ADVERTISEMENT

ಭಾರತದ ಸ್ಪರ್ಧಿಗಳಿಗೆ ಕಠಿಣ ಸವಾಲು

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಡ್ರಾ ಪ್ರಕಟ

ಪಿಟಿಐ
Published 13 ಫೆಬ್ರುವರಿ 2019, 19:34 IST
Last Updated 13 ಫೆಬ್ರುವರಿ 2019, 19:34 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಬರ್ಮಿಂಗ್‌ಹ್ಯಾಮ್‌ : ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಡ್ರಾ ಬುಧವಾರ ಪ್ರಕಟವಾಗಿದ್ದು, ಭಾರತದ ಸ್ಪರ್ಧಿಗಳಿಗೆ ಆರಂಭಿಕ ಸುತ್ತುಗಳಲ್ಲೇ ಕಠಿಣ ಸವಾಲು ಎದುರಾಗಿದೆ.

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಪಿ.ವಿ.ಸಿಂಧು, ಮೊದಲ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಸಂಗ್‌ ಜಿ ಹ್ಯೂನ್‌ ವಿರುದ್ಧ ಸೆಣಸಲಿದ್ದಾರೆ.

ಹೋದ ವರ್ಷ ನಡೆದಿದ್ದ ಚಾಂ‍ಪಿಯನ್‌ಷಿಪ್‌ನಲ್ಲಿ ಸಿಂಧು, ಸೆಮಿಫೈನಲ್‌ ಪ್ರವೇಶಿಸಿದ್ದರು. ಹೋದ ವರ್ಷ ನಡೆದಿದ್ದ ಹಾಂಕಾಂಗ್‌ ಓಪನ್‌ನಲ್ಲಿ ಹ್ಯೂನ್‌ ಎದುರುಭಾರತದ ಆಟಗಾರ್ತಿ ಸೋತಿದ್ದರು.

ADVERTISEMENT

ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಸೈನಾ ನೆಹ್ವಾಲ್‌ ಅವರು ಆರಂಭಿಕ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್‌ಮೌರ್‌ ಎದುರು ಹೋರಾಡಲಿದ್ದಾರೆ. ಸೈನಾ ಅವರು 2015ರ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು.

ಮಾರ್ಚ್‌ ಆರರಿಂದ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಸೈನಾ ಅವರು ಕ್ವಾರ್ಟರ್‌ ಫೈನಲ್‌ ‍ಪ್ರವೇಶಿಸಿದರೆ, ಆಗ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ತೈ ಜು ಯಿಂಗ್‌ ಎದುರು ಆಡಬೇಕಾಗಬಹುದು. ಚೀನಾ ತೈಪೆಯ ಯಿಂಗ್‌ ಎದುರು ಈ ಹಿಂದೆ ಆಡಿರುವ 11 ಪಂದ್ಯಗಳಲ್ಲೂ ಭಾರತದ ಆಟಗಾರ್ತಿ ಪರಾಭವಗೊಂಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಕಿದಂಬಿ ಶ್ರೀಕಾಂತ್‌, ಫ್ರಾನ್ಸ್‌ನ ಬ್ರೈಸ್‌ ಲೆವರ್‌ಡೆಜ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಈ ಬಾರಿಯ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದ ಸಮೀರ್‌ ವರ್ಮಾಗೆ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆಟಗಾರ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿಕ್ಟರ್‌ ಆ್ಯಕ್ಸಲ್‌ಸನ್‌ ಸವಾಲು ಎದುರಾಗಲಿದೆ. ಬಿ.ಸಾಯಿ ಪ್ರಣೀತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ.

ಮಹಿಳೆಯರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ, ಜಪಾನ್‌ನ ಶಿಹೊ ಟನಾಕ ಮತ್ತು ಕೊಹಾರು ಯೊನೆಮೊಟೊ ಎದುರು ಸೆಣಸಲಿದ್ದಾರೆ.

ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್‌.ರಾಮ್‌ ಅವರಿಗೆ ರಷ್ಯಾದ ಏಕ್ತರಿನಾ ಬೊಲೊಟೊವಾ ಮತ್ತು ಅಲಿನಾ ಡ್ಯಾವೆಲೆಟೋವಾ ಸವಾಲು ಎದುರಾಗಲಿದೆ.

ಪುರುಷರ ಡಬಲ್ಸ್‌ನಲ್ಲಿ ಕಣದಲ್ಲಿರುವ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಅವರು ಮೊದಲ ಸುತ್ತಿನಲ್ಲಿ ಚೀನಾದ ಒವು ಕ್ಸುವಾನ್ಯಿ ಮತ್ತು ರೆನ್‌ ಕ್ಸಿಯಾಂಗ್ಯು ಎದುರು ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.