ADVERTISEMENT

ಸ್ಪರ್ಧಾಕಣಕ್ಕೆ ಮರಳಲಿರುವ ನೀರಜ್ ಚೋಪ್ರಾ: ಇಂದು ಲುಸಾನ್‌ ಡೈಮಂಡ್‌ ಲೀಗ್ ಕೂಟ

ಪಿಟಿಐ
Published 21 ಆಗಸ್ಟ್ 2024, 22:30 IST
Last Updated 21 ಆಗಸ್ಟ್ 2024, 22:30 IST
<div class="paragraphs"><p>ನೀರಜ್ ಚೋಪ್ರಾ</p></div>

ನೀರಜ್ ಚೋಪ್ರಾ

   

(ಪಿಟಿಐ ಚಿತ್ರ)

ಲುಸಾನ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಎರಡು ವಾರಗಳ ನಂತರ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಗುರುವಾರ ನಡೆಯುವ ಲುಸಾನ್ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆ.

ADVERTISEMENT

ಮುಂದಿನ ತಿಂಗಳು ನಡೆಯಲಿರುವ ಋತುವಿನ ಅಂತ್ಯದ ಡೈಮಂಡ್‌ ಲೀಗ್ ಟ್ರೋಫಿ ಮರಳಿ ಪಡೆಯುವ ಗುರಿಯನ್ನೂ ಅವರು ಹೊಂದಿದ್ದಾರೆ.

ತೊಡೆಯ ನೋವಿನ ಮಧ್ಯೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 26 ವರ್ಷ ವಯಸ್ಸಿನ ಚೋಪ್ರಾ ಆಗಸ್ಟ್‌ 8ರಂದು ನಡೆದ ಒಲಿಂಪಿಕ್ಸ್‌ ಜಾವೆಲಿನ್‌ ಫೈನಲ್‌ನಲ್ಲಿ 89.45 ಮೀ. ದೂರ ದಾಖಲಿಸಿ ಎರಡನೇ ಸ್ಥಾನ ಪಡೆದಿದ್ದರು. ಮೂರು ವರ್ಷಗಳ ಹಿಂದೆ ಟೋಕಿಯೊ ಕ್ರೀಡೆಗಳಲ್ಲಿ ಅವರು ಚಿನ್ನ ಗೆದ್ದಿದ್ದರು.

ಲುಸಾನ್‌ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳುವುದಾಗಿ ಕಳೆದ ಶನಿವಾರ ಚೋಪ್ರಾ ಪ್ರಕಟಿಸಿದ್ದರು. ವರ್ಷದ ಕೊನೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರಕ್ಕೆ ಬಂದಿದ್ದರು.

2022ರಲ್ಲಿ ಡೈಮಂಡ್‌ ಲೀಗ್ ಚಾಂಪಿಯನ್ ಆಗಿದ್ದ ನೀರಜ್ ಚೋಪ್ರಾ, ಕಳೆದ ವರ್ಷ ಅಮೆರಿಕದಲ್ಲಿ ನಡೆದ ಲೀಗ್‌ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಜೆಕ್‌ ರಿಪಬ್ಲಿಕ್‌ನ ಯಾಕೂಬ್ ವಾಡ್ಲೆಚ್‌ ಚಾಂಪಿಯನ್ ಆಗಿದ್ದರು.

ಜ್ಯೂರಿಕ್‌ನಲ್ಲಿ ಸೆಪ್ಟೆಂಬರ್‌ 5ರಂದು ವರ್ಷದ ಕೊನೆಯ ಡೈಮಂಡ್‌ ಲೀಗ್‌ ಕೂಟ ನಡೆಯಲಿದೆ. ಇದರಲ್ಲಿ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯೂ ಇದೆ. ಪ್ರಸ್ತುತ ಚೋಪ್ರಾ ಅವರು ಏಳು ಪಾಯಿಟ್‌ಗಳೊಡನೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೇ 10ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಅವರು ವಾಡ್ಲೆಚ್‌ ನಂತರ ಎರಡನೇ ಸ್ಥಾನ ಗಳಿಸಿದ್ದರು.

