ಯಾಂಕ್ಟನ್, ಅಮೆರಿಕ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಸ ಪ್ರದರ್ಶನ ನೀಡಿದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಅವರು ವಿಶ್ವಕಪ್ ಆರ್ಚರಿ ಫೈನಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಟೂರ್ನಿ ಗುರುವಾರ ಮತ್ತು ಶುಕ್ರವಾರ ನಡೆಯಲಿದೆ.
ಯಾಂಕ್ಟನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್ ಕೆಲವೇ ದಿನಗಳ ಹಿಂದೆ ಮುಗಿದಿತ್ತು. ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗದ ಕಾರಣ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ದೀಪಿಕಾ ಮತ್ತು ಅತನು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಭಾರತ ತಂಡಕ್ಕೆ ಆಯ್ಕೆಯಾಗದ್ದರಿಂದ ಬೇಸರಗೊಂಡಿದ್ದ ಅವರಿಬ್ಬರು ಕೋಲ್ಕತ್ತದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಸ್ಪರ್ಧಿಸಿದ್ದರು.
ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ದೀಪಿಕಾ ಕುಮಾರಿ ಈಗಾಗಲೇ ಏಳು ಬಾರಿ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದಾರೆ. ಒಟ್ಟು ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ. 23 ವರ್ಷದ ರಷ್ಯಾ ಆರ್ಚರ್ ಸ್ವೆಟ್ಲಾನಾ ಗೊಂಬೆವಾ ಎದುರು ಅವರು ಮೊದಲ ಪಂದ್ಯ ಆಡಲಿದ್ದಾರೆ.
ಅತನು ದಾಸ್ ಅವರಿಗೆ ಇದು ಮೊದಲ ವಿಶ್ವಕಪ್ ಫೈನಲ್ ಆಗಿದ್ದು ಜರ್ಮನಿಯ ಮ್ಯಾಕ್ಸಿಮಿಲಿಯನ್ ವೆಕ್‌ಮುಲ್ಲರ್ ಎದುರು ಮೊದಲ ಸುತ್ತಿನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಕಾಂಪೌಂಡ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಅಮೆರಿಕದ ಬ್ರೇಡನ್ ಗೆಲೆಂಥೀನ್ ವಿರುದ್ಧ ಆಡುವರು. ವರ್ಮಾ ಈಗಾಗಲೇ ಮೂರು ಪದಕ ಗೆದ್ದಿದ್ದಾರೆ. 2015ರಲ್ಲಿ ಬೆಳ್ಳಿ ಮತ್ತು 2018ರಲ್ಲಿ ಕಂಚು ಗೆದ್ದಿರುವ ಅವರು 2018ರ ಮಿಶ್ರ ವಿಭಾಗದಲ್ಲಿ ಜ್ಯೋತಿ ಸುರೇಖಾ ಜೊತೆಗೂಡಿ ಬೆಳ್ಳಿ ಪದಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.