ಮಂಗಳೂರು: ತಮಿಳುನಾಡಿನ ಸಂಜಯ್ ಕುಮಾರ್ ಎಸ್, ಶ್ರೀಕಾಂತ್, ಸಂಜಯ್ ಸೆಲ್ವಮಣಿ ಮತ್ತು ಅಜೀಶ್ ಅಲಿ ಇಲ್ಲಿನ ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಪುರುಷರ ಮುಕ್ತ ವಿಭಾಗದ ಪ್ರಶಸ್ತಿಗಾಗಿ ಭಾನುವಾರ ಸೆಣಸಲಿದ್ದಾರೆ.
ನಗರದ ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಎರಡನೇ ದಿನವೂ ತಮಿಳುನಾಡು ಸರ್ಫರ್‌ಗಳು ಪಾರಮ್ಯ ಮೆರೆದರು. ಮಂತ್ರ ಸರ್ಫ್ ಕ್ಲಬ್‌ನ ರಾಜು ಪೂಜಾರ್, ಪ್ರದೀಪ್ ಪೂಜಾರ್ ಮತ್ತು ಆಕಾಶ್ ಪೂಜಾರ್ ಬಾಲಕರ ವಿಭಾಗದ ಫೈನಲ್‌ನಲ್ಲಿ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಗೋವಾದ ಸುಗರ್ ಬನಾರಸಿ, ತಮಿಳುನಾಡಿನ ನೇಹಾ ವೈದ್ ಮತ್ತು ಮರೀಲಿ ವುಂಡೆರಿಂಕ್ ಫೈನಲ್ ಪ್ರವೇಶಿಸಿದರು.
ಪುರುಷರ ವಿಭಾಗದಲ್ಲಿ ಮೊದಲ ದಿನ ಅತ್ಯಧಿಕ ಸ್ಕೋರ್ ಗಳಿಸಿದ ಕ್ರೀಡಾಪಟು ಎನಿಸಿಕೊಂಡಿದ್ದ ತಮಿಳುನಾಡು ಸರ್ಫರ್, ಅಗ್ರ ಶ್ರೇಯಾಂಕದ ಶಿವರಾಜ್ ಬಾಬು ಎರಡನೇ ದಿನವೂ ಗರಿಷ್ಠ ಸ್ಕೋರ್ ಗಳಿಸಿ ಗಮನ ಸೆಳೆದರು. ಬೆಳಿಗ್ಗೆ ನಡೆದ ಪುರುಷರ ಮುಕ್ತ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ 15.17 ಸ್ಕೋರ್‌ನೊಂದಿಗೆ ಅವರು ಈ ಸಾಧನೆ ಮಾಡಿದರು. ಆದರೆ ಸೆಮಿಫೈನಲ್‌ನಲ್ಲಿ ಅವರಿಗೆ ನಿರಾಸೆ ಕಾಡಿತು. ಸೆಮಿಫೈನಲ್‌ನ ಎರಡನೇ ಹೀಟ್ಸ್‌ನಲ್ಲಿ ಸ್ಪರ್ಧಿಸಿದ ಅವರಿಗೆ 8.60 ಸ್ಕೋರು ಗಳಿಸಲಷ್ಟೇ ಸಾಧ್ಯವಾಯಿತು. 9.90 ಸ್ಕೋರುಗಳೊಂದಿಗೆ ಶ್ರೀಕಾಂತ್ ಡಿ ಮತ್ತು 9.70 ಸ್ಕೋರು ಗಳಿಸಿದ ಅಜೀಶ್ ಅಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಒಂದನೇ ಹೀಟ್ಸ್‌ನಲ್ಲಿ ಸ್ಪರ್ಧಿಸಿದ್ದ ಸಂಜಯ್ ಕುಮಾರ್ ಎಸ್ ಮತ್ತು ಸಂಜಯ್ ಸೆಲ್ವಮಣಿ ಫೈನಲ್‌ಗೆ ಪ್ರವೇಶಿಸಿದರು.
