಕಾಗಿ ನಿಮ್ಮನ್ನು ಗೌರವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗರಿಷ್ಠ 87.58 ಮೀಟರ್ ದೂರ ಜಾವೆಲಿನ್ ಎಸೆದಿರುವ ನೀರಜ್ ಚೋಪ್ರಾ, ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 23 ವರ್ಷದ ನೀರಜ್ ಚೋಪ್ರಾ, ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
36 ವರ್ಷ ವಯಸ್ಸಿನ ಬಿಂದ್ರಾ, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಏಕೈಕ ಶೂಟರ್ ಆಗಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. 2006ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದಿರುವ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಜಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.