ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್ ಸಿದ್ಧತೆ ಬಿರುಸು ಪಡೆಯಲಿ: ಶೂಟರ್ ಅಭಿನವ್‌ ಬಿಂದ್ರಾ

ಪಿಟಿಐ
Published 19 ಆಗಸ್ಟ್ 2021, 13:17 IST
Last Updated 19 ಆಗಸ್ಟ್ 2021, 13:17 IST
ಅಭಿನವ್‌ ಬಿಂದ್ರಾ
ಅಭಿನವ್‌ ಬಿಂದ್ರಾ   

ಮುಂಬೈ: ಮುಂದಿನ ಒಲಿಂಪಿಕ್ಸ್‌ಗೆ ಮೂರು ವರ್ಷಗಳು ಮಾತ್ರ ಬಾಕಿ ಇರುವುದರಿಂದ ಸಿದ್ಧತೆ ಮತ್ತು ಅಭ್ಯಾಸ ಸವಾಲಿನದ್ದಾಗಲಿದೆ ಎಂದು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಟ್ಟ ಶೂಟರ್ ಅಭಿನವ್‌ ಬಿಂದ್ರಾ ಅಭಿಪ್ರಾಯಪಟ್ಟರು.

ಎಲ್ಮ್ಸ್‌ ಸ್ಪೋರ್ಟ್ಸ್ ಫೌಂಡೇಷನ್ ಗುರುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳನ್ನು ಅಭಿನಂದಿಸಿ, ಮುಂದಿನ ಹಾದಿಯ ಬಗ್ಗೆ ಎಚ್ಚರಿಕೆ ನೀಡಿದರು.

‘ಈ ಬಾರಿ ಭಾರತದ ಅಥ್ಲೀಟ್‌ಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ದೇಶಕ್ಕೆ ಇದೇ ಮೊದಲ ಬಾರಿ ಏಳು ಪದಕಗಳು ಬಂದಿವೆ. ಅಮೋಘ ಗೆಲುವು ಮತ್ತು ಕೂದಲೆಳೆ ಅಂತರದಲ್ಲಿ ಪದಕಗಳನ್ನು ಕಳೆದುಕೊಂಡ ವಿದ್ಯಮಾನಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕ್ರೀಡೆಯಲ್ಲಿ ಇವೆಲ್ಲ ಸಾಮಾನ್ಯ. ಆದ್ದರಿಂದ ಬೇಸರ ಮರೆತು 2024ರ ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದರು.

ADVERTISEMENT

‘ಸಾಮಾನ್ಯವಾಗಿ ಒಂದು ಒಲಿಂಪಿಕ್ಸ್ ಮುಗಿದ ನಂತರ ಮುಂದಿನ ಒಲಿಂಪಿಕ್ಸ್‌ಗೆ ತಯಾರಿ ಆರಂಭಿಸುವ ಮೊದಲು ಕ್ರೀಡಾಪಟುಗಳಿಗೆ ಒಂದು ವರ್ಷ ವಿಶ್ರಾಂತಿ ಇರುತ್ತದೆ. ಆದರೆ ಈಗ ಹಾಗೆ ಮಾಡಲು ಸಾಧ್ಯವಿಲ್ಲ. ಮೂರೇ ವರ್ಷಗಳಲ್ಲಿ ಮತ್ತೊಂದು ಒಲಿಂಪಿಕ್ಸ್ ಬರುತ್ತಿದೆ. ಆದ್ದರಿಂದ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕಾಗಿದೆ’ ಎಂದು ಅವರು ಸೂಚಿಸಿದರು.

ಕಳೆದ ವರ್ಷ ನಡೆಯಬೇಕಾಗಿದ್ದ ಟೋಕಿಯೊ ಒಲಿಂಪಿಕ್‌ ಕೂಟವನ್ನು ಕೊರೊನಾ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲಾಗಿತ್ತು. ಮುಂದಿನ ಒಲಿಂಪಿಕ್ಸ್ ನಿಗದಿಯಂತೆ 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿದೆ. ಸಮಯ ಕಡಿಮೆ ಇರುವುದರಿಂದ ಹೆಚ್ಚು ಅರ್ಹತಾ ಟೂರ್ನಿಗಳು ನಡೆಯದೇ ಇರುವ ಸಾಧ್ಯತೆ ಇದೆ.

‘ವೈಜ್ಞಾನಿಕ ತಳಹದಿಯ ತರಬೇತಿ ಮತ್ತು ಆರಂಭದಿಂದಲೇ ಉತ್ತಮ ಪರಿಸರವನ್ನು ಸೃಷ್ಟಿಸುವ ಮೂಲಕ ಸಜ್ಜುಗೊಳಿಸಿದರೆ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬಲ್ಲರು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ವಿಶ್ಲೇಷಣಾತ್ಮಕ ಮಾದರಿಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು 2008ರ ಬೀಜಿಂಗ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಅಭಿನವ್ ಅಭಿಪ್ರಾಯಪಟ್ಟರು.

‘ದೇಶದಲ್ಲಿ ಕಾಲೇಜು ಮಟ್ಟದ ಕ್ರೀಡಾ ಚಟುವಟಿಕೆ ನಿರೀಕ್ಷಿತ ರೀತಿಯಲ್ಲಿ ನಡೆಯುತ್ತಿಲ್ಲ. ಅದು ಇನ್ನಷ್ಟು ಸುಧಾರಣೆ ಕಾಣಬೇಕಾಗಿದೆ. ಇಲ್ಲವಾದರೆ ಜೂನಿಯರ್ ಹಂತದಲ್ಲಿ ಮಾಡಿದ ಸಾಧನೆ ಸೀನಿಯರ್ ಮಟ್ಟಕ್ಕೆ ತಲುಪಿದಾಗ ಮುರುಟಿಹೋಗುವ ಸಾಧ್ಯತೆ ಇದೆ’ ಎಂದು 38 ವರ್ಷದ ಶೂಟರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.