ಇಸ್ತಾಂಬುಲ್ (ಪಿಟಿಐ): ಭಾರತದ ಕುಸ್ತಿಪಟು ದೀಪಕ್ ಪೂನಿಯಾ ಇಲ್ಲಿ ನಡೆಯುತ್ತಿರುವ ವಿಶ್ವ ಒಲಿಂಪಿಕ್ ಗೇಮ್ಸ್ ಕ್ವಾಲಿಫೈಯರ್‌ನ ಎರಡನೇ ದಿನ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಆದರೆ, ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಪುರುಷರ 57 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಮುನ್ನಡೆದರು.
ಭಾರತದ ಗ್ರೀಕೊ ರೋಮನ್ ಸ್ಪರ್ಧಿಗಳು ಇಲ್ಲಿ ನಿರಾಸೆ ಮೂಡಿಸಿದ್ದರು. ಪುರುಷರ ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಗಳು ಶನಿವಾರ ಆರಂಭವಾದವು. ಸುಜಿತ್ ಕಲ್ಕಲ್ ಮತ್ತು ಜೈದೀಪ್ ಅಹ್ಲಾವತ್ ತಮ್ಮ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಯಾವುದೇ ಪುರುಷ ಕುಸ್ತಿಪಟುಗಳಿಗೆ ಇನ್ನೂ ಅರ್ಹತೆ ದೊರಕಿಲ್ಲ. ಪ್ಯಾರಿಸ್ ಟಿಕೆಟ್ ಪಡೆಯಲು ಇದು ಕೊನೆಯ ಅವಕಾಶವಾಗಿದೆ.
23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಮತ್ತು ಹಿರಿಯ ಏಷ್ಯನ್ ಚಾಂಪಿಯನ್‌ಷಿಪ್ ಪ್ರಶಸ್ತಿ ವಿಜೇತ ಅಮನ್ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. 20 ವರ್ಷದ ಅವರು ಉಕ್ರೇನ್‌ನ ಆ್ಯಂಡ್ರಿ ಯಾಟ್ಸೆಂಕೊ ವಿರುದ್ಧ ಮೇಲುಗೈ ಸಾಧಿಸಿದರು. ಎದುರಾಳಿಗೆ ಒಂದೂ ಅಂಕ ಬಿಟ್ಟುಕೊಡದೆ ತಾಂತ್ರಿಕ ಆಧಾರದಲ್ಲಿ ಗೆದ್ದರು. ಅದಕ್ಕೂ ಮೊದಲು 10-4 ಅಂತರದಲ್ಲಿ ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೋವ್ ಅವರನ್ನು ಮಣಿಸಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದೀಪಕ್ (86 ಕೆಜಿ) ಇಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರೂ ನಂತರ 4–6ರಿಂದ ಚೀನಾದ ಜುಶೆನ್ ಲಿನ್ ಅವರಿಗೆ ಮಣಿದರು. ದೀಪಕ್ ಒಲಿಂಪಿಕ್ಸ್ ಭವಿಷ್ಯ ಈಗ ಚೀನಿ ಕುಸ್ತಿಪಟುವಿನ ಕೈಯಲ್ಲಿದೆ. ಜುಶೆನ್ ಫೈನಲ್ ತಲುಪಿದರೆ ರಿಪಿಚೇಜ್ ಮೂಲಕ ಕಂಚಿನ ಪದಕಕ್ಕೆ ಸ್ಪರ್ಧಿಸಲು ಭಾರತದ ಕುಸ್ತಿಪಟುವಿಗೆ ಅವಕಾಶ ಸಿಗಲಿದೆ.
65 ಕೆ.ಜಿ ವಿಭಾಗದಲ್ಲಿ ಸುಜಿತ್ 3–2ರಿಂದ ಉಜ್ಬೇಕಿಸ್ತಾನದ ಉಮಿಡ್ಜಾನ್ ಜಲೋಲೋವ್ ವಿರುದ್ಧ ಗೆದ್ದರು. ನಂತರದಲ್ಲಿ ಕೊರಿಯಾದ ಜುನ್ಸಿಕ್ ಯುನ್ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಎಂಟರ ಘಟ್ಟ ಪ್ರವೇಶಿಸಿದರು.
74 ಕೆ.ಜಿ ವಿಭಾಗದಲ್ಲಿ ಅಹ್ಲಾವತ್ ಅವರು 1-3ರ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 5–3ರಿಂದ ಮೊಲ್ಡೊವಾದ ವಾಸಿಲೆ ಡೈಕಾನ್ ವಿರುದ್ಧ ಜಯಿಸಿದರು. ನಂತರದ ಪಂದ್ಯದಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಆಸ್ಟ್ರಿಯಾದ ಸೈಮನ್ ಮಾರ್ಚ್ಲ್ ಅವರನ್ನು ಮಣಿಸಿ ಮುನ್ನಡೆದರು.
ದಿನದ ಮೊದಲ ಪಂದ್ಯದಲ್ಲಿ ದೀಪಕ್ (97 ಕೆಜಿ) ಮತ್ತು ಅನುಭವಿ ಸುಮಿತ್ ಮಲಿಕ್ (125 ಕೆಜಿ) ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ನಿರ್ಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.