ಕಳೆದ ಬಾರಿ ಮಹಿಳೆಯರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ತಮಿಳುನಾಡಿನ ಕಮಲಿ ಮೂರ್ತಿ ಮೋಹಕ ಪ್ರದರ್ಶನದೊಂದಿಗೆ ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದರು. ಮೊದಲ ಸೆಮಿಫೈನಲ್ ಹೀಟ್‌ನಲ್ಲಿ 11.23 ಸ್ಕೋರು ಕಲೆ ಹಾಕಿದ ಅವರೊಂದಿಗೆ ಗೋವಾದ ಸುಗರ್ ಬನಾರಸಿ ಕೂಡ ಫೈನಲ್ ತಲುಪಿದರು. ಭರವಸೆ ಮೂಡಿಸಿದ್ದ ಸ್ಥಳೀಯ ಪ್ರತಿಭೆ ಸಿಂಚನಾ ಗೌಡ ಅವರಿಗೆ 4.97 ಸ್ಕೋರು ಗಳಿಸಲಷ್ಟೇ ಸಾಧ್ಯವಾಯಿತು. ಎರಡನೇ ಸೆಮಿಫೈನಲ್ ಹೀಟ್‌ನಲ್ಲಿದ್ದ ತಮಿಳುನಾಡಿನ ನೇಹಾ ವೈದ್ ಮತ್ತು ಮರೀಲಿ ವುಂಡೆರಿಕ್ ಅಂತಿಮ ಘಟ್ಟಕ್ಕೆ ಅರ್ಹತೆ ಪಡೆದರು.
ಸಹೋದರರ ಕಮಾಲ್
ಮಂತ್ರ ಸರ್ಫ್ ಕ್ಲಬ್ ಪ್ರತಿನಿಧಿಸಿದ ಬಾಗಲಕೋಟೆ ಜಿಲ್ಲೆ ಬಾದಾಮಿಯ ಬೆಳವಲಕೊಪ್ಪದ ಸಹೋದರರಾದ ರಾಜು ಪೂಜಾರ್, ಪ್ರದೀಪ್ ಪೂಜಾರ್ ಮತ್ತು ಆಕಾಶ್ ಪೂಜಾರ್ ಬಾಲಕರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಬಾಲಕರ ವಿಭಾಗದ ರಾಷ್ಟ್ರೀಯ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಹರೀಶ್ ಪಿ ಅವರ ಜೊತೆ ತಯಿನ್ ಅರುಣ್, ಪ್ರಹ್ಲಾದ್ ಶ್ರೀರಾಮ್, ಯೋಗೇಶ್ ಎ ಮತ್ತು ಸೋಮ್ ಸೇಥಿ ಕೂಡ ಸೆಮಿಫೈನಲ್‌ಗೆ ಅರ್ಹತೆ ಪಡೆದರು.
ಆಕಾಶ್ ಪೂಜಾರ್ ಕ್ವಾರ್ಟರ್ ಫೈನಲ್ ಒಂದನೇ ಹೀಟ್‌ನಲ್ಲಿ ತಮಿಳುನಾಡಿನ ಲೋಕೇಶ್‌ಗೆ ಪ್ರಬಲ ಪೈಪೋಟಿ ನೀಡಿ ಎರಡನೇ ಸ್ಥಾನ ಗಳಿಸುವುದರೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು. ಈ ಹೀಟ್‌ನಲ್ಲಿ ತಯಿನ್ ಅರುಣ್ ಮೊದಲಿಗರಾದರು. ರಾಜು ಪೂಜಾರ್ ಮೂರನೇ ಹೀಟ್‌ನಲ್ಲಿ ಅಗ್ರ ಸ್ಥಾನ ಗಳಿಸಿದರೆ ಪ್ರದೀಪ್ ಪೂಜಾರ್ ನಾಲ್ಕನೇ ಹೀಟ್‌ನಲ್ಲಿ ಎರಡನೇ ಸ್ಥಾನ ಗಳಿಸಿ ಸೆಮಿಫೈನಲ್‌ನಲ್ಲಿ ಸ್ಥಾನ ಗಳಿಸಿದರು.
