ADVERTISEMENT

ಬೆಂಗಳೂರಿನಲ್ಲಿ ನಾಳೆಯಿಂದ ಅಂಧರ ವಿಶ್ವ ಜೂನಿಯರ್, ಮಹಿಳಾ ಚೆಸ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 16:25 IST
Last Updated 27 ಸೆಪ್ಟೆಂಬರ್ 2024, 16:25 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಅಖಿಲ ಭಾರತ ಅಂಧರ ಚೆಸ್‌ ಫೆಡರೇಷನ್ (ಎಐಸಿಎಫ್‌ಬಿ) ಆಶ್ರಯದಲ್ಲಿ ಅಂಧರ ಮತ್ತು ದೃಷ್ಟಿ ದೋಷವುಳ್ಳವರ 12ನೇ ಐಸಿಬಿಎ ವಿಶ್ವ ಜೂನಿಯರ್ ಮತ್ತು ಮಹಿಳಾ ಚೆಸ್‌ ಚಾಂಪಿಯನ್‌ಷಿಪ್‌ ಇದೇ 28 ರಿಂದ ಅಕ್ಟೋಬರ್ 6ರವರೆಗೆ ನಗರದ ರೆಸಿಡೆನ್ಸಿ ರಸ್ತೆಯ ಚಾನ್ಸರಿ ಪೆವಿಲಿಯನ್‌ನಲ್ಲಿ ನಡೆಯಲಿದೆ.

ಮೊದಲ ಬಾರಿ ಈ ಚಾಂಪಿಯನ್‌ಷಿಪ್‌ ಏಷ್ಯಾದಲ್ಲಿ ನಡೆಯುತ್ತಿದೆ. ಜೂನಿಯರ್ ಮತ್ತು ಮಹಿಳಾ ವಿಭಾಗದಲ್ಲಿ ಒಟ್ಟು 32 ಮಂದಿ ಭಾಗವಹಿಸಲಿದ್ದಾರೆ ಎಂದು ಟೂರ್ನಿ ಚೀಫ್ ಆರ್ಬಿಟರ್ ಆಗಿರುವ ಮಂಜುನಾಥ್ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು. ಎಂಟು ಸುತ್ತುಗಳು ಇರಲಿದ್ದು, ಅಕ್ಟೋಬರ್ 1ರಂದು ವಿಶ್ರಾಂತಿ ದಿನವಾಗಿದೆ.

ಜೂನಿಯರ್ ವಿಭಾಗದಲ್ಲಿ ಭಾರತದ ಏಳು ಮಂದಿ ಸೇರಿದಂತೆ ಒಟ್ಟು 12 ಮಂದಿ ಭಾಗವಹಿಸಲಿದ್ದಾರೆ. ಪೋಲೆಂಡ್‌ನ ರೇಸಿಸ್‌ ಮಿಚಾಲ್ (ರೇಟಿಂಗ್: 2124) ಅಗ್ರ ಶ್ರೇಯಾಂಕ ಪಡೆದಿದ್ದಾರೆ. ರಾಹುಲ್ ವಘೇಲಾ (1701), ಓಂಕಾರ್ ಸಮೀರ್‌ ತಲವಾಲಕರ್, ಅಶ್ವಿನ್ ರಾಜೇಶ್‌, ಸ್ಯಾಮ್ ಪೇನಿಯಲ್, ತನಿಶ್‌ ವಾಘ್ಮಾರೆ, ರಾಹುಲ್ ಸಹಾನಿ, ಜಾನ್ ಹ್ಯಾರಿಸ್‌ ಸುಜಿನ್ ಕಣದಲ್ಲಿರುವ ಭಾರತದ ಆಟಗಾರರು.

ADVERTISEMENT

ಮಹಿಳಾ ವಿಭಾಗದಲ್ಲಿ 20 ಮಂದಿ ಕಣದಲ್ಲಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್‌ ಪದಕ ವಿಜೇತರಾದ ಭಾರತದ ಮೇಘಾ ಚಕ್ರವರ್ತಿ, ತೀಜನ್ ಗವಾರ್ ಈ ವಿಭಾಗದಲ್ಲಿ ಪೈಪೋಟಿಯಲ್ಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಭಾರತ ಹಾಕಿ ತಂಡದ ಮಾಜಿ ಆಟಗಾರ ಆಶೀಷ್‌ ಬಲ್ಲಾಳ್, ಗ್ರ್ಯಾಂಡ್‌ಮಾಸ್ಟರ್‌ ಪ್ರಣವ್ ಆನಂದ್‌ ಮತ್ತು ಕರ್ನಾಟಕ ರಾಜ್ಯ ಚೆಸ್‌ ಸಂಸ್ಥೆಯ ಕಾರ್ಯದರ್ಶಿ ಅರವಿಂದ ಶಾಸ್ತ್ರಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.