ADVERTISEMENT

ಡಿ.6ರಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಕುಸ್ತಿ: ಅಮನ್ ಹಲವು ಕುಸ್ತಿ ತಾರೆಗಳು ಭಾಗಿ

ಅಮನ್‌ ಸೆಹ್ರಾವತ್‌ ಸೇರಿ ಹಲವು ಕುಸ್ತಿ ತಾರೆಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:05 IST
Last Updated 8 ನವೆಂಬರ್ 2024, 16:05 IST
ಅಮನ್‌ ಸೆಹ್ರಾವತ್‌
ಅಮನ್‌ ಸೆಹ್ರಾವತ್‌   

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಕುಸ್ತಿ ತಾರೆ ಅಮನ್‌ ಸೆಹ್ರಾವತ್‌ ಅವರು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಗಣದಲ್ಲಿ ಡಿಸೆಂಬರ್‌ 6ರಿಂದ 8ರವರೆಗೆ ನಡೆಯುವ ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಕರ್ನಾಟಕ ಕುಸ್ತಿ ಸಂಸ್ಥೆಯ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಅಂಗಸಂಸ್ಥೆ 25 ರಾಜ್ಯ ಘಟಕಗಳಿಂದ ಮತ್ತು ರೈಲ್ವೆ ಕ್ರೀಡಾ ಪ್ರಚಾರ ಮಂಡಳಿ (ಆರ್‌ಎಸ್‌ಪಿಬಿ) ಹಾಗೂ ಸೇವಾ ಕ್ರೀಡಾ ಪ್ರಚಾರ ಮಂಡಳಿ (ಎಸ್‌ಎಸ್‌ಪಿಬಿ)ಯಿಂದ 1000ಕ್ಕೂ ಹೆಚ್ಚು ಕುಸ್ತಿಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಅಮನ್‌ ಅವರೊಂದಿಗೆ ವಿಶ್ವ ಕುಸ್ತಿ ಚಾಂಪಿಯನ್ (20 ವರ್ಷದೊಳಗಿನವರ) ಅಂತಿಮ್‌ ಪಂಘಲ್, 2019ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ದೀಪಕ್ ಪೂನಿಯಾ, ವಿಶ್ವ ಚಾಂಪಿಯನ್ (23 ವರ್ಷದೊಳಗಿನವರ) ರಿತಿಕಾ ಹೂಡಾ, ಒಲಿಂಪಿಯನ್ ಸೋನಮ್ ಮಲಿಕ್, ರಾಧಿಕಾ, ಮನೀಶಾ ಭಾನ್ವಾಲಾ, ಬಿಪಾಶಾ, ಪ್ರಿಯಾ ಉದಿತ್, ಚಿರಾಗ್, ಸುನಿಲ್‌ ಕುಮಾರ್‌ ಮತ್ತು ನರೀಂದರ್ ಚೀಮಾ ಕಣಕ್ಕೆ ಇಳಿಯುವರು.

ADVERTISEMENT

‘ಕರ್ನಾಟಕದಲ್ಲಿ ಮೊದಲ ಬಾರಿ ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ ಆಯೋಜಿಸಲು ಡಬ್ಲ್ಯುಎಫ್‌ಐ ಹೆಮ್ಮೆಪಡುತ್ತದೆ. ಭಾರತದ ಎಲ್ಲ ಅಗ್ರ ಕುಸ್ತಿಪಟುಗಳು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ.   ಕರ್ನಾಟಕ ಕುಸ್ತಿ ಸಂಸ್ಥೆಯೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ’ ಎಂದು ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮಾನತುಗೊಂಡಿದ್ದ ಡಬ್ಲ್ಯುಎಫ್‌ಐನಿಂದ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜನೆಯನ್ನು ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಪತಿ ಸತ್ಯವರ್ತ್ ಕಡಿಯಾನ್ ಇತ್ತೀಚೆಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ, ನ್ಯಾಯಾಲಯವು ಚಾಂಪಿಯನ್‌ಷಿಪ್‌ಗೆ ಅವಕಾಶ ನೀಡಿ, ಫಲಿತಾಂಶವನ್ನು ರ‍್ಯಾಂಕಿಂಗ್‌ಗೆ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಿಗೆ ಭಾರತದ ಪ್ರವೇಶಗಳನ್ನು ನಿರ್ಧರಿಸಲು ‌ಪರಿಗಣಿಸಬಾರದು ಎಂದು ಹೇಳಿತ್ತು.

‘ರಾಷ್ಟ್ರೀಯ ಸ್ಪರ್ಧೆಯ ಫಲಿತಾಂಶಗಳನ್ನು ತಿರಸ್ಕರಿಸಲು ಹೇಗೆ ಸಾಧ್ಯ? ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಡಬ್ಲ್ಯುಎಫ್‌ಐ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.