ADVERTISEMENT

ವಿಶ್ವ ಅಥ್ಲೆಟಿಕ್ಸ್‌ | ಜಾವೆಲಿನ್‌ ಥ್ರೊ: ಫೈನಲ್‌ ಪ‍್ರವೇಶಿಸಿದ ಅನ್ನುರಾಣಿ

ಭಾರತದ ಮಿಕ್ಸೆಡ್‌ ರಿಲೇ ತಂಡಕ್ಕೆ ಏಳನೇ ಸ್ಥಾನ

ಪಿಟಿಐ
Published 30 ಸೆಪ್ಟೆಂಬರ್ 2019, 20:15 IST
Last Updated 30 ಸೆಪ್ಟೆಂಬರ್ 2019, 20:15 IST
ಭಾರತದ ಅನ್ನು ರಾಣಿ, ಜಾವೆಲಿನ್‌ ಎಸೆಯಲು ಮುಂದಾದ ಕ್ಷಣ – ರಾಯಿಟರ್ಸ್‌ ಚಿತ್ರ
ಭಾರತದ ಅನ್ನು ರಾಣಿ, ಜಾವೆಲಿನ್‌ ಎಸೆಯಲು ಮುಂದಾದ ಕ್ಷಣ – ರಾಯಿಟರ್ಸ್‌ ಚಿತ್ರ   

ದೋಹಾ: ಅಮೋಘ ಪ್ರದರ್ಶನ ನೀಡಿದ ಭಾರತದ ಅನ್ನುರಾಣಿ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಜಾವೆಲಿನ್‌ ಥ್ರೊ ಸ್ಪರ್ಧೆಯಲ್ಲಿ ಸೋಮವಾರ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು. ಜೊತೆಗೆ ಫೈನಲ್‌ಗೂ ಲಗ್ಗೆ ಇಟ್ಟರು.

27 ವರ್ಷದ ಅನ್ನು, ‘ಎ’ ಗುಂಪಿನ ಅರ್ಹತಾ ಸುತ್ತನ್ನು 57.05 ಮೀ.ನೊಡನೆ ಆರಂಭಿಸಿದರು. ನಂತರ ಭರ್ಚಿಯನ್ನು 62.43 ಮೀ. ದೂರಕ್ಕೆ ಎಸೆದು, ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಅವರು ಹಿಂದಿನ ದಾಖಲೆಯನ್ನು (62.34 ಮೀ.) ಮಾರ್ಚ್‌ನಲ್ಲಿ ಪಟಿಯಾಲಾದಲ್ಲಿ ನಡೆದಿದ್ದ ಫೆಡರೇಷನ್‌ ಕಪ್‌ ಟೂರ್ನಿಯ ವೇಳೆ ಸ್ಥಾಪಿಸಿದ್ದರು. ಕೊನೆಯ ಯತ್ನದಲ್ಲಿ 60.50 ಮೀ. ದೂರ ದಾಖಲಿಸಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದರು.

ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಭಾರ ತದ ಮೊದಲ ಜಾವೆಲಿನ್‌ ಥ್ರೊ ಸ್ಪರ್ಧಿ ಎಂಬ ಹಿರಿಮೆಗೂ ಭಾಜನರಾದರು.

ADVERTISEMENT

ಏಷ್ಯನ್‌ ಗೇಮ್ಸ್‌ ಚಾಂಪಿಯನ್‌, ಚೀನಾದ ಲಿಯು ಶಿಯಿಂಗ್‌ (63.48) ಮೊದಲನೇ, ಸ್ಲೊವೇನಿಯಾ ರತೇಜ್‌ ಮಾರ್ಟಿನಾ (62.87 ಮೀ.) ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರು.

63.50 ಮೀ. ಅರ್ಹತಾ ಮಟ್ಟ ವಾಗಿದ್ದು, ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದ 12 ಮಂದಿ ಫೈನಲ್‌ಗೆ ತೇರ್ಗಡೆಗೊಳ್ಳುವರು. ಮಂಗಳವಾರ ಫೈನಲ್‌ ನಡೆಯಲಿದೆ.