ಒಲಿಂಪಿಕ್ಸ್‌ ಫೈನಲ್ ನಂತರ ಚೋಪ್ರಾ ಅವರು ಸ್ವಿಜರ್ಲೆಂಡ್‌ನಲ್ಲಿ ತರಬೇತಿನಿರತರಾಗಿದ್ದಾರೆ. ‘ಡೈಮಂಡ್‌ ಲೀಗ್‌ಗೆ ಪೂರ್ವಭಾವಿಯಾಗಿ ನಾನು ಸ್ವಿಜರ್ಲೆಂಡ್‌ನಲ್ಲಿ ತರಬೇತಿಗೆ ಬಂದಿದ್ದೇನೆ. ಮುನ್ನೆಚ್ಚರಿಕೆ ವಹಿಸಿದ ಕಾರಣ ನನ್ನ ತೊಡೆಯ ನೋವು ಅದೃಷ್ಟವಶಾತ್‌ ಉಲ್ಬಣಗೊಳ್ಳಲಿಲ್ಲ’ ಎಂದು ಅವರು ಹೇಳಿದರು.

ಪ್ಯಾರಿಸ್‌ನಲ್ಲಿ 92.97 ಮೀ. ದೂರ ದಾಖಲಿಸಿ ಒಲಿಂಪಿಕ್ ದಾಖಲೆ ಸ್ಥಾಪಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಬಿಟ್ಟು, ಒಲಿಂಪಿಕ್ಸ್‌ನಲ್ಲಿ ಮೊದಲ ಆರು ಸ್ಥಾನ ಗಳಿಸಿದವರು ಇಲ್ಲೂ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜುಲೈ 7ರಂದು ನಡೆದ ಪ್ಯಾರಿಸ್ ಡೈಮಂಡ್‌ ಲೀಗ್‌ನಲ್ಲಿ ನದೀಮ್ 84.21 ಮೀ. ಎಸೆತ ದಾಖಲಿಸಿ ನಾಲ್ಕನೇ ಸ್ಥಾನ ಗಳಿಸಿದ್ದರು. ಒಲಿಂಪಿಕ್ಸ್‌ ಬಿಟ್ಟರೆ ನದೀಮ್ ಪಾಲ್ಗೊಂಡ ಏಕೈಕ ಡೈಮಂಡ್‌ ಲೀಗ್ ಕೂಟ ಅದಾಗಿತ್ತು. ಅವರು ಐದು ಪಾಯಿಂಟ್‌ಗಳೊಂದಿಗೆ ಹಾಲಿ ಆರನೇ ಸ್ಥಾನದಲ್ಲಿದ್ದಾರೆ.

ಟೋಕಿಯೊ ಕ್ರೀಡೆಗಳಲ್ಲಿ ಬೆಳ್ಳೀ ಗೆದ್ದಿದ್ದ ವಾಡ್ಲೆಚ್‌, ಪ್ಯಾರಿಸ್‌ನಲ್ಲಿ 88.50 ಮೀ. ಥ್ರೊದೊಡನೆ ನಾಲ್ಕನೇ ಸ್ಥಾನಕ್ಕೆ ಸರಿದಿದ್ದರು. ಇಲ್ಲಿ ಅವರು ಲಯಕ್ಕೆ ಮರಳಿ ಡೈಮಂಡ್‌ ಲೀಗ್ ಕಿರೀಟ ಉಳಿಸಿಕೊಳ್ಳುವ ಗುರಿಯಲ್ಲಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 88.54 ಮೀ. ದಾಖಲಿಸಿ ಕಂಚಿನ ಪದಕ ಗೆದ್ದಿದ್ದ ಎರಡು ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ (ಗ್ರೆನೆಡಾ) ಅವರು ಈ ವರ್ಷ ಸುಧಾರಿತ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ಅವರು ಒಮ್ಮೆ 90 ಮೀ. ಗಡಿ ದಾಟಿದ್ದಾರೆ.

ನದೀಮ್ ಅಮೋಘ ಥ್ರೊದೊಡನೆ ಚಿನ್ನ ಗೆದ್ದಿದ್ದು ಬಿಟ್ಟರೆ, ಚೋಪ್ರಾ ಉಳಿದ ಕಡೆ ಸ್ಥಿರ ಪ್ರದರ್ಶನ ನೀಡಿದ್ದಾರೆ. ಗುರುವಾರ ಡೈಮಂಡ್‌ ಲೀಗ್‌ನಲ್ಲೂ ಅವರು ಪ್ರಶಸ್ತಿಗೆ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಕಳೆದ ವರ್ಷ ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ನಂತರದಿಂದ ಅವರಿಗೆ ತೊಡೆಯ ನೋವು ಬಾಧಿಸುತ್ತಿದೆ. ‘ಈ ವರ್ಷದ ಸ್ಪರ್ಧೆಗಳು ಮುಗಿದ ನಂತರ ಅಂತಿಮವಾಗಿ ಚಿಕಿತ್ಸೆಗೆ ಪಡೆಯಲಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.