ADVERTISEMENT

ಏಷ್ಯನ್ ಗೇಮ್ಸ್‌: ಮತ್ತೆ ಮೂವರ ಅಥ್ಲೀಟಗಳ ಸೇರ್ಪಡೆ

4x100 ಮೀ. ರಿಲೇ ತಂಡಗಳನ್ನು ಕಳುಹಿಸದಿರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
<div class="paragraphs"><p>ಅಮ್ಲನ್‌</p></div>

ಅಮ್ಲನ್‌

   

ಚಂಡೀಗಢ: ಭಾರತ ಅಥ್ಲೆಟಿಕ್‌ ಫೆಡರೇಷನ್‌ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಅಥ್ಲೆಟಿಕ್ಸ್ ತಂಡಕ್ಕೆ 3000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧಿ, ಹರಿಯಾಣದ ಪ್ರೀತಿ ಲಾಂಬಾ ಅವರನ್ನು ಭಾರತ ಅಥ್ಲೆಟಿಕ್‌ ಫೆಡರೇಷನ್‌ ಸೋಮವಾರ ಸೇರ್ಪಡೆಗೊಳಿಸಿದೆ. ಇವರ ಜೊತೆಗೆ ಸ್ಪ್ರಿಂಟ್ ಓಟಗಾರ ಅಮ್ಲನ್‌ ಬೊರ್ಗೊಹೈನ್ ಮತ್ತು 400 ಮೀ. ಓಟಗಾರ್ತಿ ಪ್ರಾಚಿ ಅವರನ್ನೂ ಸೇರ್ಪಡೆ ಮಾಡಲಾಗಿದೆ.

ಸೋಮವಾರ ಇಲ್ಲಿ ಇಂಡಿಯನ್‌ ಗ್ರ್ಯಾನ್‌ಪ್ರಿ ಅಥ್ಲೆಟಿಕ್‌ ಕೂಟ5 ಮುಕ್ತಾಯಗೊಂಡ ನಂತರ, ಈ ಸೇರ್ಪಡೆ ಮಾಡಲಾಗಿದೆ. ಕೂಟದ ಅಂತಿಮ ದಿನವಾದ ಸೋಮವಾರ ಇಬ್ಬರು ಸ್ಪರ್ಧಿಗಳಿದ್ದ ಮಹಿಳೆಯರ 3000 ಮೀ. ಓಟವನ್ನು ಲಾಂಬಾ  9ನಿ.45.13 ಸೆ.ಗಳಲ್ಲಿ ಓಡಿ ಎಎಫ್‌ಐ ನಿಗದಿಪಡಿಸಿದ ಅರ್ಹತಾ ಮಾನದಂಡವನ್ನು (9ನಿ.47 ಸೆ.) ಮೀರಿದ್ದರು. 27 ವರ್ಷದ ಲಾಂಬಾ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಪಾರುಲ್‌ ಚೌಧರಿ ನಂತರ ಎರಡನೇ ಸ್ಥಾನ (9:52.89) ಪಡೆದಿದ್ದರು. ಜುಲೈನಲ್ಲಿ ನಡೆದ ನಾಲ್ಕನೇ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಮತ್ತಷ್ಟು ಪ್ರಗತಿ ಸಾಧಿಸಿದ್ದು 9ನಿ.48.50 ಸೆ.ಗಳಲ್ಲಿ ಓಟ ಮುಗಿಸಿ ನಾಲ್ಕನೇ ಸ್ಥಾನ ಪಡೆದಿದ್ದರು.

ADVERTISEMENT

ಉತ್ತರ ಪ್ರದೇಶದ ಪ್ರಾಚಿ ಅವರಿಗೆ ಮಹಿಳೆಯರ 4x400 ಮೀ. ಓಟದಲ್ಲಿ ಸ್ಪರ್ಧಿಸಲು ಎಎಫ್ಐ ಆಯ್ಕೆ ಸಮಿತಿ ಸಮ್ಮತಿ ನೀಡಿದೆ. ಬೊರ್ಗೊಹೈನ್ ಅವರು ಪುರುಷರ 200 ಮೀ. ಓಟದಲ್ಲಿ ಸ್ಪರ್ಧಿಸಲಿದ್ದಾರೆ.

ಕ್ರೀಡಾ ಸಚಿವಾಲಯವು ಕಳೆದ ತಿಂಗಳ ಕೊನೆಯಲ್ಲಿ 65 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಈಗ ಮತ್ತೆ ಮೂವರ ಸೇರ್ಪಡೆಯಿಂದ ಈ ಸಂಖ್ಯೆ 68 ಆಗಲಿದೆ.

25 ವರ್ಷದ ಓಟಗಾರ ಬೊರ್ಗೊಹೈನ್ ಅವರು ತಂಡದಲ್ಲಿ ಇರಲಿದ್ದಾರೆ ಎಂದು ಎಎಫ್‌ಐ ಅಧ್ಯಕ್ಷ ಅದಿಲ್ ಸುಮರಿವಾಲಾ ಇದಕ್ಕೆ ಮೊದಲು ಹೇಳಿದ್ದರು. ಸೋಮವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಅಸ್ಸಾಂ ಓಟಗಾರನ ಸೇರ್ಪಡೆಯನ್ನು ದೃಢಪಡಿಸಲಾಯಿತು. ಅವರು ಅರ್ಹತ ಮಾನದಂಡ (20.61 ಸೆ.) ತಲುಪಲು ವಿಫಲರಾಗಿದ್ದರು. ಆದರೆ ಕಳೆದ ತಿಂಗಳು ನಡೆದ ವಿಶ್ವ ಯುನಿವರ್ಸಿಟಿ ಗೇಮ್ಸ್‌ನಲ್ಲಿ 20.5 ಸೆ.ಗಳಲ್ಲಿ ಓಡಿ ಕಂಚಿನ ಪದಕ ಪಡೆದಿದ್ದರು.

ಪುರುಷರ 20 ಕಿ.ಮೀ. ರೇಸ್‌ ವಾಕ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊದಿರುವ ಅಕ್ಷದೀಪ್ ಸಿಂಗ್ ಅವರನ್ನು ಕೈಬಿಟ್ಟು ವಿಕಾಶ್ ಸಿಂಗ್‌ ಅವರನ್ನು ಸೇರ್ಪಡಿ ಮಾಡಲಾಗಿದೆ.

ಅರ್ಹತಾ ಮಟ್ಟ ತಲುಪಲು ವಿಫಲವಾದ ಕಾರಣಕ್ಕೆ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ 4x100 ಮೀ. ರಿಲೇ ತಂಡವನ್ನು ಕಳುಹಿಸದಿರಲು ನಿರ್ಧರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.