ಭಾರತ ಮಿಕ್ಸೆಡ್‌ ರಿಲೇ ತಂಡಕ್ಕೆ 7ನೇ ಸ್ಥಾನ: ಭಾರತ ತಂಡ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 4X400 ಮೀಟರ್‌ ಮಿಕ್ಸೆಡ್‌ ರಿಲೇ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆಯಿತು. ಇದು ಈ ಋತುವಿನಲ್ಲಿ ಭಾರತ ತಂಡದ ಶ್ರೇಷ್ಠ ಪ್ರದರ್ಶನವಾಗಿದೆ. ಮುಹಮ್ಮದ್‌ ಅನಾಸ್‌, ವಿ.ಕೆ.ವಿಸ್ಮಯಾ, ಜಿಸ್ನಾ ಮ್ಯಾಥ್ಯು ಹಾಗೂ ಟಾಮ್‌ ನಿರ್ಮಲ್‌ ನೋಹ್‌ ಅವರಿದ್ದ ತಂಡ ಭಾನುವಾರ 3 ನಿಮಿಷ 15.77 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿತು. ಫೈನಲ್ಸ್‌ನಲ್ಲಿ ಒಟ್ಟು ಎಂಟು ರಾಷ್ಟ್ರಗಳು ಸ್ಪರ್ಧಿಸಿದ್ದವು.

ಹೋದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಾಗ ಈ ತಂಡ 3 ನಿಮಿಷ 15.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿತ್ತು.

ಅಮೆರಿಕ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿತು. 3 ನಿಮಿಷ 9.34 ಸೆಕೆಂಡುಗಳಲ್ಲಿ ಅದು ಗುರಿ ತಲುಪಿತು. ಇದರೊಂದಿಗೆ ಈ ವಿಭಾಗದಲ್ಲಿ ತನ್ನದೇ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು ಸುಧಾರಿಸಿಕೊಂಡಿತು. ಇದೇ ಚಾಂಪಿಯನ್‌ಷಿಪ್‌ನ ಹೀಟ್‌ನಲ್ಲಿ ತಂಡ 3 ನಿಮಿಷ 12.42 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿತ್ತು. ಜಮೈಕಾ (3 ನಿಮಿಷ 11.78 ಸೆಕೆಂಡುಗಳು) ಹಾಗೂ ಬಹರೇನ್‌ (3 ನಿಮಿಷ, 11.82 ಸೆಕೆಂಡುಗಳು) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಹೀಟ್ಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಭಾರತ ತಂಡ, 3 ನಿಮಿಷ 16.14 ಸೆಕೆಂಡುಗಳೊಂದಿಗೆ ಫೈನಲ್ಸ್‌ಗೆ ಅರ್ಹತೆ ಪಡೆದಿತ್ತು. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡಿತ್ತು.

ಚೀನಾ ಏಕಸ್ವಾಮ್ಯ: ಮಹಿಳೆಯರ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಚೀನಾ ಸ್ಪರ್ಧಿಗಳು, 32 ಡಿಗ್ರಿ ಸೆಲ್ಷಿಯಸ್‌ ತಾಪಮಾನ ಮತ್ತು ಸೆಕೆಯನ್ನು ತಡೆದುಕೊಂಡು ಮೂರೂ ಪದಕಗಳನ್ನು ಬಾಚಿಕೊಂಡರು. ಲಿಯು ಹಾಂಗ್‌ (1ಗಂ.32ನಿ.53 ಸೆ.) ಚಿನ್ನ ಗೆದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಈ ಸ್ಪರ್ಧೆ ಗೆಲ್ಲುತ್ತಿರುವುದು ಇದು ಮೂರನೇ ಬಾರಿ.

ಕ್ವಿಯಾಂಗ್‌ ಷೆನ್‌ಜೀ 17 ಸೆಕೆಂಡು ಅಂತರದಿಂದ ಹಿಂದೆಬಿದ್ದು ಬೆಳ್ಳಿ ಪದಕ ಗೆದ್ದುಕೊಂಡರು. ಯಾಂಗ್‌ ಲಿಯುಜಿಂಗ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.