ಅಸ್ತಾನ, ಕಜಕಸ್ತಾನ: ಭಾರತದ ಅಮನ್ ಸೆಹ್ರಾವತ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಪುರುಷರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್ ಫೈನಲ್ ಬೌಟ್‌ನಲ್ಲಿ ಕಿರ್ಗಿಸ್ತಾನದ ಅಲ್ಮಾಜ್ ಸ್ಮನ್‌ಬೆಕೊವ್ ಅವರನ್ನು ಚಿತ್ ಮಾಡಿ ದರು. ಭಾರತದ ಕುಸ್ತಿಪಟುವಿಗೆ 9–4 ಪಾಯಿಂಟ್ಸ್‌ನಿಂದ ಗೆಲುವು ಒಲಿಯಿತು.
ಈ ಬಾರಿಯ ಚಾಂಪಿಯನ್‌ಷಿಪ್ ಭಾರತಕ್ಕೆ ದಕ್ಕಿದ ಮೊದಲ ಚಿನ್ನದ ಪದಕ ಇದು. ತಂಡವು ಇದುವರೆಗೆ ಒಟ್ಟು 12 ಪದಕಗಳನ್ನು ಜಯಿಸಿದೆ.
ಸೆಮಿಫೈನಲ್ ಬೌಟ್‌ನಲ್ಲಿ ಅಮನ್ 7–4ರಿಂದ ಚೀನಾದ ವನಾಹೊ ಜೊ ಅವರನ್ನು ಪರಾಭವಗೊಳಿಸಿದ್ದರು.
ಕಳೆದ ವರ್ಷ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಅಮನ್ ಅವರಿಗೆ ಎಂಟರಘಟ್ಟದಲ್ಲಿ 7–1ರಿಂದ ಜಪಾನ್‌ನ ರಿಕುಟೊ ಅರಾಯಿ ಎದುರು ಜಯ ಒಲಿದಿತ್ತು.
2023ರ ಋತುವಿನಲ್ಲಿ ಅಮನ್ ಎರಡನೇ ಬಾರಿ ‘ಪೋಡಿಯಂ ಫಿನಿಶ್’ ಮಾಡಿದರು. ಫೆಬ್ರುವರಿಯಲ್ಲಿ ನಡೆದ ಜಗ್ರೆಬ್ ಓಪನ್ ಟೂರ್ನಿಯಲ್ಲಿ ಅವರು ಕಂಚು ಜಯಿಸಿದ್ದರು.
ದೀಪಕ್ ಕುಕ್ನಾ ಹಾಗೂ ದೀಪಕ್ ನೆಹ್ರಾ ಕಂಚಿನ ಪದಕದ ಸುತ್ತು ಪ್ರವೇಶಿಸಿದರು.
ಕುಕ್ನಾ ಹಾಗೂ ನೆಹ್ರಾ ಕ್ರಮವಾಗಿ 79 ಮತ್ತು 97 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದು, ಸೆಮಿಫೈನಲ್ ಬೌಟ್‌ಗಳಲ್ಲಿ ಸೋಲು ಅನುಭವಿಸಿದರು.
ಅನುಜ್ ಕುಮಾರ್ (65 ಕೆಜಿ) ಮತ್ತು ಮುಲಾಯಂ ಯಾದವ್ (70 ಕೆಜಿ) ಪದಕದ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು.
ಅಂತಿಮ್‌ಗೆ ಬೆಳ್ಳಿ: ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್ ಪಂಘಲ್ ಅವರು ಬೆಳ್ಳಿ ಪದಕ ಗಳಿಸಿದರು. ಬುಧವಾರ ನಡೆದ ಫೈನಲ್‌ನಲ್ಲಿ ಅವರು ಜಪಾನ್‌ನ ಅಕಾರಿ ಫುಜಿನಾಮಿ ಎದುರು ಸೋಲನುಭವಿಸಿದರು.
ಅನ್ಶು ಮಲಿಕ್ (57 ಕೆಜಿ), ಸೋನಮ್ ಮಲಿಕ್ (62 ಕೆಜಿ), ಮನೀಷಾ (65 ಕೆಜಿ) ಮತ್ತು ರಿತಿಕಾ (72 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.