ಎರಡನೇ ದಿನದ ಪ್ರಮುಖ ಫಲಿತಾಂಶಗಳು: ಪುರುಷರ ಮುಕ್ತ ವಿಭಾಗದ 1ನೇ ಸೆಮಿಫೈನಲ್ ಹೀಟ್: ಸಂಜಯ್ ಕುಮಾರ್ ಎಸ್–1 (ತಮಿಳುನಾಡು; ಸ್ಕೋರ್ 11.17), ಸಂಜಯ್ ಸೆಲ್ವಮಣಿ–2 (ತಮಿಳುನಾಡು: 11.03), ಮಣಿವಣ್ಣನ್ ಟಿ–3 (ತಮಿಳುನಾಡು: 8.87); 2ನೇ ಹೀಟ್: ಶ್ರೀಕಾಂತ್ ಡಿ–1 (ತಮಿಳುನಾಡು; 9.90), ಅಜೀಶ್ ಅಲಿ–2 (ತಮಿಳುನಾಡು: 9.70), ಶಿವರಾಜ್ ಬಾಬು–3 (8.60); ಮಹಿಳೆಯರ ಮುಕ್ತ ವಿಭಾಗ, 1ನೇ ಸೆಮಿಫೈನಲ್ ಹೀಟ್: ಕಮಲಿ ಮೂರ್ತಿ–1 (ತಮಿಳುನಾಡು: 11.23), ಸುಗರ್ ಬನಾರಸಿ–2 (ಗೋವಾ:8.93), ಸಿಂಚನಾ ಗೌಡ–3 (ಕರ್ನಾಟಕ: 4.97); 2ನೇ ಹೀಟ್: ನೇಹಾ ವೈದ್–1 (2.20), ಮರೀಲಿ ವುಂಡೆರಿಕ್–2 (ತಿಮಿಳುನಾಡು: 1.87), ಸಂಧ್ಯಾ ಅರುಣ್–3 (1.77); ಬಾಲಕರ 1ನೇ ಕ್ವಾರ್ಟರ್ ಫೈನಲ್ ಹೀಟ್: ತಯಿನ್ ಅರುಣ್–1 (ತಮಿಳುನಾಡು:7.60), ಆಕಾಶ್ ಪೂಜಾರ್–2 (ಕರ್ನಾಟಕ 5.80); 2ನೇ ಹೀಟ್: ಹರೀಶ್–1 (10.17), ಯೋಗೇಶ್ ಎ–2 (4.40); 3ನೇ ಹೀಟ್: ರಾಜು ಪೂಜಾರ್–1 (ಕರ್ನಾಟಕ: 7.33), ಸೋಮ್ ಸೇತಿ–2 (4.40), 4ನೇ ಹೀಟ್: ಪ್ರಹ್ಲಾದ್ ಶ್ರೀರಾಮ್–1 (ತಮಿಳುನಾಡು: 7.17), ಪ್ರದೀಪ್ ಪೂಜಾರ್–2 (ಕರ್ನಾಟಕ: 6.47).
ಸೆಮಿಫೈನಲ್ ಹೀಟ್ಸ್‌ನಲ್ಲಿ ಪರಿಸ್ಥಿತಿ ಪೂರಕವಾಗಿತ್ತು. ಗಾಳಿಯ ರಭಸ ಸ್ವಲ್ಪ ಹೆಚ್ಚು ಇದ್ದುದರಿಂದ ಆಗಾಗ ಸವಾಲು ಎದುರಾಗುತ್ತಿತ್ತು. ಫೈನಲ್‌ನಲ್ಲಿ ಭಾರಿ ಸ್ಪರ್ಧೆಯ ನಿರೀಕ್ಷೆ ಇದೆ. ಸಹಜ ಪ್ರದರ್ಶನ ನೀಡಿ ಪ್ರಶಸ್ತಿಯತ್ತ ಸಾಗುವ ವಿಶ್ವಾಸವಿದೆ.–ಸಂಜಯ್ ಕುಮಾರ್, ಪುರುಷರ ವಿಭಾಗದ ಫೈನಲಿಸ್ಟ್
ಅಲೆಗಳು ಆಗಾಗ ಒಡೆಯುತ್ತಿದ್ದ ಕಾರಣ ಸ್ಥಿರತೆ ಕಾಪಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಆದರೆ ಭಾನುವಾರದ ಫೈನಲ್ ಬಗ್ಗೆ ಯಾವ ಆತಂಕವೂ ಇಲ್ಲ. ಪ್ರಶಸ್ತಿಗಾಗಿ ಪ್ರಬಲ ಪೈಪೋಟಿ ಇದೆ. ಆದರೂ ಶಾಂತಚಿತ್ತಳಾಗಿರುವೆ.–ಕಮಲಿ ಮೂರ್ತಿ, ಮಹಿಳೆಯರ ವಿಭಾಗದ ಫೈನಲಿಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.