ADVERTISEMENT

ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಅಕ್ಷಯ ಸಾಥಿ, ಸಿದ್ಧಾಂತ್ ಮುನ್ನಡೆ

ಫಿಡೆ ರೇಟೆಡ್‌ 17 ವರ್ಷದೊಳಗಿನವರ ಬಾಲಕಿಯರ ರಾಜ್ಯ ಚೆಸ್ ಟೂರ್ನಿ: ಆದ್ಯಾ ಜಯಭೇರಿ

​ಪ್ರಜಾವಾಣಿ ವಾರ್ತೆ
Published 18 ಮೇ 2024, 4:20 IST
Last Updated 18 ಮೇ 2024, 4:20 IST
ಅಕ್ಷಯ ಸಾಥಿ
ಅಕ್ಷಯ ಸಾಥಿ   

ಮಂಗಳೂರು: ಅಗ್ರ ಶ್ರೇಯಾಂಕದ ಆಟಗಾರರಾದ ಅಕ್ಷಯಾ ಸಾಥಿ ಮತ್ತು ಸಿದ್ಧಾಂತ್ ಪೂಂಜಾ ಅವರು ಇಲ್ಲಿ ಶುಕ್ರವಾರ ಆರಂಭಗೊಂಡ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕಿಯರ ಮತ್ತು 17 ವರ್ಷದೊಳಗಿನವರ ಮುಕ್ತ ವಿಭಾಗದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಮಿನಿ ಟೌನ್‌ ಹಾಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನ ಎರಡು ಸುತ್ತುಗಳ ಮುಕ್ತಾಯಕ್ಕೆ ಇವರಿಬ್ಬರೂ ತಲಾ ಎರಡು ಪಾಯಿಂಟ್ ಗಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಕ್ಷಯಾ ಸಾಥಿ ಎರಡನೇ ಸುತ್ತಿನಲ್ಲಿ ಪಾವನಿ ಆರ್‌ ವಿರುದ್ಧ ಜಯ ಗಳಿಸಿದರು. ಅಕ್ಷಯ 1809 ರೇಟಿಂಗ್ ಪಾಯಿಂಟ್ ಹೊಂದಿದ್ದರೆ, ಪಾವನಿ 1421 ರೇಟಿಂಗ್‌ನಲ್ಲಿದ್ದಾರೆ.  

ಬೆಂಗಳೂರಿನ ದೃಷ್ಟಿ ಘೋಷ್‌, ಧನುಷ್ಕಾ, ದಕ್ಷಿಣ ಕನ್ನಡದ ಶ್ರದ್ಧಾ ರೈ, ಆರುಷಿ, ಶ್ರೀಯಾನಾ ಮಲ್ಯ, ಶ್ರೀಖಾ ಮತ್ತು ಆದ್ಯಾ ಶೆಟ್ಟಿ ಅವರೂ ಎರಡು ಪಾಯಿಂಟ್‌ಗಳನ್ನು ಕಲೆ ಹಾಕಿ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.

ADVERTISEMENT

ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಸಿದ್ಧಾಂತ್ ಪೂಂಜ ಜೊತೆ ದಕ್ಷಿಣ ಕನ್ನಡದ ಸುಶಾಂತ್ ವಿ.ಶೆಟ್ಟಿ, ಬೆಂಗಳೂರಿನ ನಾಗಸಾಯಿ ಸಾರ್ಥಕ್ ಸೇರಿದಂತೆ 35 ಆಟಗಾರರು ಅಗ್ರ ಸ್ಥಾನದಲ್ಲಿದ್ದಾರೆ. 1899 ರೇಟಿಂಗ್ ಪಾಯಿಂಟ್ ಹೊಂದಿರುವ, ಎರಡನೇ ಶ್ರೇಯಾಂಕದ ಮೇಂಧಾಂಶ್ ರಾಠಿ ವಿರುದ್ಧ ಅಮೋಘ ಜಯ ಸಾಧಿಸಿ ದಕ್ಷಿಣ ಕನ್ನಡದ ವಿಹಾನ್ ಆದರ್ಶ್ ಲೋಬೊ ಗಮನ ಸೆಳೆದರು. ವಿಹಾನ್‌ 1488 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.    

