ತಾಷ್ಕೆಂಟ್: ವೈಯಕ್ತಿಕ ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಅಚಿಂತ ಶೆವುಲಿ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
73 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದ 19 ವರ್ಷದ ಅಚಿಂತ ಒಟ್ಟು 313 ಕೆಜಿ ( ಸ್ನ್ಯಾಚ್‌ನಲ್ಲಿ 141 ಮತ್ತು ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 172) ಭಾರ ಎತ್ತಿದರು.
ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್ ಚಿನ್ನದ ಪದಕ ವಿಜೇತರಾಗಿರುವ ಅಚಿಂತ, ಕಳೆದ ತಿಂಗಳು ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 309 ಕೆಜಿ (139 +170) ತೂಕ ಎತ್ತಿದ್ದರು. ಇದು ಅವರ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.
ಇಂಡೊನೇಷ್ಯಾದ ಜುನೈನ್‌ಶಾಹ್ ರಿಜ್ಕಿ ಅವರು 349 ಕೆಜಿ (155+194) ಸಾಧನೆ ಮಾಡುವ ಮೂಲಕ ಚಿನ್ನ ಗೆದ್ದರು. ಅಲ್ಲದೆ ಅವರು ಎಲ್ಲ ಮೂರೂ ವಿಭಾಗಗಳಲ್ಲೂ ಇದ್ದ ಜೂನಿಯರ್ ವಿಶ್ವದಾಖಲೆ ಮುರಿದರು. ರಷ್ಯಾದ ಸೆರೊಬಿಯನ್ ಗೆವೊರ್‌ಜಿ (ಒಟ್ಟು 308 ಕೆಜಿ, 143+165) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸ್ನ್ಯಾಚ್, ಕ್ಲೀನ್ ಆ್ಯಂಡ್ ಜೆರ್ಕ್ ಮತ್ತು ಒಟ್ಟು ಎತ್ತಿದ ಭಾರ ಈ ಮೂರು ವಿಭಾಗಗಳಲ್ಲೂ ಪದಕ ನೀಡಲಾಗುತ್ತದೆ. ಹೀಗಾಗಿ ಸ್ನ್ಯಾಚ್ ವಿಭಾಗದ ಕಂಚಿನ ಪದಕವೂ ಅಚಿಂತ ಪಾಲಾಯಿತು.
ಭಾರತದ ಇನ್ನೋರ್ವ ಸ್ಪರ್ಧಿ, ಯೂತ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜೆರೆಮಿ ಲಾಲ್‌ರಿನ್ನುಂಗಾ ಅವರು ಬುಧವಾರ 67 ಕೆಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಆದರೆ ಸ್ನ್ಯಾಚ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.