ADVERTISEMENT

Paris Olympics: ಬಾಕ್ಸಿಂಗ್‌- ಅಮಿತ್ ಪಂಘಲ್‌ಗೆ ಒಲಿಂಪಿಕ್‌ ಟಿಕೆಟ್‌

ವಿಶ್ವ ಬಾಕ್ಸಿಂಗ್‌ ಕ್ವಾಲಿಫಿಕೇಷನ್ ಟೂರ್ನಿ: ಚೀನಾ ಎದುರಾಳಿ ಮೇಲೆ ಗೆಲುವು

ಪಿಟಿಐ
Published 2 ಜೂನ್ 2024, 13:18 IST
Last Updated 2 ಜೂನ್ 2024, 13:18 IST
ಅಮಿತ್‌ ಪಂಘಲ್
ಪಿಟಿಐ ಚಿತ್ರ (ಸಂಗ್ರಹ)
ಅಮಿತ್‌ ಪಂಘಲ್ ಪಿಟಿಐ ಚಿತ್ರ (ಸಂಗ್ರಹ)   

ಬ್ಯಾಂಕಾಕ್‌: ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಿದ ಬಾಕ್ಸರ್‌ ಅಮಿತ್‌ ಪಂಘಲ್, ಎರಡನೇ ವಿಶ್ವ ಕ್ವಾಲಿಫಿಕೇಷನ್ ಟೂರ್ನಿಯಲ್ಲಿ ಭಾನುವಾರ 51 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯವನ್ನು ಗೆಲ್ಲುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದರು.

ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಪಂಘಲ್ ಕಠಿಣ ಹೋರಾಟದಲ್ಲಿ 5–0 ಯಿಂದ ಚೀನಾದ ಚುವಾಂಗ್‌ ಲಿಯು ಅವರನ್ನು ಎಂಟರ ಘಟ್ಟದಲ್ಲಿ ಸೋಲಿಸಿ ಪ್ಯಾರಿಸ್‌ ಟಿಕೆಟ್‌ ಖಚಿತಪಡಿಸಿಕೊಂಡರು. ಮುಂದಿನ ತಿಂಗಳ (ಜುಲೈ) 26 ರಿಂದ ಆಗಸ್ಟ್‌ 11ರವರೆಗೆ ಒಲಿಂ‍ಪಿಕ್‌ ಕ್ರೀಡೆಗಳು ನಡೆಯಲಿವೆ.

ನಿಶಾಂತ್‌ ದೇವ್‌ (71 ಕೆ.ಜಿ), ನಿಖತ್ ಝರೀನ್ (50 ಕೆ.ಜಿ), ಪ್ರೀತಿ ಪವಾರ್‌ (54 ಕೆ.ಜಿ) ಮತ್ತು ಲವ್ಲೀನಾ ಬೊರ್ಗೊಹೈನ್ (75 ಕೆ.ಜಿ) ಅವರು ಒಲಿಂಪಿಕ್ಸ್‌ಗೆ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡಿರುವ ಇತರ ಬಾಕ್ಸರ್‌ಗಳಾಗಿದ್ದಾರೆ.

ADVERTISEMENT

ಪಂಘಲ್ ಅವರಿಗೆ ಈ ಕೂಟವೊಂದೇ ಅರ್ಹತೆ ಪಡೆಯಲು ಇದ್ದ ಏಕೈಕ ಅವಕಾಶವಾಗಿದ್ದು, ಅದನ್ನು ಚೆನ್ನಾಗಿಯೇ ಬಳಸಿಕೊಂಡರು. ಒಲಿಂಪಿಕ್ಸ್ ದಾರಿ ಅವರಿಗೆ ಸುಲಭವಾಗಿರಲಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ದೀಪಕ್ ಭೋರಿಯಾ ಅವರು ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಮೌಲ್ಯಮಾಪನ ವ್ಯವಸ್ಥೆಯಲ್ಲಿ ಅಮಿತ್ ಅವರಿಗಿಂತ ಮುಂದಿದ್ದ ಕಾರಣ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು ಮೊದಲ ಎರಡು ಕ್ವಾಲಿಫಿಕೇಷನ್ ಕೂಟಗಳಲ್ಲಿ ಭಾಗವಹಿಸಿದ್ದರು.

ಟೋಕಿಯೊ ಒಲಿಂಪಿಕ್ಸ್ ನಂತರ ಹರಿಯಾಣದ ಬಾಕ್ಸರ್‌ ಪಂಘಲ್ ಭಾಗವಹಿಸಿದ ಮಹತ್ವದ ಕೂಟ ಎಂದರೆ 2022ರ ಕಾಮನ್ವೆಲ್ತ್ ಗೇಮ್ಸ್‌. ಅದರಲ್ಲಿ ಅವರು ಚಿನ್ನ ಗೆದ್ದಿದ್ದರು. ಈ ವರ್ಷದ ಆರಂಭದಲ್ಲಿ ಪ್ರತಿಷ್ಠಿತ ಸ್ಟ್ರಾಂಡ್ಜ ಸ್ಮಾರಕ ಟೂರ್ನಿಯಲ್ಲೂ ಅವರು ವಿಜೇತರಾಗಿದ್ದರು.

ಮೂರು ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್‌ ಪದಕ ವಿಜೇತ ಅಮಿತ್‌ ಪಂಘಲ್– ಲಿಯು ಕ್ವಾರ್ಟರ್‌ಫೈನಲ್ ಹೋರಾಟ ಆರಂಭದಲ್ಲಿ ಅಂಥ ತೀವ್ರತೆ ಪಡೆಯಲಿಲ್ಲ. ಒಬ್ಬರು ಇನ್ನೊಬ್ಬರ ಸಾಮರ್ಥ್ಯ ಪರೀಕ್ಷೆ ನಡೆಸುವಂತೆ ಕಂಡಿತು. ನಿಮಿಷದ ನಂತರ ಲಿಯು ದಾಳಿಗಿಳಿದರು. ಅಮಿತ್‌ ಅವರ ಎತ್ತರ ಕಡಿಮೆಯಿದ್ದರೂ ಕೆಲಹೊತ್ತಿನಲ್ಲಿ ಲಯ ಕಂಡುಕೊಂಡರು. 1–4ರಲ್ಲಿ ಹಿಂದೆಯಿದ್ದ ಪಂಘಲ್ ಎರಡನೇ ಸುತ್ತಿನಲ್ಲಿ ತಂತ್ರ ಬದಲಾಯಿಸಿ ಆಕ್ರಮಣಕ್ಕೆ ಒತ್ತು ನೀಡಿದರು. ಚೀನಾದ ಎದುರಾಳಿ ಪ್ರತಿದಾಳಿಗಿಳಿದರೂ, ವಿಚಲಿತರಾಗದೇ ಅಮಿತ್‌ ಸಕಾರಾತ್ಮಕವಾಗಿ ಪ್ರಹಾರಗಳನ್ನು ನಡೆಸಿ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿದರು. ಇದು ಐದೂ ಮಂದಿ ತೀರ್ಪುಗಾರರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.