‘ಆದ್ಯಾ’ ಹೆಸರಿನವರ ಮ್ಯಾಜಿಕ್‌

ಆದ್ಯಾ ಹೆಸರಿನ ದಕ್ಷಿಣ ಕನ್ನಡದ ಇಬ್ಬರು ಆಟಗಾರ್ತಿಯರು 17 ವರ್ಷದೊಳಗಿನ ಬಾಲಕಿಯರ ವಿಭಾಗದ ಎರಡನೇ ಸುತ್ತಿನಲ್ಲಿ ವಿಶಿಷ್ಟ ಸಾಧನೆ ಮಾಡಿದರು. 

ರೇಟಿಂಗ್ ಹೊಂದಿಲ್ಲದ ಆದ್ಯಾ ಶೆಟ್ಟಿ ಅವರು ಬೆಂಗಳೂರಿನ ಕೃಪಾ ಎಸ್.ಉಕ್ಕಲಿ (ರೇಟಿಂಗ್‌: 1624) ವಿರುದ್ಧ ಜಯ ಗಳಿಸಿದರು. ರೇಟಿಂಗ್ ರಹಿತ ಆದ್ಯಾ ಕೃಷ್ಣವಜ್ಜಲ 1570 ರೇಟಿಂಗ್ ಹೊಂದಿರುವ ಕ್ರಿಷಲ್ ವಯೊಲಾ ವಾಸ್‌ ಜೊತೆ ಡ್ರಾ ಸಾಧಿಸಿದರು. ರೇಟಿಂಗ್ ಇಲ್ಲದ ಮತ್ತೊಬ್ಬರು ದಕ್ಷಿಣ ಕನ್ನಡದ ಆದ್ಯಾ ಎ.ಎಚ್‌ ಅವರು ಶ್ರೀಖಾ ಎಸ್‌.ಹೆಗಡೆ (ರೇಟಿಂಗ್‌ 1507) ಎದುರು ಸೋತರು.

17 ವರ್ಷದೊಳಗಿನ ಬಾಲಕಿಯರ 2ನೇ ಸುತ್ತಿನ ಫಲಿತಾಂಶಗಳು: ಪಾವನಿ ಆರ್‌.ವಿರುದ್ಧ ಅಕ್ಷಯ ಸಾಥಿಗೆ ಜಯ; ರಿಸೆಲಿ ಅಲಿಡಾ ಡಿಸೋಜಾ ವಿರುದ್ಧ ದೃಷ್ಟಿ ಘೋಷ್‌ಗೆ, ಮೃಣಾಲಿನಿ ಎಂ.ಆರ್‌. ವಿರುದ್ಧ ಆರುಷಿ ಹೆಲೆನ್ ಡಿಸಿಲ್ವಾಗೆ, ಅಮೂಲ್ಯಾ ಎನ್‌.ವಿ ವಿರುದ್ಧ ಶ್ರೀಯಾನಾ ಮಲ್ಯಗೆ, ಕೃಪಾ ಉಕ್ಕಲಿ ವಿರುದ್ಧ ಆದ್ಯ ಎ.ಶೆಟ್ಟಿಗೆ, ಅಪೇಕ್ಷಾ ವಿರುದ್ಧ ಧನುಷ್ಕಾಗೆ ಗೆಲುವು; ಚೈತನ್ಯಾ ನಾಯಕ್ ವಿರುದ್ಧ ಶ್ರೇಯಾ ರಾಜೇಶ್‌ಗೆ, ಆದ್ಯಾ ಎ.ಎಚ್‌ ವಿರುದ್ಧ ಶ್ರೀಖಾ ಹೆಗಡೆಗೆ, ಮಹತಿ ರಾವ್ ವಿರುದ್ಧ ಮಾಯಾ ಅಮೀನ್‌ಗೆ ಜಯ. ಆದ್ಯಾ ಕೃಷ್ಣವಜ್ಜಲ ಮತ್ತು ಕ್ರಿಷಲ್ ವಯೊಲಾ ವಾಸ್‌ ಪಂದ್ಯ ಡ್ರಾ. 

ಸಿದ್ಧಾಂತ್ ಪೂಂಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.