ಪ್ಯಾರಿಸ್: ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಮಂಗಳವಾರ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನಲ್ಲಿ ನೇರ ಗೇಮ್‌ಗಳ ಮೂಲಕ ಇಂಡೊನೇಷ್ಯಾದ ಮುಹಮ್ಮದ್ ರಿಯಾನ್ ಆರ್ಡಿಯಾಂಟೊ ಮತ್ತು ಫಜರ್ ಅಲ್ಫಿಯಾನ್ ಅವರನ್ನು ಮಣಿಸಿ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಏರಿತು.
ಮೂರನೇ ಶ್ರೇಯಾಂಕದ ಭಾರತದ ಜೋಡಿಯು ಕೇವಲ 38 ನಿಮಿಷದಲ್ಲಿ 21-13, 21-13ರಿಂದ ವಿಶ್ವದ ಏಳನೇ ಕ್ರಮಾಂಕದ ಆಟಗಾರರನ್ನು ಹಿಮ್ಮೆಟ್ಟಿಸಿ, ಅಜೇಯವಾಗಿ ಎಂಟರ ಘಟ್ಟ ಪ್ರವೇಶಿಸಿತು.
ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತದ ತರುಣರು ಸಂಪೂರ್ಣ ಪ್ರಾಬಲ್ಯ ಮೆರೆದರು. ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಇಂಡೊನೇಷ್ಯಾ ಜೋಡಿಯೂ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಿತು. ಮುಂದಿನ ಸುತ್ತಿನ ಪಂದ್ಯಗಳ ಡ್ರಾ ಬುಧವಾರ ನಡೆಯಲಿದೆ.
ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಸಾತ್ವಿಕ್– ಚಿರಾಗ್ ಜೋಡಿಯು ಈ ಹಿಂದೆಯೇ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಫ್ರಾನ್ಸ್‌ನ ಲೂಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್ ಅವರನ್ನು ಮಣಿಸಿ ಶುಭಾರಂಭ ಮಾಡಿತ್ತು. ಸೋಮವಾರ ಎರಡನೇ ಪಂದ್ಯದಲ್ಲಿ ಜರ್ಮನಿಯ ಮಾರ್ಕ್ ಲ್ಯಾಮ್ಸ್‌ಫಸ್ ಮತ್ತು ಮರ್ವಿನ್ ಸಿಡೆಲ್ ಅವರನ್ನು ಎದುರಿಸಬೇಕಿತ್ತು. ಆದರೆ, ಮಾರ್ಕ್ ಲ್ಯಾಮ್ಸ್‌ಫಸ್‌ಗೆ ಗಾಯವಾದ ಕಾರಣ ಪಂದ್ಯ ರದ್ದುಗೊಳಿಸಲಾಗಿತ್ತು.
ಜರ್ಮನಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಗುಂಪನ್ನು ಮೂರು ತಂಡಗಳಿಗೆ ಸೀಮಿತಗೊಳಿಸಲಾಯಿತು. ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿರುವ ಆತಿಥೇಯ ಫ್ರಾನ್ಸ್ ತಂಡ ಮೂರನೇ ಸ್ಥಾನದೊಂದಿಗೆ ಸ್ಪರ್ಧೆಯಿಂದ ಹೊರಬಿತ್ತು.
ನಾಲ್ಕು ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಮಾತ್ರ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಅಶ್ವಿನಿ– ತನಿಶಾ ಜೋಡಿಗೆ ಹ್ಯಾಟ್ರಿಕ್ ಸೋಲು: ಭಾರತದ ಮಹಿಳೆಯರ ಡಬಲ್ಸ್ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರು ‘ಸಿ’ ಗುಂಪಿನಲ್ಲಿ ಸತತ ಮೂರನೇ ಸೋಲು ಅನುಭವಿಸಿದರು. ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದು ಹೊರಬಿದ್ದರು.
ತನಿಶಾ ಮತ್ತು ಅಶ್ವಿನಿ ಮಂಗಳವಾರ ಕೊನೆಯ ಪಂದ್ಯದಲ್ಲಿ 15-21, 10-21 ನೇರ ಗೇಮ್‌ಗಳಿಂದ ಆಸ್ಟ್ರೇಲಿಯಾದ ಸೆಟ್ಯಾನಾ ಮಪಾಸಾ ಮತ್ತು ಏಂಜೆಲಾ ಯು ವಿರುದ್ಧ ಸೋಲು ಅನುಭವಿಸಿದರು.
ಕರ್ನಾಟಕದ ಅಶ್ವಿನಿ ಅವರಿಗೆ ಇದು ಮೂರನೇ ಒಲಿಂಪಿಕ್ಸ್ ಆಗಿತ್ತು. ಈ ಹಿಂದೆ ಜ್ವಾಲಾ ಗುಟ್ಟಾ ಅವರೊಂದಿಗೆ ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದರು. ಈ ಬಾರಿಯೂ ಪದಕದ ಕನಸು ನನಸಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.