undefined
ಲಾಸ್ ಏಂಜಲೀಸ್: ಭಾರತದ ಅದಿತಿ ಅಶೋಕ್ ಅವರು ಲೇಡಿಸ್ ಪ್ರೊಫೆಷನಲ್ ಗಾಲ್ಫ್ ಅಸೋಸಿಯೇಷನ್ (ಎಲ್‌ಪಿಜಿಎ) ಟೂರ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.
ಇಲ್ಲಿನ ವಿಲ್‌ಶೈರ್ ಕಂಟ್ರಿ ಕ್ಲಬ್‌ನಲ್ಲಿ ಭಾನುವಾರ ಕೊನೆಗೊಂಡ ಜೆಎಂ ಈಗಲ್ ಲಾಸ್ ಏಂಜಲೀಸ್ ಗಾಲ್ಫ್ ಚಾಂಪಿಯನ್‌ಷಿಪ್‌ನ ‘ಪ್ಲೇ ಆಫ್‘ನಲ್ಲಿ ಸೋತ ಅವರು ಜಂಟಿ ಎರಡನೇ ಸ್ಥಾನ ಪಡೆದರು. ಮಹಿಳಾ ಗಾಲ್ಫರ್‌ಗಳ ಅತಿದೊಡ್ಡ ಟೂರ್ ಆಗಿರುವ ಎಲ್‌ಪಿಜಿಎನಲ್ಲಿ ಅದಿತಿ ಅವರ ಅತ್ಯುತ್ತಮ ಪ್ರದರ್ಶನ ಇದಾಗಿದೆ.
ಬೆಂಗಳೂರಿನ 25 ವರ್ಷದ ಗಾಲ್ಫರ್ ಅಂತಿಮ ಸುತ್ತಿನ ಸ್ಪರ್ಧೆಯನ್ನು 67 ಸ್ಟ್ರೋಕ್‌ಗಳಲ್ಲಿ ಕೊನೆಗೊಳಿಸಿದರು. ಈ ಮೂಲಕ ನಾಲ್ಕು ಸುತ್ತುಗಳಲ್ಲಿ ಒಟ್ಟು 275 ಸ್ಕೋರ್ ಮಾಡಿ, ಆಸ್ಟ್ರೇಲಿಯಾದ ಹನಾ ಗ್ರೀನ್ ಮತ್ತು ಚೀನಾದ ಕ್ಸಿಯು ಲಿನ್ ಜತೆ ಸಮಬಲ ಸಾಧಿಸಿದರು.
ಇದರಿಂದ ವಿಜೇತರನ್ನು ನಿರ್ಣಯಿಸಲು ‘ಪ್ಲೇ ಆಫ್’ ಮೊರೆಹೋಗಲಾಯಿತು. ಒತ್ತಡವನ್ನು ನಿಭಾಯಿಸಿದ ಹನಾ ಅವರು ಕಿರೀಟ ಮುಡಿಗೇರಿಸಿಕೊಂಡರೆ, ಅದಿತಿ ಮತ್ತು ಲಿನ್ ಜಂಟಿ ‘ರನ್ನರ್ಸ್ ಆಪ್’ ಆದರು.
26 ವರ್ಷದ ಗ್ರೀನ್ ಅವರಿಗೆ ಎಲ್‌ಪಿಜಿಎ ಟೂರ್‌ನಲ್ಲಿ ದೊರೆತ ಮೂರನೇ ಹಾಗೂ, ನಾಲ್ಕು ವರ್ಷಗಳಲ್ಲಿ ಲಭಿಸಿದ ಮೊದಲ ಪ್ರಶಸ್ತಿ ಇದಾಗಿದೆ. 2019 ರಲ್ಲಿ ನಡೆದಿದ್ದ ಪೋರ್ಟ್‌ಲ್ಯಾಂಡ್ ಕ್ಲಾಸಿಕ್ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು.
‘ಎಲ್‌ಪಿಜಿಎ ಟೂರ್ನಿಯಲ್ಲಿ ಈ ಹಂತದವರೆಗೆ ಒಮ್ಮೆಯೂ ಏರಿರಲಿಲ್ಲ. ಪ್ರತಿ ಸುತ್ತು ಕೊನೆಗೊಂಡಂತೆ ಪೈಪೋಟಿ ಹೆಚ್ಚುತ್ತಿತ್ತು. 10 ಮಂದಿಗೆ ಇದು ಉತ್ತಮ ಟೂರ್ನಿಯಾಗಿದ್ದರೂ, ಒಬ್ಬರಿಗೆ ಮಾತ್ರ ಗೆಲ್ಲಲು ಸಾಧ್ಯ. ನಾನು ಆಡಿದ ರೀತಿ ತೃಪ್ತಿ ನೀಡಿದೆ’ ಎಂದು ಅದಿತಿ ಪ್ರತಿಕ್ರಿಯಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಅವರು ಇಲ್ಲಿ ಮೊದಲ ಸುತ್ತಿನಲ್ಲಿ 66 ಸ್ಟ್ರೋಕ್‌ಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿದ್ದರು. ಆದರೆ ಎರಡು (70) ಮತ್ತು ಮೂರನೇ (72) ಸುತ್ತುಗಳಲ್ಲಿ ಹೆಚ್ಚು ಸ್ಟ್ರೋಕ್‌ಗಳನ್ನು ಬಳಸಿದ್ದರು.
ಶನಿವಾರ ಮೂರನೇ ಸುತ್ತಿನ ಬಳಿಕ ಜಂಟಿ ಐದನೇ ಸ್ಥಾನದಲ್ಲಿದ್ದ ಅವರು, ಅಂತಿಮ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡಿದರು. ಅದಿತಿ ಕಳೆದ ಏಳು ವರ್ಷಗಳಿಂದ ಎಲ್‌ಪಿಜಿಎ ಟೂರ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.