ಕಾಮನ್‌ವೆಲ್ತ್ ಕೂಟದಲ್ಲಿ ಅಮೋಘ ಸಾಧನೆ
ಬರ್ಮಿಂಗ್‌ಹ್ಯಾಂನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಭಾರತದ ಕ್ರೀಡಾಪಟುಗಳ ಉತ್ತಮ ಪ್ರದರ್ಶನ ಈ ವರ್ಷ ದೇಶದ ಕ್ರೀಡಾ ಕ್ಷೇತ್ರದಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಕಾಮನ್‌ವೆಲ್ತ್ ಕೂಟ ಜುಲೈ 28 ರಿಂದ ಆಗಸ್ಟ್ 8ರ ವರೆಗೆ ಆಯೋಜನೆಯಾಗಿತ್ತು. 200ಕ್ಕೂ ಅಧಿಕ ಕ್ರೀಡಾಪಟುಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಭಾರತ ತಂಡ, ಒಟ್ಟು 61 ಪದಕಗಳನ್ನು ಬಗಲಿಗೆ ಹಾಕಿಕೊಂಡಿತ್ತು. ವೇಟ್‌ಲಿಫ್ಟರ್ ಸಂಕೇತ್ ಸರ್ಗರ್ ಅವರು ಬೆಳ್ಳಿ ಜಯಿಸುವ ಮೂಲಕ ಭಾರತದ ಪದಕದ ಬೇಟೆ ಆರಂಭಿಸಿದ್ದರು. ಮೀರಾಬಾಯಿ ಚಾನು ಮೊದಲ ಚಿನ್ನ ಗೆದ್ದುಕೊಟ್ಟಿದ್ದರು.
* 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಗೆದ್ದುಕೊಂಡಿದ್ದ ಭಾರತ ತಂಡ
* ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಕೆನಡಾ ಬಳಿಕ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು
* ಆರ್ಚರಿ ಮತ್ತು ಶೂಟಿಂಗ್ ಕ್ರೀಡೆಗಳು ಇಲ್ಲದಿದ್ದರೂ ಭಾರತದ ಒಟ್ಟಾರೆ ಪ್ರದರ್ಶನ ಉತ್ತಮವಾಗಿತ್ತು
* ಕುಸ್ತಿ, ವೇಟ್‌ಲಿಫ್ಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್ ಮತ್ತು ಟೇಬಲ್ ಟೆನಿಸ್‌ನಲ್ಲಿ ಭಾರತ ಹೆಚ್ಚು ಚಿನ್ನ ಗೆದ್ದುಕೊಂಡಿತ್ತು
* ನೀರಜ್ ಚೋಪ್ರಾ ಅವರ ಅನುಪಸ್ಥಿತಿಯಲ್ಲೂ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಜಯಿಸಿದ್ದು ವಿಶೇಷ
* ನವದೆಹಲಿ ಕೂಟ ಹೊರತುಪಡಿಸಿದರೆ ಅಥ್ಲೆಟಿಕ್ಸ್‌ನಲ್ಲಿ ಭಾರತದ ಶ್ರೇಷ್ಠ ಸಾಧನೆ
* 3 ಚಿನ್ನ, 1 ಬೆಳ್ಳಿ ಸೇರಿದಂತೆ ನಾಲ್ಕು ಪದಕ ಜಯಿಸಿದ್ದ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್, ಭಾರತದ ಯಶಸ್ವಿ ಕ್ರೀಡಾಪಟು ಎನಿಸಿಕೊಂಡಿದ್ದರು
*ಭಾರತದ ಹೊರಗೆ ನಡೆದ ಕಾಮನ್‌ವೆಲ್ತ್ ಕೂಟದಲ್ಲಿ ಮೂರನೇ ಹಾಗೂ ಒಟ್ಟಾರೆಯಾಗಿ ನಾಲ್ಕನೇ ಅತ್ಯುತ್ತಮ ಪ್ರದರ್ಶನ ಈ ಬಾರಿ ಮೂಡಿಬಂದಿತ್ತು.
* ಭಾರತದ ಶ್ರೇಷ್ಠ ಸಾಧನೆ 2010ರ ನವದೆಹಲಿ ಕಾಮನ್‌ವೆಲ್ತ್ ಕೂಟದಲ್ಲಿ ದಾಖಲಾಗಿತ್ತು. ಅಲ್ಲಿ 38 ಚಿನ್ನ ಸೇರಿದಂತೆ 101 ಪದಕಗಳು ಬಂದಿದ್ದವು.
ಲಾನ್‌ಬಾಲ್ಸ್‌ನಲ್ಲಿ ಪದಕ
ಭಾರತ ಮಹಿಳಾ ತಂಡದವರು ಕಾಮನ್‌ವೆಲ್ತ್ ಕೂಟದ ಲಾನ್‌ಬಾಲ್ಸ್ ಕ್ರೀಡೆಯಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಭಾರತದಲ್ಲಿ ಅಷ್ಟೊಂದು ಜನಪ್ರಿಯತೆ ಹೊಂದಿಲ್ಲದ ಲಾನ್ ಬಾಲ್ಸ್ ಕ್ರೀಡೆಯಲ್ಲಿ ಲಭಿಸಿದ ಮೊದಲ ಪದಕ ಇದಾಗಿತ್ತು. ಲವ್ಲಿ ಚೌಬೆ, ಪಿಂಕಿ, ನಯನ್ಮೊನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕೆ ಅವರನ್ನೊಳಗೊಂಡ ಭಾರತ ಮಹಿಳಾ ತಂಡದವರು ಭಾರತ ಫೈನಲ್‌ನಲ್ಲಿ 17–10 ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದರು. ಪುರುಷರ ತಂಡದವರು ಮೊದಲ ಬಾರಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು.
ಏಷ್ಯನ್ ಕ್ರೀಡಾಕೂಟ ಮುಂದಕ್ಕೆ
ಈ ವರ್ಷ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು ಕೋವಿಡ್ ಕಾರಣದಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. 2022ರ ಏಷ್ಯನ್ ಕ್ರೀಡಾಕೂಟವನ್ನು ಚೀನಾದ ಹಾಂಗ್‌ಜೌ ನಗರದಲ್ಲಿ ಸೆ.10 ರಿಂದ 25ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಆ ನಗರದಲ್ಲಿ ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿದ್ದ ಕಾರಣ ಕ್ರೀಡಾಕೂಟವನ್ನು ಮುಂದೂಡಲು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ತೀರ್ಮಾನಿಸಿತ್ತು. ಈ ಕೂಟ ಅದೇ ನಗರದಲ್ಲಿ 2023ರ ಸೆ.23 ರಿಂದ ಅ.8ರ ವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.